ಅಕ್ರಮ ಆಸ್ತಿ ಪ್ರಕರಣ: ರವಿ ಚನ್ನಣ್ಣನವರ್ ವಿರುದ್ಧ ಸಿಬಿಐ, ಇಡಿ ತನಿಖೆಗೆ ಕೋರಿ ವಕೀಲ ಜಗದೀಶ್ ಹೈಕೋರ್ಟ್‌ನಲ್ಲಿ ಅರ್ಜಿ

ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನಲಾದ ಆಸ್ತಿಯ ಮಾಹಿತಿಯನ್ನು ಮನವಿಯಲ್ಲಿ ನೀಡಲಾಗಿದ್ದು, ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
IPS officer Ravi D Channannavar, Lawyer K N Jagadesh Kumar & Karnataka HC
IPS officer Ravi D Channannavar, Lawyer K N Jagadesh Kumar & Karnataka HC

ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ತಮ್ಮ ಪೋಷಕರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿರುವ ಬಗ್ಗೆ ದೂರು ದಾಖಲಿಸಿ, ತನಿಖೆ ನಡೆಸುವಂತೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಅಥವಾ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಕೆ ಎನ್ ಜಗದೀಶ್ ಕುಮಾರ್ ಅವರು ರಿಟ್‌ ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಸಿಬಿಐ, ಇಡಿ ಮತ್ತು ರವಿ ಡಿ. ಚನ್ನಣ್ಣನವರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನಲಾದ ಆಸ್ತಿಯ ಮಾಹಿತಿ ನೀಡಲಾಗಿದ್ದು, ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ರವಿ ಡಿ. ಚನ್ನಣ್ಣನವರ್ ಅವರು 2018ರಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 13 ವರ್ಷಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದು, ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಬಿಂಬಿಸಿಕೊಂಡಿದ್ದಾರೆ. ಅವರನ್ನು ಕರ್ನಾಟಕದ ಸಿಂಗಂ ಎಂದು ಜನ ಕರೆಯುತ್ತಾರೆ. ಆದರೆ, ಚನ್ನಣ್ಣನವರ್‌ ಅವರು ತಂದೆ-ತಾಯಿ, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಬೇನಾಮಿ ಹೆಸರಿನಲ್ಲಿ ಒಟ್ಟು 44 ಎಕರೆ 34 ಗುಂಟೆ ಎಕರೆ ಜಮೀನು ಖರೀದಿಸಿದ್ದಾರೆ. ಅದರಲ್ಲಿ 37 ಎಕರೆ ಚನ್ನಣ್ಣನವರ್ ತಂದೆ-ತಾಯಿ ಒಡೆತನದಲ್ಲಿದೆ. ಈ ಜಮೀನು ಖರೀದಿಸಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ. ಇನ್ನೂ ರೇಣುಕಾ ಎಂಟರ್‌ಪ್ರೈಸೆಸ್ ಎಂಬ ಸಂಸ್ಥೆಯ ಹೆಸರಿನಲ್ಲಿ 20 ವರ್ಷದ ಅವಧಿಗೆ ಕ್ವಾರಿ ಗುತ್ತಿಗೆ ಪಡೆದಿದ್ದಾರೆ. ಈ ಕಂಪೆನಿಯಲ್ಲಿ ಚನ್ನಣ್ಣನವರ್ ತಾಯಿ ಪಾಲುದಾರರಾಗಿದ್ದಾರೆ. ಈ ಕಂಪೆನಿಗೆ ಕೋಟ್ಯಂತರ ಹಣ ಬಂಡವಾಳ ಹೂಡಿಕೆ ಮಾಡಿದ್ದು, ಗುತ್ತಿಗೆ ಪಡೆಯಲು ತಮ್ಮ ಪ್ರಭಾವ, ಅಧಿಕಾರ ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Also Read
ಚನ್ನಣ್ಣನವರ್ ವಿರುದ್ಧ ಹೇಳಿಕೆ ಪ್ರಕಟಿಸದಂತೆ ವಕೀಲ ಜಗದೀಶ್ ಮತ್ತಿತರರಿಗೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ

ಚನ್ನಣ್ಣನವರ್ ಅವರ ಭ್ರಷ್ಟಾಚಾರದ ಬಗ್ಗೆ ಮಂಜುನಾಥ್ ಎಂಬುವರು ಸಹ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳು ವರದಿ ಮಾಡದಂತೆ ಚನ್ನಣ್ಣನವರ್‌ ವಿಲ್ ನ್ಯಾಯಾಲಯದಿಂದ ಪ್ರತಿಬಂಧಕಾದೇಶ ಸಹ ಪಡೆದುಕೊಂಡಿದ್ದಾರೆ. ಸರ್ಕಾರ ಇಲ್ಲಿಯವರೆಗೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ಆದಾಯ ಮೀರಿ ಮತ್ತು ಅಕ್ರಮ ಆಸ್ತಿ ಗಳಿಕೆ ಸಂಬಂಧ ಚನ್ನಣ್ಣನವರ್ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಸಿಬಿಐ ಅಥವಾ ಇಡಿಗೆ ಆದೇಶಿಸಬೇಕು. ಅವರನ್ನು ಸೇವೆಯಿಂದ ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com