ಡಿಕೆಶಿ ಅಕ್ರಮ ಆಸ್ತಿ ಪ್ರಕರಣ: ಆ.2ರೊಳಗೆ ಕೇಸ್‌ ಡೈರಿ ಸಲ್ಲಿಸಲು ಸಿಬಿಐಗೆ ನಿರ್ದೇಶನ; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪ್ರಾಥಮಿಕ ತನಿಖೆಯು ಮೂರು ತಿಂಗಳ ಕಾಲಾವಧಿ ಮೀರಿದರೆ ಸಿಬಿಐ ವಲಯ ಮುಖ್ಯಸ್ಥರ ಅನುಮತಿ ಪಡೆಯಬೇಕು ಎಂದಿದೆ. ಹಾಲಿ ಪ್ರಕರಣದಲ್ಲಿ ವಲಯದ ಮುಖ್ಯಸ್ಥರು ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ ಎಂದ ಎಸ್‌ಪಿಪಿ.
D K Shivakumar, CBI and Karnataka HC
D K Shivakumar, CBI and Karnataka HC

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ತನಿಖೆಗೆ ಸಂಬಂಧಿಸಿದ ಕೇಸ್‌ ಡೈರಿಯನ್ನು ಆಗಸ್ಟ್‌ 2ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಕಾಯ್ದಿರಿಸಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ನಡೆಸಿತು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರು “ಸಿಆರ್‌ಪಿಸಿ ಮತ್ತು ಸಿಬಿಐ ಕೈಪಿಡಿಯ ಪ್ರಕಾರ ಕೇಸ್‌ ಡೈರಿಯನ್ನು ನ್ಯಾಯಾಲಯ ಸಮನ್‌ ಮಾಡಲಾಗದು. ಆದರೆ, ನ್ಯಾಯಾಲಯ ಬಯಸಿದಲ್ಲಿ ವಿಶೇಷ ಅಧಿಕಾರ ಬಳಸಿ ಅದನ್ನು ಸಮನ್‌ ಮಾಡಬಹುದು. ಎಫ್‌ಐಆರ್‌ ಪ್ರಶ್ನಿಸಿರುವ ಸಂದರ್ಭದಲ್ಲಿ ಕೇಸ್‌ ಡೈರಿಯನ್ನು ನೋಡುವಂತಿಲ್ಲ. ಅದಾಗ್ಯೂ, ನ್ಯಾಯಾಲಯ ಬಯಸಿದಲ್ಲಿ ಅದನ್ನು ಸಲ್ಲಿಸಲಾಗುವುದು” ಎಂದು ಪ್ರತ್ಯುತ್ತರ ನೀಡಿದರು.

ಇದಕ್ಕೂ ಮುನ್ನ, ಶಿವಕುಮಾರ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಡಿ ಕೆ ಶಿವಕುಮಾರ್‌ ಅವರ ವಿರುದ್ಧದ ಅಕ್ರಮ ಆಸ್ತಿಯ ಗಳಿಕೆ ಸಂಬಂಧಿಸಿದಂತೆ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ. ಹೀಗಾಗಿ, ಕೇಸ್‌ ಡೈರಿ ತರಿಸಿಕೊಂಡು ನ್ಯಾಯಾಲಯ ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಪೀಠವು “ಕೇಸ್‌ ಡೈರಿಯ ಅಗತ್ಯ ಕಾಣಿಸಿದರೆ ಅದನ್ನು ನ್ಯಾಯಾಲಯವು ತರಿಸಿಕೊಂಡು ಪರಿಶೀಲಿಸಲಿದೆ. ಅದನ್ನು ಅರ್ಜಿದಾರರಾದ ನಿಮಗೆ ನೀಡಲಾಗದು. ಅಷ್ಟಕ್ಕೂ ಕೇಸ್‌ ಡೈರಿ ತರಿಸಿ, ಪರಿಶೀಲಿಸುವ ವಿಚಾರವನ್ನು ನೀವೇಕೆ ಇಷ್ಟು ಆಗ್ರಹಪಡಿಸುತ್ತಿದ್ದೀರಿ” ಎಂದು ಅರ್ಜಿದಾರರನ್ನು ಉದೇಶಿಸಿ ಹೇಳಿತು. ಅಂತಿಮವಾಗಿ ನ್ಯಾಯಾಲಯವು “ಆಗಸ್ಟ್‌ 2ರ ಒಳಗೆ ಕೇಸ್‌ ಡೈರಿ ಸಲ್ಲಿಸಬೇಕು” ಎಂದು ಸಿಬಿಐಗೆ ಸೂಚಿಸಿತು.

