![[ಧರ್ಮಸ್ಥಳ ಪ್ರಕರಣ] ಮಾಧ್ಯಮ ನಿರ್ಬಂಧ ಪ್ರತಿಬಂಧಕಾದೇಶ ತೆರವು: ನ್ಯೂಸ್ ಮಿನಿಟ್ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್](http://media.assettype.com/barandbench-kannada%2F2025-08-06%2F4jvvdfar%2FWhatsApp-Image-2025-08-05-at-9.19.51-PM.jpeg?w=480&auto=format%2Ccompress&fit=max)
![[ಧರ್ಮಸ್ಥಳ ಪ್ರಕರಣ] ಮಾಧ್ಯಮ ನಿರ್ಬಂಧ ಪ್ರತಿಬಂಧಕಾದೇಶ ತೆರವು: ನ್ಯೂಸ್ ಮಿನಿಟ್ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್](http://media.assettype.com/barandbench-kannada%2F2025-08-06%2F4jvvdfar%2FWhatsApp-Image-2025-08-05-at-9.19.51-PM.jpeg?w=480&auto=format%2Ccompress&fit=max)
ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿರುವ ಪ್ರಕರಣದ ವರದಿಗಾರಿಕೆಯ ವೇಳೆ ಡಿ ಹರ್ಷೇಂದ್ರ ಕುಮಾರ್ ಮತ್ತು ಅವರ ಸಹೋದರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ದೇವಸ್ಥಾನದ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಡಿದ್ದ ತಾತ್ಕಾಲಿಕ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ವಿಸ್ತರಿಸಲು ವಿಚಾರಣಾಧೀನ ನ್ಯಾಯಾಲಯವು ನಿರಾಕರಿಸಿರುವುದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ದ ನ್ಯೂಸ್ ಮಿನಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ವಿಚಾರಣಾಧೀನ ನ್ಯಾಯಾಲಯವು ಏಕಪಕ್ಷೀಯ ಆದೇಶ ಮಾಡಿರುವುದನ್ನು ಕುಡ್ಲಾ ರ‍್ಯಾಂಪೇಜ್‌ಗೆ ಸೀಮಿತವಾಗಿ ವಜಾಗೊಳಿಸಿರುವುದನ್ನು ತನಗೂ ವಿಸ್ತರಿಸುವಂತೆ ಕೋರಿ ನ್ಯೂಸ್ ಮಿನಿಟ್ ಮಾತೃ ಸಂಸ್ಥೆ ಸ್ಪಂಕ್‌ಲೇನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿತು.
ಆಗಸ್ಟ್ 6ರಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎಂ ಅನಿತಾ ಅವರು ಹರ್ಷೇಂದ್ರ ಕುಮಾರ್ ಪರವಾಗಿ ಮಾಡಿದ್ದ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶವನ್ನು ಮುಂದುವರಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ 338 ಮಾಧ್ಯಮಗಳು/ಯೂಟ್ಯೂಬ್ ಚಾನಲ್‌ಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವು ತೆರವಾಗಿತ್ತು. ಈ ಸಂಬಂಧ ನ್ಯೂಸ್ ಮಿನಿಟ್ ಪರ ವಕೀಲರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದನ್ನು ಪರಿಗಣಿಸಿ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿತು.
