

ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಅಪ್ರಾಪ್ತ ಆರೋಪಿಗೆ ಜಾಮೀನು ನಿರಾಕರಿಸುವ ಸಲುವಾಗಿ ರಾಜಸ್ಥಾನದ ನ್ಯಾಯಾಧೀಶರೊಬ್ಬರು ದಾಖಲೆಗಳನ್ನು ತಿರುಚಿರಬಹುದು ಎಂದು ರಾಜಸ್ಥಾನ ಹೈಕೋರ್ಟ್ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೋಕ್ಸೊ) ವಿವಿಧ ಸೆಕ್ಷನ್‌ಗಳಡಿ ದಾಖಲಿಸಲಾದ ಪ್ರಕರಣವೊಂಧಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಯ ಜಾಮೀನು ಅರ್ಜಿಯನ್ನು ನವೆಂಬರ್ 29, 2025 ರಂದು ಬಾಲ ನ್ಯಾಯ ಮಂಡಳಿ ತಿರಸ್ಕರಿಸಿದ್ದರಿಂದ ಈ ವಿವಾದ ಉಂಟಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ನಿಗದಿತ ಅವಧಿಯೊಳಗೆ ನವೆಂಬರ್ 21, 2025 ರಂದು ಸಲ್ಲಿಸಲಾಗಿದೆ ಎಂಬ ಆಧಾರದ ಮೇಲೆ ಜಾಮೀನು ನಿರಾಕರಿಸಲಾಗಿತ್ತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 187(2) ರ ಪ್ರಕಾರ, ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಪ್ರಕರಣಗಳಲ್ಲಿ 90 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗುವ ಅನಿವಾರ್ಯ ಶಾಸನಬದ್ಧ ಹಕ್ಕನ್ನು ಪಡೆಯುತ್ತಾನೆ. ಈ ಪ್ರಕರಣದಲ್ಲಿ 90 ದಿನಗಳ ಅವಧಿ ನವೆಂಬರ್ 21, 2025 ರಂದು ಮುಕ್ತಾಯಗೊಂಡಿತ್ತು.
ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿ ಅಪ್ರಾಪ್ತ ಆರೋಪಿಯು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಫರ್ಜಂದ್ ಅಲಿ ಅವರು ಪ್ರಕರಣದ ದಾಖಲೆಯಲ್ಲಿನ ಸ್ಪಷ್ಟ ವ್ಯತ್ಯಾಸಗಳನ್ನು ಗಮನಿಸಿದರು. ನವೆಂಬರ್ 21, 2025 ರಂದು ಆರೋಪಪಟ್ಟಿ ಸಲ್ಲಿಸುವಾಗ ಯಾವುದೇ ನ್ಯಾಯಾಂಗ ಆದೇಶಪಟ್ಟಿ ಇಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿತು. ಜೊತೆಗೆ, 24.11.2025ರ ದಿನಾಂಕದ ಆರ್ಡರ್‌ಶೀಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ಎಂದು ದಾಖಲಿಸಲಾಗಿತ್ತು. ಅದರೆ, ವಾಸ್ತವದಲ್ಲಿ ಜಾಮೀನು ಕೋರಿ ಅರ್ಜಿಯನ್ನು 28ರಂದು ಸಲ್ಲಿಸಿ ಅದು 29ರಂದು ತಿರಸ್ಕರಿಸಲ್ಪಟ್ಟಿತ್ತು. ಇದರಿಂದ ಗಂಭೀರ ಕಾಲಾನುಕ್ರಮ ವೈರುಧ್ಯ ಉಂಟಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಡಿಸೆಂಬರ್ 8, 2025ರಂದು ನ್ಯಾಯಾಂಗ ಅಧಿಕಾರಿ ಇದನ್ನು ಟೈಪಿಂಗ್ ದೋಷವೆಂದು ಸ್ಪಷ್ಟಪಡಿಸಿದ್ದರೂ, ಹೈಕೋರ್ಟ್ ಅದನ್ನು ಒಪ್ಪಲಿಲ್ಲ. ಇದು ಸಾಮಾನ್ಯ ದೋಷವಲ್ಲ; ಉದ್ದೇಶಪೂರ್ವಕವಾಗಿ ದಾಖಲೆ ತಿರುಚಿರುವ ಅನುಮಾನ ವ್ಯಕ್ತವಾಗಿದೆ ಎಂದಿದೆ.
ಇದು ಕೇವಲ ನ್ಯಾಯಾಂಗ ದೋಷವಾಗಿರದೆ ಸುಳ್ಳು ದಾಖಲೆ ಸೃಷ್ಟಿ ಅಥವಾ ದಾಖಲೆಗಳ ಫೋರ್ಜರಿಯಂತೆಯೇ ಅತ್ಯಂತ ಗಂಭೀರ ಅಪರಾಧವಾಗಿರಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತರುವಂತೆ ರಿಜಿಸ್ಟ್ರಿಗೆ ಸೂಚಿಸಿದೆ.
ಕಾನೂನು ಸಂಘರ್ಷಕ್ಕೀಡಾದ ಅಪ್ರಾಪ್ತ ಬಾಲಕನ ಹಕ್ಕನ್ನು ಹತ್ತಿಕ್ಕಿರಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಆತನನ್ನು ಡಿಫಾಲ್ಟ್ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡುವಂತೆ ಆದೇಶಿಸಿದೆ.