Justice Sandeep Bhatt and Gujarat High Court
Justice Sandeep Bhatt and Gujarat High Court

ನ್ಯಾ. ಭಟ್ ವರ್ಗಾವಣೆ: ಗುಜರಾತ್ ಹೈಕೋರ್ಟ್ ವಕೀಲರ ಸಂಘದಿಂದ ಸಿಜೆ ಸುನಿತಾ ಅಗರ್‌ವಾಲ್‌ ವಿರುದ್ಧ ಸಿಜೆಐಗೆ ದೂರು

ಪ್ರಸ್ತಾವಿತ ವರ್ಗಾವಣೆ ವಿರೋಧಿಸಿ ಆಗಸ್ಟ್ 26ರಿಂದ ನ್ಯಾಯಾಲಯ ಕಾರ್ಯಗಳಿಂದ ದೂರ ಉಳಿದಿರುವ ಗುಜರಾತ್ ಹೈಕೋರ್ಟ್ ವಕೀಲರ ಸಂಘ.
Published on

ಗುಜರಾತ್ ಹೈಕೋರ್ಟ್‌ ವಕೀಲರ ನಿಯೋಗವೊಂದು ಗುರುವಾರ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರನ್ನು ಭೇಟಿ ಮಾಡಿ ಗುಜರಾತ್‌ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂದೀಪ್‌ ಭಟ್‌ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವ ಪ್ರಸ್ತಾವನೆ ಮರುಪರಿಶೀಲಿಸುವಂತೆ ಕೋರಿದೆ.

ಪ್ರಸ್ತಾವಿತ ವರ್ಗಾವಣೆ ವಿರೋಧಿಸಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ ಆಗಸ್ಟ್ 26ರಿಂದ ನ್ಯಾಯಾಲಯ ಕಾರ್ಯಗಳಿಂದ ದೂರ ಉಳಿದಿದೆ.

Also Read
ಮೇಲಧಿಕಾರಿಗಳೊಂದಿಗೆ ಅವಿಧೇಯ ವರ್ತನೆ: ನ್ಯಾಯಾಧೀಶರೊಬ್ಬರಿಗೆ ತಿಳಿಹೇಳಿದ ಬಾಂಬೆ ಹೈಕೋರ್ಟ್

ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬ್ರಿಜೇಶ್ ಜೆ ತ್ರಿವೇದಿ, ಹಿರಿಯ ವಕೀಲ  ಅಸೀಮ್ ಪಾಂಡ್ಯ ಹಾಗೂ ವಕೀಲರಾದ ಹಾರ್ದಿಕ್ ಬ್ರಹ್ಮಭಟ್, ಬಾಬುಭಾಯ್ ಮಂಗುಕಿಯಾ, ದೀಪೆನ್ ದವೆ ಮತ್ತು ಭಾರ್ಗವ್ ಭಟ್ ಅವರನ್ನೊಳಗೊಂಡ ನಿಯೋಗ ಸಿಜೆಐ ಹಾಗೂ ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೂ ಇದೇ ವೇಳೆ ಭೇಟಿಯಾಯಿತು.

2021ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾದ  ಭಟ್ ಸುಮಾರು 19,000 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಇದು ಅವರ ಪರಿಶ್ರಮ ಮತ್ತು ನಿಷ್ಠೆಗೆ ಸಾಕ್ಷಿ ಎಂದು ವಕೀಲರು ಸಿಜೆಐ ಅವರಿಗೆ ತಿಳಿಸಿದರು.

ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್‌ ನೇತೃತ್ವದ ಹೈಕೋರ್ಟ್‌ ಆಡಳಿತ ವಿಭಾಗದ ಬಗ್ಗೆ ನಿಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. 2019ರಲ್ಲಿ ವರ್ಗಾವಣೆ ಆದ ನಂತರವೂ ಏಳು ತಿಂಗಳು ಕೇಸ್ ಫೈಲ್‌ ಹಿಂದಿರುಗಿಸದಿದ್ದ ರಿಜಿಸ್ಟ್ರಾರ್ ಎ ಟಿ ಉಕ್ರಾನಿ ಅವರ ವಿರುದ್ಧ ನ್ಯಾ. ಭಟ್ ತೀರ್ಪು ನೀಡಿದ್ದರು. ಇದಾದ ಕೆಲ ದಿನಗಳಲ್ಲಿಯೇ ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರ್‌ವಾಲ್‌ ಅವರು ನ್ಯಾ. ಭಟ್‌ ಅವರ ರೋಸ್ಟರ್ ಬದಲಾವಣೆ ಮಾಡಿದ್ದರು. ಇದನ್ನು ಖಂಡಿಸುವ ನಿರ್ಣಯ ಅಂಗೀಕರಿಸಲು ಸಂಘ ತುರ್ತು ಸಭೆ ಕರೆಯುವಂತಾಯಿತು ಎಂದು ಅದು ವಿವರಿಸಿದೆ.

Also Read
ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿ: ಖಾಲಿ ಹುದ್ದೆ ಶೀಘ್ರ ಭರ್ತಿ ಕೋರಿ ಸಿಜೆಐಗೆ ಎಎಬಿ ಮನವಿ

ಏಕಸದಸ್ಯ ಪೀಠದ ಸದಸ್ಯರಾಗಿದ್ದಾಗ ನ್ಯಾ. ಭಟ್ ಅವರು ರಿಜಿಸ್ಟ್ರಿಯ ಎಲ್ಲಾ ವಿಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಈ ಹಿಂದೆ ನೀಡಿದ್ದ ನಿರ್ದೇಶನ ಜಾರಿಗೊಳಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕಡೆಗೆ ವಿಭಾಗೀಯ ಪೀಠ ಅವರ ಅವಲೋಕನಗಳನ್ನು ತೆಗೆದುಹಾಕಿತು ಎಂದು ವಕೀಲರು ದೂರಿದರು.

ನ್ಯಾ. ಭಟ್‌ ಅವರನ್ನು ವರ್ಗಾವಣೆ ಮಾಡಲು ಹೊರಟಿರುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿರದೆ ಅವರಿಗೆ ಶಿಕ್ಷೆ ವಿಧಿಸಲೆಂದು ಹೀಗೆ ಮಾಡಲಾಗಿದೆ.  ನ್ಯಾ. ಭಟ್ ಅವರ ವರ್ಚಸ್ಸಿಗೆ ಹಾಗೂ ಇಡೀ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಇದು ಧಕ್ಕೆ ಉಂಟುಮಾಡುತ್ತದೆ ಎಂದು ನಿಯೋಗ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಆಗಸ್ಟ್ 25 ಮತ್ತು 26,ರಂದು ಸಭೆ ಸೇರಿ ನ್ಯಾ.ಭಟ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ಗೆ ವರ್ಗಾಯಿಸುವ ನಿರ್ಣಯ ಕೈಗೊಂಡಿತ್ತು.

Kannada Bar & Bench
kannada.barandbench.com