ಕರವೇ ಅಧ್ಯಕ್ಷ ಸೇರಿ 29 ಕಾರ್ಯಕರ್ತರಿಗೆ ದೇವನಹಳ್ಳಿ ನ್ಯಾಯಾಲಯ ಜಾಮೀನು ಮಂಜೂರು: ನಾಳೆ ಬಿಡುಗಡೆ ಸಾಧ್ಯತೆ

ಪ್ರಕರಣದ ಸಂಬಂಧ ನ್ಯಾಯಾಲಯ ಸರ್ಕಾರಿ ಅಭಿಯೋಜಕರ ಅಭಿಪ್ರಾಯ ಕೇಳಿತ್ತು. ಜ. 2ರಂದು ಸರ್ಕಾರಿ ಅಭಿಯೋಜಕರು ವರದಿ ಸಲ್ಲಿಸಿದ್ದರು. ತೀರ್ಪನ್ನು ನ್ಯಾಯಾಲಯ ಜ. 6ಕ್ಕೆ ಕಾಯ್ದಿರಿಸಿತ್ತು.
ಕರವೇ ಅಧ್ಯಕ್ಷ ಸೇರಿ 29 ಕಾರ್ಯಕರ್ತರಿಗೆ ದೇವನಹಳ್ಳಿ ನ್ಯಾಯಾಲಯ ಜಾಮೀನು ಮಂಜೂರು: ನಾಳೆ ಬಿಡುಗಡೆ ಸಾಧ್ಯತೆ
Published on

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೆಲ ದಿನಗಳ ಹಿಂದೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದ ಸಮಯದಲ್ಲಿ ಬಂಧನಕ್ಕೊಳಗಾಗಿದ್ದ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ ಎ ನಾರಾಯಣ ಗೌಡ ಸೇರಿ 29 ಕಾರ್ಯಕರ್ತರಿಗೆ ದೇವನಹಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು  ಸೆಷನ್ಸ್‌ ನ್ಯಾಯಾಲಯ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. [ಟಿ ಎ ನಾರಾಯಣಗೌಡ ಮತ್ತು ಚಿಕ್ಕಜಾಲ ಪೊಲೀಸ್‌ ಠಾಣೆ ನಡುವಣ ಪ್ರಕರಣ].

ನ್ಯಾಯಾಧೀಶ ಬಿರಾದಾರ್‌ ದೇವೇಂದ್ರಪ್ಪ ಅವರು ಈ ಆದೇಶ ನೀಡಿದ್ದಾರೆ. ಪ್ರಕರಣದ ಸಂಬಂಧ ನ್ಯಾಯಾಲಯ ಸರ್ಕಾರಿ ಅಭಿಯೋಜಕರ ಅಭಿಪ್ರಾಯ ಕೇಳಿತ್ತು. ಜ. 2ರಂದು ಸರ್ಕಾರಿ ಅಭಿಯೋಜಕರು ವರದಿ ಸಲ್ಲಿಸಿದ್ದರು. ತೀರ್ಪನ್ನು ನ್ಯಾಯಾಲಯ ಜ. 6ಕ್ಕೆ ಕಾಯ್ದಿರಿಸಿತ್ತು.

ದೇವನಹಳ್ಳಿಯ ಹೊರ ವಲಯದಲ್ಲಿರುವ ಸಾದಹಳ್ಳಿ ಟೋಲ್‌ನಿಂದ ಡಿ. 27ರಂದು ಹೊರಟ ಜಾಗೃತಿ ಜಾಥಾ ಸಮಯದಲ್ಲಿ ಕರವೇ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಲ್ಲಿ ತೂಗುಹಾಕಲಾಗಿದ್ದ ಇಂಗ್ಲಿಷ್‌ ನಾಮಫಲಕಗಳನ್ನು ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಜಾಲ ಪೊಲೀಸರು ಅವರನ್ನು ಬಂಧಿಸಿ ಅಂದು ರಾತ್ರಿ ನ್ಯಾಯಾಧೀಶರೆದುರು ಹಾಜರುಪಡಿಸಿದ್ದರು.

ನ್ಯಾಯಾಧೀಶರು ಕಾರ್ಯಕರ್ತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು.

ನಾರಾಯಣ ಗೌಡ ಅವರ ವಿರುದ್ಧ ವಿವಿಧ ಪ್ರಕರಣಗಳಿದ್ದು ಅವರನ್ನು ಬಂಧಿಸದೆ ಹೋದರೆ ವಿಚಾರಣೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬಂಧಿಸಲಾಯಿತು. ಬಂಧನಕ್ಕೆ ಕಾರ್ಯಕರರ್ತರು ಅಡ್ಡಿಪಡಿಸಿದ್ದರು. ಅಲ್ಲದೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದ್ದರೂ ಬೇರೆಡೆ ಪ್ರತಿಭಟನೆ ನಡೆಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು.

ದಾಖಲಾಗಿರುವ ಪ್ರಕರಣಗಳಲ್ಲಿ ಒಂದಕ್ಕೆ ಸಂಬಂಧಿಸಿದಂತೆ ನಾರಾಯಣಗೌಡ ಅವರಲ್ಲದೆ 36 ಕಾರ್ಯಕರ್ತರು ಜಾಮೀನು ಅರ್ಜಿ ಸಲ್ಲಿಸಿದ್ದರು. ತಲೆಮರೆಸಿಕೊಂಡಿರುವ ನಾಲ್ಕು ಮಂದಿಯನ್ನು ಹೊರತುಪಡಿಸಿ ಉಳಿದ 29 ಕಾರ್ಯಕರ್ತರಿಗೆ  ರೂ 2 ಲಕ್ಷ ಬಾಂಡ್‌ ಸಲ್ಲಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಇಂದು ಬಿಡುಗಡೆಯಾಗಬೇಕಿದ್ದ ಎಲ್ಲಾ ಕಾರ್ಯಕರ್ತರು ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

Kannada Bar & Bench
kannada.barandbench.com