ಬೆಂಗಳೂರು ಕರಗ ಮಹೋತ್ಸವ: ಹಣಕಾಸು ವ್ಯವಹಾರದ ಜವಾಬ್ದಾರಿ ಕಾರ್ಯಕಾರಿ ಅಧಿಕಾರಿ ಹೆಗಲಿಗೆ ಹಾಕಿದ ಹೈಕೋರ್ಟ್‌

ಕರಗ ನಡೆಸಲು ಬಿಬಿಎಂಪಿಯು ₹1.5 ಕೋಟಿ ಮಂಜೂರು ಮಾಡಿದೆ. ಇದರಲ್ಲಿ ಅವ್ಯವಹಾರವಾಗಬಾರದು. ಅದಲ್ಲದೇ, ಕರಗ ಸಂದರ್ಭದಲ್ಲಿ ದೇವಸ್ಥಾನ ಸಂಗ್ರಹಿಸುವ ಹಣದ ನಿರ್ವಹಣೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ ಬಿಬಿಎಂಪಿ.
Bengaluru Karaga procession
Bengaluru Karaga processionDeccan Herald
Published on

ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಎಲ್ಲಾ ಹಣಕಾಸು ವ್ಯವಹಾರಗಳನ್ನು ಬೆಂಗಳೂರು ಕರಗ ಮಹೋತ್ಸವದ ಸಂದರ್ಭದಲ್ಲಿ ಕಾರ್ಯಕಾರಿ ಅಧಿಕಾರಿ ಮಾತ್ರ ನೋಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಧರ್ಮರಾಯ ಸ್ವಾಮಿ ದೇವಸ್ಥಾನ ಮತ್ತು ದೇವಸ್ಥಾನದ ನಿರ್ವಹಣಾ ಸಮಿತಿಯು ಸಲ್ಲಿಕೆ ಮಾಡಿರುವ ಅರ್ಜಿಯ ಭಾಗವಾಗಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ಹಿರಿಯ ವಕೀಲ ದೇವದಾಸ್‌ ಅವರು “ಕರಗ ನಡೆಸಲು ಬಿಬಿಎಂಪಿಯು ₹1.5 ಕೋಟಿ ಮಂಜೂರು ಮಾಡಿದೆ. ಇದರಲ್ಲಿ ಅವ್ಯವಹಾರವಾಗಬಾರದು. ಅದಲ್ಲದೇ, ಕರಗ ಸಂದರ್ಭದಲ್ಲಿ ದೇವಸ್ಥಾನ ಸಂಗ್ರಹಿಸುವ ಹಣದ ನಿರ್ವಹಣ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌ ಅವರು “ಬಿಬಿಎಂಪಿ ಮತ್ತು ದೇವಸ್ಥಾನವು ಕರಗ ಸಂದರ್ಭದಲ್ಲಿ ಸಂಗ್ರಹಿಸುವ ಹಣದ ನಿರ್ವಹಣೆಗೆ ಕಾರ್ಯಕಾರಿ ಅಧಿಕಾರಿಗೆ ಆದೇಶಿಸುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ” ಎಂದರು.

Also Read
‌ಬೆಂಗಳೂರು ಕರಗ ಮಹೋತ್ಸವ: ನಿರ್ವಹಣಾ ಸಮಿತಿ ಅವಧಿ ಏಪ್ರಿಲ್ 15ರವರೆಗೆ ವಿಸ್ತರಿಸಿದ ಹೈಕೋರ್ಟ್‌

ವಾದ-ಪ್ರತಿವಾದ ಆಲಿಸಿದ ಪೀಠವು “ದೇವಸ್ಥಾನವು ಬಿಬಿಎಂಪಿಯಿಂದ ಪಡೆಯುವ ಅನುದಾನ ಮತ್ತು ತಾನು ಸಂಗ್ರಹಿಸುವ ಹಣವನ್ನು ಕಾರ್ಯಕಾರಿ ಅಧಿಕಾರಿ ಮಾತ್ರ ನಿರ್ವಹಿಸಬೇಕು. ಕರಗ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಹಣಕಾಸು ಚಟುವಟಿಕೆಗಳನ್ನು ಕಾರ್ಯಕಾರಿ ಅಧಿಕಾರಿ ಮಾತ್ರ ನಿರ್ವಹಿಸಬೇಕು ಎಂಬಷ್ಟರ ಮಟ್ಟಿಗೆ ಮಾರ್ಚ್‌ 5ರ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿತು.

ಬೆಂಗಳೂರಿನ ಸುಪ್ರಸಿದ್ಧ ಕರಗ ಮಹೋತ್ಸವವು ಏಪ್ರಿಲ್‌ 4ರಿಂದ 14ರವರೆಗೆ ನಡೆಯಲಿದ್ದು, ಏಪ್ರಿಲ್ 15ರವರೆಗೆ ಹಾಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ನಿರ್ವಹಣಾ ಸಮಿತಿ ಅಸ್ತಿತ್ವದಲ್ಲಿರಲಿದೆ ಎಂದು ಮಾರ್ಚ್‌ 5ರಂದು ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿತ್ತು.

Kannada Bar & Bench
kannada.barandbench.com