ಆನೇಕಲ್‌ ಪುರಸಭೆಯ ಮೂವರು ಸದಸ್ಯರ ಅನರ್ಹತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್‌, ಜೂನ್‌ 15ಕ್ಕೆ ಅಂತಿಮ ವಿಚಾರಣೆ

ಕರ್ನಾಟಕ ಪುರಸಭೆಗಳ ಕಾಯಿದೆ 1964ರ ಸೆಕ್ಷನ್‌ 16ಸಿ ಅಡಿ ಮೂರು ವರ್ಷಗಳ ಕಾಲ ಮೂವರು ಪುರಸಭಾ ಸದಸ್ಯರನ್ನು ಅನರ್ಹಗೊಳಿಸಿ 2021ರ ನವೆಂಬರ್‌ 15ರಂದು ಆಯೋಗವು ಆದೇಶ ಮಾಡಿತ್ತು.
Supreme Court
Supreme Court
Published on

ನಿಗದಿತ ಅವಧಿಯಲ್ಲಿ ಚುನಾವಣಾ ಖರ್ಚು ವೆಚ್ಚದ ವಿವರ ಸಲ್ಲಿಸದ ಆರೋಪದಡಿ ಆನೇಕಲ್ ಪುರಸಭೆಯ ಮೂವರು ಸದಸ್ಯರನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠವು ಗುರುವಾರ ನೋಟಿಸ್‌ ಜಾರಿ ಮಾಡಿದೆ.

ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಅನಿರುದ್ಧ ಬೋಸ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಭಾ ದತ್ತ ಮಖಿಜಾ ಮತ್ತು ವಕೀಲ ಮಯಾಂಕ್‌ ಅಗರ್ವಾಲ್‌ ಅವರ ವಾದವನ್ನು ದಾಖಲಿಸಿಕೊಂಡ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ್ದು, ಅಂತಿಮ ವಿಚಾರಣೆಗಾಗಿ ಪ್ರಕರಣವನ್ನು ಜೂನ್‌ 15ಕ್ಕೆ ನಿಗದಿ ಮಾಡಿದೆ.

ಅರ್ಜಿದಾರರಾದ ಕೆ ಶ್ರೀನಿವಾಸ್‌, ಎಸ್ ಲಲಿತಾ ಮತ್ತು ಸಿ ಕೆ ಹೇಮಲತಾ ಅವರು ಚುನಾವಣಾ ವೆಚ್ಚ ಸಲ್ಲಿಸದಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ನೋಟಿಸ್‌ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸದ ಹಿನ್ನೆಲೆಯಲ್ಲಿ ಕರ್ನಾಟಕ ಪುರಸಭೆಗಳ ಕಾಯಿದೆ 1964ರ ಸೆಕ್ಷನ್‌ 16ಸಿ ಅಡಿ ಮೂರು ವರ್ಷಗಳ ಕಾಲ ಮೂರು ಪುರಸಭಾ ಸದಸ್ಯರನ್ನು ಅನರ್ಹಗೊಳಿಸಿ 2021ರ ನವೆಂಬರ್‌ 15ರಂದು ಆಯೋಗವು ಆದೇಶ ಮಾಡಿತ್ತು.

ಅನರ್ಹಗೊಂಡಿರುವ ಪುರಸಭಾ ಸದಸ್ಯರು 2020ರ ಜೂನ್‌ 17ರಂದು ವಿಸ್ತೃತವಾಗಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೇ ಆಯೋಗವು ಆದೇಶ ಮಾಡಿದೆ. ಆಯೋಗದ ಷೋಕಾಸ್‌ ನೋಟಿಸ್‌ಗೆ ಬಹುತೇಕ ಅನುಪಾಲನಾ ವರದಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸಲಾಗಿಲ್ಲ ಎಂದು ವಿವರಿಸಲಾಗಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು 2022ರ ಏಪ್ರಿಲ್‌ 18ರಂದು ಅನರ್ಹಗೊಂಡಿರುವ ಸದಸ್ಯರ ಮನವಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮೇ 30ರಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

Also Read
ಚುನಾವಣಾ ವೆಚ್ಚ ಮಾಹಿತಿ ಸಲ್ಲಿಕೆ ವಿಫಲ: ಪುರಸಭೆ ಸದಸ್ಯರ ಅನರ್ಹತೆ ಎತ್ತಿ ಹಿಡಿದ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಬಳಿಕ ರಾಜ್ಯ ಚುನಾವಣಾ ಆಯೋಗವು ಅನರ್ಹಗೊಂಡಿರುವ ಮೂರು ಸದಸ್ಯರ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಆರಂಭಿಸಿದೆ. ಸದರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್‌ 7 ಕೊನೆಯ ದಿನವಾಗಿತ್ತು. ಚುನಾವಣೆ ನಡೆಸದಂತೆ ಅನರ್ಹಗೊಂಡಿರುವ ಸದಸ್ಯರು ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ. ಅಲ್ಲದೇ, ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಮತ್ತು ಅರ್ಜಿದಾರರನ್ನು ಅನರ್ಹಗೊಳಿಸಿರುವ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com