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಸಂಬಂಧ ತನ್ನ ವರದಿಗಾರಿಕೆಗೆ ಅಡ್ಡಿ ಮಾಡುತ್ತಿರುವುದನ್ನು ಪ್ರಶ್ನಿಸಿ ದ ನ್ಯೂಸ್ ಮಿನಿಟ್ ಪ್ರತ್ಯೇಕವಾಗಿ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 18ಕ್ಕೆ ಮುಂದೂಡಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಮಾರ್ಚ್ 22ರಂದು ಮಾಡಿರುವ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ನ್ಯೂಸ್ ಮಿನಿಟ್ ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ನ್ಯೂಸ್ ಮಿನಿಟ್ ಪಕ್ಷಕಾರವಾಗಿಲ್ಲದಿದ್ದರೂ ಫಿರ್ಯಾದಿಗಳು ʼಜಾನ್ ಡೋʼ (ಅನಾಮಧೇಯ) ವರ್ಗೀಕರಣ ಉಲ್ಲೇಖಿಸಿ ನಿರ್ದಿಷ್ಟ ಲೇಖನ ಮತ್ತು ಟ್ವೀಟ್ ತೆಗೆಯುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಜಾನ್ ಡೋ ವರ್ಗೀಕರಣದಡಿ ನ್ಯಾಯಾಲಯವು ನಿರ್ದಿಷ್ಟ ಸಮಯದಲ್ಲಿ ವ್ಯಕ್ತಿಯ ಗುರುತು ತಿಳಿಯದಿದ್ದರೂ ಅವರ ವಿರುದ್ಧ ಆದೇಶ ಮಾಡಲು ಅವಕಾಶವಿದೆ. ಸದರಿ ಪ್ರಕರಣದಲ್ಲಿ ನ್ಯೂಸ್ ಮಿನಿಟ್ ಪಕ್ಷಕಾರವಾಗಿಲ್ಲದಿದ್ದರೂ ಸುದ್ದಿಯಲ್ಲಿ ವಿಚಾರವು ಮಾನಹಾನಿಯಾಗದ ಹೊರತಾಗಿಯೂ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕುವುದನ್ನು ತಪ್ಪಿಸಲು ಮತ್ತು ಪೂರ್ವಾಗ್ರಹಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನ್ಯೂಸ್ ಮಿನಿಟ್ ತಾತ್ಕಾಲಿಕವಾಗಿ ಅದನ್ನು ತೆಗೆದಿತ್ತು. ಇಷ್ಟೆಲ್ಲ ಆದರೂ ಇನ್ನೊಂದು ವಿಡಿಯೋ ಡಿಲೀಟ್ ಮಾಡಿಸಲು ಫಿರ್ಯಾದಿಗಳು ಮತ್ತೆ ಮಾರ್ಚ್ 22ರ ಆದೇಶ ಉಲ್ಲೇಖಿಸಿದ್ದರು.
ಈ ಆದೇಶ ಅನುಪಾಲಿಸಲು ನಿರಾಕರಿಸಿದ್ದ ನ್ಯೂಸ್ ಮಿನಿಟ್, ಏಕಪಕ್ಷೀಯ ಪ್ರತಿಬಂಧಕಾದೇಶದಲ್ಲಿ ಆಕ್ಷೇಪಿಸಲಾದ ವಿಡಿಯೋ ಉಲ್ಲೇಖವಾಗಿಲ್ಲ. ಅಲ್ಲದೇ, ಆಕ್ಷೇಪಿತ ವಿಡಿಯೋ ದೃಢೀಕರಿಸಬಹುದಾದ ಅಂಶಗಳನ್ನು ಹೊಂದಿದೆ. ಇದರಲ್ಲಿ ಎಫ್‌ಐಆರ್ ಹಾಗೂ ಅಧಿಕಾರಿಗಳ ಸಾರ್ವಜನಿಕ ಹೇಳಿಕೆಗಳಿದ್ದು, ಗೃಹ ಸಚಿವರ ಹೇಳಿಕೆಯೂ ಸೇರಿದೆ ಎಂದು ವಾದಿಸಿತು. ತಮ್ಮ ವಾದ ಆಲಿಸದೇ ಜಾನ್ ಡೋ ವರ್ಗೀಕರಣವನ್ನು ಆಧರಿಸಿ ವಿಡಿಯೋ ತೆಗೆಯಲು ಒತ್ತಾಯಿಸುವ ಮೂಲಕ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯೂಸ್ ಮಿನಿಟ್ ಹೇಳಿತು.