ಈ ಮಧ್ಯೆ, ವಾದ ಮುಂದುವರಿಸಿದ ಪ್ರಸನ್ನಕುಮಾರ್‌ ಅವರು “ಚುನಾವಣಾ ಅಫಿಡವಿಟ್‌ನಲ್ಲಿ 133 ಕೋಟಿ ರೂಪಾಯಿ ಆದಾಯ ಘೋಷಿಸಲಾಗಿದೆ. ಆದರೆ, ಈ ಪೈಕಿ 33 ಕೋಟಿ ರೂಪಾಯಿ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಈ ವೈರುಧ್ಯವನ್ನೇ ತನಿಖೆ ಮಾಡಲಾಗುತ್ತಿದೆ. 2020ರ ಮಾರ್ಚ್‌-ಜುಲೈ ಅವಧಿಯಲ್ಲಿ ವಿಭಿನ್ನ ದಿನಾಂಕಗಳಂದು ಕೋವಿಡ್‌ ಲಾಕ್‌ಡೌನ್‌ ಇದ್ದುದರಿಂದ ಎಲ್ಲವೂ ಸ್ಥಬ್ಧವಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ರೀತಿಯಲ್ಲಿಯೂ ತನಿಖೆ ವಿಳಂಬವಾಗಿಲ್ಲ. ಸಿಬಿಐ ಕೈಪಿಡಿಯು ಇಲಾಖಾ ಸೂಚನೆಯಾಗಿದ್ದು, ಅದನ್ನು ಸಂಪೂರ್ಣವಾಗಿ ಪಾಲಿಸಲಾಗಿದೆ. ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ 17ರ ಅಡಿ ತನಿಖೆಗೆ ಪೊಲೀಸ್‌ ವರಿಷ್ಠಾಧಿಕಾರಿಯು ಆದೇಶ ಮಾಡಿರಬೇಕು. ಅರ್ಜಿದಾರರು ಈ ಆಧಾರ ಎತ್ತಿದ ತಕ್ಷಣ ಪೊಲೀಸ್‌ ವರಿಷ್ಠಾಧಿಕಾರಿ ಮಾಡಿರುವ ಆದೇಶವನ್ನು ಸಲ್ಲಿಸಿದ್ದೇವೆ” ಎಂದರು.

Also Read
ಡಿಕೆಶಿ ವಿರುದ್ಧದ ತನಿಖೆ ವಿಳಂಬವಾಗಿಲ್ಲ; 596 ದಾಖಲೆ ಸಂಗ್ರಹ, 84 ಸಾಕ್ಷಿಗಳ ಪರಿಶೀಲನೆ: ಸಿಬಿಐ ವಕೀಲರ ಸಮರ್ಥನೆ

“ಸಾರ್ವಜನಿಕ ಸೇವಕ ಮತ್ತು ಅವರ ಪರವಾಗಿ ಎಂಬ ಮೂರು ಪದಗಳು ಎಫ್‌ಐಆರ್‌ನಲ್ಲಿ ಮಿಸ್‌ ಆಗಿವೆ ಎಂದಿದ್ದಾರೆ. ಎಫ್‌ಐಆರ್‌ ಅನ್ನು ಇನ್ನೂ ಚೆನ್ನಾಗಿ ಸಿದ್ಧಪಡಿಸಬಹುದಿತ್ತು ಎಂಬುದು ಎಫ್‌ಐಆರ್‌ ರದ್ದತಿಗೆ ಆಧಾರವಾಗುವುದಿಲ್ಲ. ಪ್ರಾಥಮಿಕ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದಿದೆ. ಪ್ರಾಥಮಿಕ ತನಿಖೆಯು ಮೂರು ತಿಂಗಳ ಕಾಲಾವಧಿ ಮೀರಿದರೆ ಸಿಬಿಐ ವಲಯ ಮುಖ್ಯಸ್ಥರ ಅನುಮತಿ ಪಡೆಯಬೇಕು ಎಂದಿದೆ. ಹಾಲಿ ಪ್ರಕರಣದಲ್ಲಿ ವಲಯದ ಮುಖ್ಯಸ್ಥರು ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ” ಎಂದರು.

ಅಂತಿಮವಾಗಿ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ, ಆದೇಶ ಕಾಯ್ದಿರಿಸಿತು.

Related Stories

No stories found.
Kannada Bar & Bench
kannada.barandbench.com