ಅಕ್ರಮ ಆಸ್ತಿ ಸಂಪಾದನೆ ಪ್ರಕರಣ: ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಜುಲೈ 6ವರೆಗೆ ಪೊಲೀಸ್‌ ಕಸ್ಟಡಿಗೆ

ಅಜಿತ್‌ಕುಮಾರ್‌ ರೈ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪರ ವಕೀಲರಿಗೆ ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.
Karnataka Lokayukta
Karnataka Lokayukta
Published on

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ ಆರ್‌ ಪುರಂ ತಹಶೀಲ್ದಾರ್‌ ಎಸ್‌ ಅಜಿತ್‌ಕುಮಾರ್‌ ರೈ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಜುಲೈ 6ರವರೆಗೆ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ.

ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ವಸ್ತುಗಳ ಮಾಹಿತಿಯನ್ನು ಒಳಗೊಂಡ ರಿಮ್ಯಾಂಡ್‌ ಅರ್ಜಿಯನ್ನು ಡಿವೈಎಸ್‌ಪಿ ಹಾಗೂ ತನಿಖಾಧಿಕಾರಿ ಬಿ ಪ್ರಮೋದ್‌ ಕುಮಾರ್‌ ಅವರು ನ್ಯಾಯಾಧೀಶರಾದ ಕೆ ಶ್ರೀಕಾಂತ್‌ ಅವರಿಗೆ ಸರ್ಕಾರಿ ಅಭಿಯೋಜಕರ ಮೂಲಕ ಸಲ್ಲಿಸಿದರು.

ಆರೋಪಿ ರೈ ಅವರನ್ನು 10 ದಿನಗಳ ಕಾಲ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಸರ್ಕಾರಿ ಅಭಿಯೋಜಕಿ ಶೈಲಜಾ ನಾಯಕ್‌ ಅವರು ವಾದಿಸಿದರು.

ಇದಕ್ಕೆ ರೈ ಪರವಾಗಿ ವಕಾಲತ್ತು ಹಾಕಿರುವ ವಕೀಲೆ ಪಿ ಎಲ್‌ ವಂದನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು ಆಕ್ಷೇಪಿಸಿದರು. ಅಂತಿಮವಾಗಿ ನ್ಯಾಯಾಲಯವು ಅಜಿತ್‌ಕುಮಾರ್‌ ರೈ ಅವರನ್ನು ಏಳು ದಿನಗಳ ಲೋಕಾಯುಕ್ತ ಪೊಲೀಶ್‌ ವಶಕ್ಕೆ ನೀಡಿದೆ.

ಜಾಮೀನು ಕೋರಿ ಅರ್ಜಿ ಸಲ್ಲಿಕೆ: ಇದರ ಬೆನ್ನಿಗೇ ಅಜಿತ್‌ಕುಮಾರ್‌ ರೈ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪರ ವಕೀಲರಿಗೆ ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com