ತನ್ನ ಉತ್ಪನ್ನ ʼರಿಯಲ್ ಫ್ರೂಟ್ ಜ್ಯೂಸ್ʼ ಕುರಿತು ಮಾಹಿತಿ ವಿಶ್ಲೇಷಕ ಧ್ರುವ್ ರಾಠೀ ಅವರು ಮಾಡಿದ ವಿಡಿಯೋದ ಎಲ್ಲಾ ಯುಆರ್‌ಎಲ್‌ಗಳನ್ನು ತೆಗೆದು ಹಾಕಲು ಆದೇಶ ನೀಡಬೇಕೆಂದು ಕೋರಿದ್ದ ಡಾಬರ್ ಇಂಡಿಯಾ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ [ಡಾಬರ್ ಇಂಡಿಯಾ ಮತ್ತು ಧ್ರುವ್ ರಾಥೀ ನಡುವಣ ಪ್ರಕರಣ].
ರಿಯಲ್ ಫ್ರೂಟ್ ಜ್ಯೂಸ್ ಹೇಗೆ ಗ್ರಾಹಕರ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ರಾಠೀ ವಿವರಿಸಿದ್ದ ದೃಶ್ಯಾವಳಿಗಳನ್ನು ತೆಗೆದುಹಾಕುವಂತೆ ಮಾರ್ಚ್ 24ರಂದು ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್‌ಗೆ ನ್ಯಾಯಾಲಯ ಆದೇಶಿಸಿತ್ತು.
ದೆಹಲಿಯಿಂದ ವರ್ಚುವಲ್ ವಿಧಾನದಲ್ಲಿ ಹಾಜರಾದ ರಾಠೀ ಪರ ವಕೀಲ ನಕುಲ್ ಗಾಂಧಿ ಅವರು ಆರಂಭದಲ್ಲಿ ವೀಡಿಯೊವನ್ನು “ಖಾಸಗಿ” ಪ್ರಸರಣಕ್ಕೆ ಸೇರಿಸಿದ್ದರು. ನ್ಯಾಯಾಲಯದ ಆದೇಶಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಆದೇಶದ ಪಾಲನೆ ಮಾಡಲಾಗಿದೆ ಎಂದು ವಿವರಿಸಿದರು.
"ನನ್ನ ಕಕ್ಷೀದಾರರು ಖಾಸಗಿ ಪ್ರಸರಣಕ್ಕಾಗಿ ವಿಡಿಯೊ ಮಾಡಿದ್ದರು. ಹೀಗೆ ಮಾಡುವುದರಿಂದ ಯಾರಾದರೂ ಈ ವಿಡಿಯೊವನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ವಾಹಿನಿಯಲ್ಲಿ ಅಪ್‌ಲೋಡ್ ಮಾಡಿದರೆ ಈ ಬಗ್ಗೆ ನನ್ನ ಕಕ್ಷೀದಾರರಿಗೆ ನೋಟಿಫಿಕೇಷನ್ ಮೂಲಕ ಮಾಹಿತಿ ದೊರೆಯುತ್ತಿತ್ತು. ಅದರಿಂದ ಅವರು ಹಾಗೆ ಅಪ್‌ಲೋಡ್ ಮಾಡಲಾದ ವಿಡಿಯೊವನ್ನು ತೆಗೆದುಹಾಕಬಹುದಾಗಿತ್ತು. ಆದರೆ, ಅವರು ಈ ಮೂಲ ವಿಡಿಯೋವನ್ನೇ ತೆಗೆದುಹಾಕಿದರೆ ಅವರಿಗೆ ಬೇರೆಡೆಯಿಂದ ಇದನ್ನು ಅಪ್‌ಲೋಡ್ ಮಾಡಲಾದ ಮಾಹಿತಿ ದೊರೆಯುವುದಿಲ್ಲ. ಆದಾಗ್ಯೂ, ನಾವು ನ್ಯಾಯಾಲಯದ ಆದೇಶವನ್ನು ಅನುಪಾಲನೆ ಮಾಡಿದ್ದು ವಿಡಿಯೋವನ್ನು ತೆಗೆದುಹಾಕಿದ್ದೇವೆ," ಎಂದು ತಾಂತ್ರಿಕ ಅಂಶಗಳನ್ನು ವಿವರಿಸಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾಬರ್ ಪರ ವಕೀಲ ದೇಬನಾಥ್ ಘೋಷ್ ಅವರು “ಬೇರೆ ಚಾನೆಲ್‌ಗಳೂ ಇಂತಹ ಹಲವು ವೀಡಿಯೊಗಳನ್ನು ಪ್ರಸಾರ ಮಾಡಿದ್ದು ಅವುಗಳನ್ನು ತೆಗೆದುಹಾಕುವಂತೆ ನ್ಯಾ. ರವಿ ಕಿಶನ್ ಕಪೂರ್ ಅವರನ್ನು ಕೋರಿದ್ದರು. ವೀಡಿಯೊದ ಮೂಲ ಕರ್ತೃ ರಾಠೀ ಎಂದು ಘೋಷ್ ವಾದಿಸಿದರು. ಆದರೆ ಮನವಿಯನ್ನು ಪರಿಗಣಿಸಲು ಪೀಠ ನಿರಾಕರಿಸಿತು.
ರಾಠೀ ಅವರದ್ದು ದುರದ್ದೇಶದ ಕೃತ್ಯ ಎಂದು ಹೇಳುತ್ತೀರಿ. ಆದರೆ ಆ ಎಲ್ಲಾ ವೀಡಿಯೊಗಳನ್ನು ರಾಠೀ ಅಪ್‌ಲೋಡ್ ಮಾಡಿದ್ದಾರೆ ಎಂದು ನೀವು ಹೇಳಿದರೆ ನಾವು ಅವರ ವಿರುದ್ಧ ಆದೇಶ ಹೊರಡಿಸುತ್ತೇವೆ. ಇಲ್ಲದಿದ್ದರೆ ಒಬ್ಬ ವ್ಯಕ್ತಿಯ ವಿರುದ್ಧ ಈ ರೀತಿ ಮುಂದುವರೆಯಲು ಬಹುರಾಷ್ಟ್ರೀಯ ಕಂಪೆನಿಗೆ (ಡಾಬರ್) ಅನುಮತಿ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ಆದರೂ ಘೋಷ್ ಪಟ್ಟು ಬಿಡದಿದ್ದಾಗ ನ್ಯಾಯಮೂರ್ತಿಗಳು “ಘೋಷ್ ಅವರೇ ದಯವಿಟ್ಟು ನನ್ನೆದುರು ಇಂತಹ ಪ್ರಯತ್ನ ಬೇಡ. ನೀವು ಹೀಗೆ ಮಹಾಭಾರತ ನಡೆಸಲಾಗದು. ಅವರು ಅಫಿಡವಿಟ್ ಸಲ್ಲಿಸಲಿ” ಎಂದರು.
ಆ ಮೂಲಕ ರಾಠೀ ಅವರಿಗೆ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.
ನ್ಯಾಯಾಲಯವು ಮಾರ್ಚ್ 15ರಂದು ನೀಡಿದ ಆದೇಶದಲ್ಲಿ, ಆಕ್ಷೇಪಾರ್ಹ ವೀಡಿಯೊವು ʼರಿಯಲ್ ಫ್ರೂಟ್ ಜ್ಯೂಸ್ʼ ಬಗ್ಗೆ ನೇರ ಮತ್ತು ಹುಂಬ ಪ್ರಸ್ತಾಪ ಮಾಡಿದ್ದು ಡಾಬರ್ ಪ್ರಸಾರ ಮಾಡಿದ್ದ ಹಿಂದಿನ ಜಾಹೀರಾತಿನ ಸ್ಲೈಡ್‌ಗಳನ್ನು ಬಳಸಲಾಗಿದೆ ಎಂದು ರಾಠೀ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.