

ಕಾನೂನು-ಸುವ್ಯವಸ್ಥೆ ಹಿನ್ನೆಲೆಯಲ್ಲಿ ತಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿಗೆ ಮೂರನೇ ಬಾರಿಗೆ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಮಹೇಶ್ ತಿಮರೋಡಿಯವರನ್ನು ಗಡಿಪಾರು ಮಾಡಿ 2026 ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ ಮೂರನೇ ಬಾರಿಗೆ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠವು ಗಡಿಪಾರು ಆದೇಶ ಸಂಬಂಧ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು 2026ರ ಏಪ್ರಿಲ್ 30ರ ಆದೇಶದಲ್ಲಿ ಹೇಳಿತ್ತು. ಆದರೂ, ತಿಮರೋಡಿ ಹೈಕೋರ್ಟ್ ಗೆ ನೇರವಾಗಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ನಡೆಸಿತು.
ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ ೫೯ರ ಅಡಿ ಮೇಲ್ಮನವಿದಾರರು ಪರಿಹಾರ ಪಡೆಯಬಹುದು ಎಂದು ಏಕಸದಸ್ಯ ಪೀಠ ಹೇಳಿದೆ. ಹೀಗಾಗಿ, ಇದರರಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಮಹೇಶ್ ತಿಮರೋಡಿ ಮೇಲ್ಮನವಿಯನ್ನು ವಜಾಗೊಳಿಸಿತು.
ಇದೇ ವೇಳೆ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸುವವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆದರೆ, ವಿಭಾಗೀಯ ಪೀಠ ಅದನ್ನು ತಳ್ಳಿ ಹಾಕಿತು.
ಇದಕ್ಕೂ ಮುನ್ನ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಅರ್ಜಿದಾರರು 1997ರಿಂದಲೂ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತಾನು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಾ ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ, ಬೆಳ್ತಂಗಡಿ ಪೊಲೀಸರು ಇತರ ಕೆಲಸಗಳಿಗಿಂತ ಹೆಚ್ಚಾಗಿ ಈ ವ್ಯಕ್ತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ನಿವಾರಣೆಯಲ್ಲೇ ಸಮಯ ಕಳೆಯುವಂತಾಗಿದೆ. 26 ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿ ಇವೆ. ಇದಲ್ಲದೇ ಇತ್ತಿಚಿನ ದಿನಗಳಲ್ಲಿ ತಿಮರೋಡಿ ವಿರುದ್ಧ ಐದು ಎಫ್ಐಆರ್‌ಗಳು ದಾಖಲಾಗಿವೆ” ಎಂದು ಗಡಿಪಾರು ಆದೇಶವನ್ನು ಸಮರ್ಥಿಸಿದರು.
ತಿಮರೋಡಿ ಪರ ವಕೀಲ ಎಂ ಆರ್ ಬಾಲಕೃಷ್ಣ ಅವರು “27 ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವುದರಿಂದ ಗಡಿಪಾರು ಆದೇಶ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. 38, 29, 26, 25 ವರ್ಷದ ಹಳೆಯ ಪ್ರಕರಣಗಳಾಗಿದ್ದು, ಅವುಗಳಲ್ಲಿ ತಿಮರೋಡಿ ಖುಲಾಸೆಯಾಗಿದ್ದಾರೆ. 13 ಪ್ರಕರಣದಲ್ಲಿ ಖುಲಾಸೆಯಾಗಿದ್ದು, ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. 10 ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ನಂಬಲರ್ಹ ಮಾಹಿತಿ ಆಧರಿಸಿ ಗಡಿಪಾರು ಆದೇಶ ಮಾಡಲಾಗಿದೆಯೇ ಎಂಬುದನ್ನು ನೋಡಬೇಕು. ಧರ್ಮಸ್ಥಳ ಕಾನೂನಿಗಿಂತ ಮಿಗಿಲಲ್ಲ. ಅದು ರಾಜ್ಯದ ಒಳಗೇ ಇದೆ. ಸೌಜನ್ಯಾ ಕೊಲೆ ಪ್ರಕರಣದ ಹೋರಾಟದಲ್ಲಿ ಭಾಗವಾಗಿರುವುದಕ್ಕೆ ಗಡಿಪಾರು ಮಾಡಲಾಗಿದೆ” ಎಂದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ರೌಡಿ ನಡವಳಿಕೆ, ಬೆದರಿಕೆಯಿಂದಾಗಿ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಇರುವುದರಿಂದ ನೀವು ಖುಲಾಸೆಯಾಗಿದ್ದೀರಿ. ನೀವು ರೌಡಿಯಾಗಿರುವುದರಿಂದ ಜನರು ನಿಮ್ಮ ವಿರುದ್ಧ ಸಾಕ್ಷಿ ನುಡಿಯಲು ಬರುತ್ತಿಲ್ಲ ಎಂಬುದು ವರದಿಯಲ್ಲಿನ ಆರೋಪ. ಧಾರ್ಮಿಕ ವ್ಯಕ್ತಿಗಳಲ್ಲದವರ ಅಂಗಡಿ ಮುಂಗಟ್ಟಿಗೆ ಹೋಗಿ ಅಡ್ಡಿಪಡಿಸುತ್ತಿರುವುದರಿಂದ ಅವರು ನಿಮ್ಮ ವಿರುದ್ಧ ಸಾಕ್ಷಿ ನುಡಿಯುತ್ತಿಲ್ಲ ಎಂದು ಆರೋಪಿಸಲಾಗಿದೆ” ಎಂದಿತು.