Rape
Rape

ಅತ್ಯಾಚಾರ ಪ್ರಕರಣ: ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಯಾದ ಮಾತ್ರಕ್ಕೆ ಜಾಮೀನು ನೀಡಲಾಗದು ಎಂದ ಕರ್ನಾಟಕ ಹೈಕೋರ್ಟ್‌

ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಯು ಜೀವವಾಧಿ ಶಿಕ್ಷೆಗೂ ಗುರಿಯಾಗಬಹುದಾಗಿದೆ. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕಾಗಿ ಆರೋಪಿಗೆ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಉದ್ದೇಶ ಇದೆ, ಕೋವಿಡ್‌ನಿಂದ ಪ್ರಕರಣ ವಿಚಾರಣೆ ತಡವಾಗುತ್ತಿದೆ ಎಂಬುದು ಜಾಮೀನು ನೀಡಲು ಆಧಾರವಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ. ಆ ಮೂಲಕ ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಅಪರಾಧವು ಗಂಭೀರ ಸ್ವರೂಪದ್ದಾಗಿದ್ದು, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆರೋಪಿಗೆ ಜಾಮೀನು ಮಂಜೂರು ಮಾಡಲಾಗದು ಎಂದು ನ್ಯಾ. ಶಿವಶಂಕರ್‌ ಅಮರಣ್ಣವರ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

“ಅರ್ಜಿದಾರರು ಬಿ.ಎ-ಬಿ.ಇಡಿ ಪದವೀಧರರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆ ಶೀಘ್ರದಲ್ಲಿ ನಡೆಯಲಿದೆ ಎಂಬುದು ಜಾಮೀನು ಪಡೆಯಲು ಆಧಾರವಾಗದು. ಸಾಂಕ್ರಾಮಿಕ ಹರಡಿದ್ದು ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಯಲ್ಲಿರುವುದರಿಂದ ಜಾಮೀನು ಕೋರುವುದು ಸಕಾರಣವಲ್ಲ. ಆರೋಪವು ಗಂಭೀರ ಸ್ವರೂಪದ್ದಾಗಿದ್ದು, (ಅದು) ಸಾಬೀತಾದಾರೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಆರೋಪಿಯು ಜಾಮೀನು ಪಡೆಯಲು ಸಮರ್ಥ ಆಧಾರಗಳನ್ನು ನೀಡಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ನ್ಯಾಯಾಲಯ ಜೈಲು ಅಧಿಕಾರಿಗಳ ಅನುಮತಿ ಪಡೆದು ಪರೀಕ್ಷೆ ಬರೆಯಲು ಆರೋಪಿ ಸ್ವತಂತ್ರರು ಎಂದು ನ್ಯಾಯಾಲಯ ಹೇಳಿದೆ.

ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವನ್ನು ಅರ್ಜಿದಾರರು ಎದುರಿಸುತ್ತಿದ್ದಾರೆ. 2019ರಲ್ಲಿ ಸಂತ್ರಸ್ತೆಯು ವಿವಾಹವಾಗಿದ್ದು, ಪತಿಯೊಂದಿಗೆ ಜೀವಿಸುತ್ತಿದ್ದರು. ತಿಂಗಳ ಬಳಿಕ ಆರೋಪಿ ಹೊಲಿಯಪ್ಪ ಲೈಂಗಿಕ ಸಂಪರ್ಕ ಹೊಂದುವಂತೆ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. 2019ರ ಮಾರ್ಚ್‌ 28ರಂದು ಸಂತ್ರಸ್ತೆಯು ಬಹಿರ್ದೆಸೆಗೆ ತೆರಳಿದ್ದಾಗ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

ಇದರ ಆಧಾರದಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಿಗೇ ಆರೋಪಿಯು ಕಳೆದ ವರ್ಷದ ಹೈಕೋರ್ಟ್‌ನಲ್ಲಿ ಜಾಮೀನು ಮನವಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ವಜಾ ಮಾಡಿತ್ತು. ಈಗ ಮತ್ತೆ ಆರೋಪಿ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
“ಪುರುಷ-ಪತ್ನಿಯ ನಡುವಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎನ್ನಬಹುದೇ?” ಚರ್ಚೆಗೆ ಗ್ರಾಸ ಒದಗಿಸಿದ ಸಿಜೆಐ ಪ್ರಶ್ನೆ

ಮೊದಲ ಜಾಮೀನು ಮನವಿಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿಲ್ಲ. ಅದು ಒಪ್ಪಿತ ಲೈಂಗಿಕ ಕ್ರಿಯೆಯಾಗಿತ್ತು ಎಂದು ಆರೋಪಿ ಹೇಳಿದ್ದರು. ಈಗ ತಾನು ಬಿ.ಎ-ಬಿ.ಇಡಿ ಪದವೀಧರನಾಗಿದ್ದು, ಶಿಕ್ಷಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ದೇಶ ಹೊಂದಿದ್ದೇನೆ. ತನ್ನನ್ನು ಜೈಲಿನಲ್ಲಿಟ್ಟರೆ ಸಿದ್ಧತೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದರು. ಕೋವಿಡ್‌ ಮತ್ತು ಅದರ ಮಾರ್ಗಸೂಚಿಗಳು ಜಾರಿಯಲ್ಲಿರುವುದರಿಂದ ಪ್ರಕರಣದ ವಿಚಾರಣೆ ತಡವಾಗಬಹುದು ಎಂದು ವಾದಿಸಿದ್ದು, ಅದರ ಆಧಾರದಲ್ಲಿ ಜಾಮೀನು ಕೋರಿದ್ದಾರೆ.

ಇದಕ್ಕೆ ಸರ್ಕಾರಿ ವಕೀಲರು ವಿರೋಧಿಸಿದ್ದು, ಜಾಮೀನು ಮನವಿ ತಿರಸ್ಕರಿಸುವಂತೆ ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಆರೋಪಿಸಲಾದ ಅಪರಾಧ ಹೇಯವಾಗಿರುವುದರಿಂದ ಜಾಮೀನು ಮಂಜೂರು ಮಾಡಲಾಗದು ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com