ಕೋವಿಡ್ ಕಾರಣದಿಂದಾಗಿ ಎಲ್ಲಾ ನ್ಯಾಯಾಲಯಗಳು ಈಗ ವರ್ಚುವಲ್ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ದೇಶದ ಎಲ್ಲಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಇತ್ತೀಚೆಗೆ ನೇರ ಸಂವಾದ ನಡೆಸಿದರು.
ಜೂನ್ 1 ಮತ್ತು 2ರಂದು ನಾಲ್ಕು ಭಿನ್ನ ಅವಧಿಗಳಲ್ಲಿ ವರ್ಚುವಲ್ ವಿಧಾನದ ಮೂಲಕ ಈ ಚರ್ಚೆ ನಡೆಯಿತು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.
ಡಿಜಿಟಲ್ ಕಂದರವು, "ನ್ಯಾಯಾಂಗದ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತಿದೆ, ಜಿಲ್ಲೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವಲ್ಲಿ ಉತ್ತಮ ನೆಟ್‌ವರ್ಕ್ ಮತ್ತು ಸಂಪರ್ಕಗಳು ಸುದೀರ್ಘ ಪರಿಣಾಮ ಬೀರಲಿವೆ," ಎಂಬ ಸಾಮಾನ್ಯ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ನ್ಯಾಯಾಂಗದ ಕಾರ್ಯ ವೈಖರಿ ಮೇಲೆ ಕೋವಿಡ್ ಸಾಂಕ್ರಾಮಿಕದ ಪರಿಣಾಮ, ನ್ಯಾಯಾಂಗ ಪ್ರಕ್ರಿಯೆ ಸುಗಮವಾಗಿ ನಡೆಯಲು ಕೈಗೊಂಡ ಆಡಳಿತಾತ್ಮಕ ಕ್ರಮಗಳು, ಸಾಂಕ್ರಾಮಿಕದಿಂದ ಉದ್ಭವಿಸಿರುವ ಸವಾಲುಗಳನ್ನು ಎದುರಿಸಲು ನಡೆಸಿದ ಆವಿಷ್ಕಾರಗಳು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಲಸಿಕೆ ನೀಡಿಕೆ, ಸಂಪರ್ಕ/ ನೆಟ್‌ವರ್ಕ್ ಸಮಸ್ಯೆಗಳು, ನ್ಯಾಯಾಂಗ ಮೂಲಸೌಕರ್ಯ ಕುರಿತು ಇರುವ ಸವಾಲುಗಳು ಹಾಗೂ ಖಾಲಿ ಹುದ್ದೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಹೈಕೋರ್ಟ್‌ಗಳಲ್ಲಿ ಹುದ್ದೆಗಳು ಖಾಲಿ ಇರುವುದನ್ನು ಪ್ರಸ್ತಾಪಿಸಿದ ನ್ಯಾ. ರಮಣ ಅವರು ಅಂತಹ ಹುದ್ದೆಗಳ ಭರ್ತಿಯ ಅಗತ್ಯತೆಯನ್ನು ಒತ್ತಿ ಹೇಳಿದರು.
ಇನ್ನು ಲಸಿಕೆ ಅಭಿಯಾನ ಕುರಿತ ಚರ್ಚೆ ವೇಳೆ, ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಲಸಿಕೆ ನೀಡಿಕೆ ತೃಪ್ತಿಕರವಾಗಿದ್ದರೂ ಕೆಳ ನ್ಯಾಯಾಲಯಗಳಲ್ಲಿ ಲಸಿಕೆ ನೀಡಿಕೆ ಬಾಕಿ ಇದೆ ಎಂಬ ಮಾಹಿತಿ ತಿಳಿದುಬಂದಿತು. ಉಪವಿಭಾಗ ಮತ್ತು ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಲಸಿಕೆ ಲಭ್ಯವಾಗುವಂತೆ ಮಾಡಲು ಸಂಚಾರಿ ಲಸಿಕಾ ಕೇಂದ್ರಗಳನ್ನು ತೆರೆಯಲು ಆಲೋಚಿಸುತ್ತಿರುವುದಾಗಿ ಹೈಕೋರ್ಟ್ ಒಂದು ಇದೇ ವೇಳೆ ತಿಳಿಸಿತು.
ಮೂಲಸೌಕರ್ಯ ಹೆಚ್ಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಈಗ ಇರುವ ಅಡೆತಡೆಗಳನ್ನು ತೆಗೆದು ಹಾಕಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು ಎಂದು ಬಾಂಬೆ , ಪಂಜಾಬ್ ಮತ್ತು ಹರಿಯಾಣ, ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ಗಳು ಕೋರಿದವು.
ಎಲ್ಲಾ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದ ಬಳಿಕ ಮೂಲ ಸೌಕರ್ಯಕ್ಕಾಗಿ ರಾಷ್ಟ್ರೀಯ ಯೋಜನೆಯೊಂದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾ ರಮಣ ಅವರು ತಿಳಿಸಿದ್ದಾಗಿ ಪ್ರಕಟಣೆಯಲ್ಲಿ ವಿವರಿಸಲಾಗಿದೆ.