ವರ್ಚಸ್ಸಿಗೆ ಹಾನಿ ವ್ಯವಸ್ಥೆ ದೃಷ್ಟಿಯಿಂದ ಒಳಿತಲ್ಲ; ಬಿಜೆಪಿ ವಿರುದ್ಧದ ಮಾನಹಾನಿ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ಪಾತ್ರವು ದೇಶದ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ಹೊಂದಿವೆ. ರಾಜಕೀಯ ಚರ್ಚಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವ ಸಮಾಜದ ಮೂಲ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
Justice Krishna S Dixit and Karnataka HC
Justice Krishna S Dixit and Karnataka HC

ಆಕ್ಷೇಪಾರ್ಹ ಟ್ವೀಟ್‌ಗಳ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯೊಂದನ್ನು ರದ್ದುಪಡಿಸಲು ಈಚೆಗೆ ಸ್ಪಷ್ಟವಾಗಿ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌, ವರ್ಚಸ್ಸು ಮತ್ತು ಘನತೆಗೆ ಹಾನಿ ಮಾಡುವುದು ಅಥವಾ ಸಾರ್ವಜನಿಕ ವರ್ಚಸ್ಸಿಗೆ ಕುಂದುಂಟು ಮಾಡುವುದು ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಚ್ಚರಿಸಿದೆ.

ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್‌ ಮಾನನಷ್ಟ ದಾವೆ ಮತ್ತು ಪ್ರಕ್ರಿಯೆ ರದ್ದುಪಡಿಸುವಂತೆ ಬಿಜೆಪಿ ಅಂದಿನ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ನಮ್ಮದು ಸಾಂವಿಧಾನಿಕ ಪ್ರಜಾಪ್ರಭುತ್ವ ಗಣರಾಜ್ಯ. ನಿಗದಿತವಾಗಿ ಶಾಸನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ನಮ್ಮ ರಾಜಕೀಯದ ಮೂಲಭೂತ ವೈಶಿಷ್ಟ್ಯ. ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ಪಾತ್ರವು ದೇಶದ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ. ರಾಜಕೀಯ ಚರ್ಚಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವ ಸಮಾಜದ ಮೂಲ ವಿಷಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಎಚ್ಚರಿಕೆಯಿಂದ ಒಬ್ಬರನ್ನೊಬ್ಬರು ಬಯಲು ಮಾಡುವ ವಿಸ್ತೃತ ನೆಲೆಯಲ್ಲಿ ಸಾರ್ವಜನಿಕ ಟೀಕೆ/ಟಿಪ್ಪಣಿಗೆ ತೆರೆದುಕೊಳ್ಳುತ್ತವೆ. ಹೀಗಾಗಿ, ಅವುಗಳು ಅತ್ಯಂತ ಹೆಚ್ಚಿನ ಸಂಯಮ ತೋರಬೇಕು. ರಾಜಕೀಯ ಪಕ್ಷಗಳ ವರ್ಚಸ್ಸು ಮತ್ತು ಘನತೆಯು ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂಬುದು ನಿರ್ವಿವಾದ. ಅವುಗಳ ಸಾರ್ವಜನಿಕ ವರ್ಚಸ್ಸಿಗೆ ಹಾನಿ ಮಾಡುವುದು ಅಥವಾ ಘನತೆಗೆ ಕುಂದುಂಟು ಮಾಡುವುದು ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ. ನಮ್ಮಂಥ ಶಕ್ತಿಶಾಲಿ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳ ಘನತೆಗೆ ಸಕಾರಣವಾದ ರಕ್ಷಣೆ ಅಗತ್ಯ. ಮಾನಹಾನಿ ಅಪರಾಧಕ್ಕೆ ಶಿಕ್ಷೆಯ ಕಠಿಣವಾಗಿಲ್ಲ ಎಂದು ಅದನ್ನು ಸದರವಾಗಿ ಪರಿಗಣಿಸಲಾಗದು. ರಾಜಕೀಯ ಪಕ್ಷಗಳನ್ನು ಮಾನಹಾನಿ ದಾವೆಯಿಂದ ಹೊರಗಿಡುವುದು ಮೇಲಿನ ದೃಷ್ಟಿಕೋನವನ್ನು ಮರೆಮಾಚುತ್ತದೆ” ಎಂದು ವಿವರಿಸಿದೆ.

“ಅರ್ಜಿದಾರ ಬಿಜೆಪಿ ಎಕ್ಸ್‌ (ಹಿಂದಿನ ಟ್ವಿಟರ್) ಖಾತೆಯಿಂದ ಮಾಡಲಾಗಿರುವ ಟ್ವೀಟ್‌ಗಳು ಯಾವುದೇ ದೃಷ್ಟಿಯಿಂದಲೂ ಮುಗ್ಧತೆ ಎಂದು ಹೇಳಲಾಗದು. ಟ್ವೀಟ್‌ನಲ್ಲಿನ ಆರೋಪಗಳು ಕ್ರೂರವಾಗಿವೆ. ಮತದಾರರ ಚೀಟಿಗಳು ನಕಲಿಯಾಗಿದ್ದು, ದೂರುದಾರರು ಆ ಹಗರಣದ ಹಿಂದಿದ್ದಾರೆ ಎಂದು ಹೇಳಲಾಗಿದೆ. ಆಕ್ಷೇಪಾರ್ಹ ಟ್ವೀಟ್‌ಗಳನ್ನು ನೋಡಿದರೆ ಅವು ರಿಜ್ವಾನ್‌ ಅರ್ಷದ್‌ ಅವರಿಗೆ ಮಾನಹಾನಿ ಉಂಟು ಮಾಡುತ್ತವೆ. ಪ್ರಕರಣದ ಸಂಜ್ಞೇ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಚುಟುಕು ವಿಚಾರಣೆ ನಡೆಸಿಲ್ಲ. ಈ ಪ್ರಕ್ರಿಯೆ ವಜಾ ಮಾಡಬೇಕು ಎಂದು ಕೋರಿರುವುದನ್ನು ಒಪ್ಪಲರ್ಹವಲ್ಲ” ಎಂದು ಪೀಠ ಹೇಳಿದೆ.

“ಸಂಸ್ಥೆಯೊಂದು ನಿಗಮಿತ (ಲಿಮಿಟೆಡ್‌) ಅಥವಾ ಅಲ್ಲವಾದರೂ ಒಟ್ಟಾರೆಯಾಗಿ ಶಾಸನದಲ್ಲಿ ಅದನ್ನು ವ್ಯಕ್ತಿ ಎಂದೇ ವ್ಯಾಖ್ಯಾನಿಸಲಾಗಿದೆ. ಹೀಗಾಗಿ, ಅದು ಮಾನಹಾನಿ ಅಪರಾಧಕ್ಕೆ ಪ್ರಕ್ರಿಯೆ ನಿರ್ವಹಿಸಲ್ಪಡುತ್ತದೆ; ಘನತೆಯ ವಿಚಾರವು ಸಾಮಾನ್ಯ ವ್ಯಕ್ತಿ ಕೇಂದ್ರಿತವಾಗಿಲ್ಲ. ಕಾನೂನಾತ್ಮಕ ವ್ಯಕ್ತಿಗಳಾದ ಸರ್ಕಾರಗಳು, ಕಂಪೆನಿಗಳು, ಭಕ್ತರು, ಟ್ರೇಡ್‌ ಯೂನಿಯನ್‌ಗಳು ಸಹ ಘನತೆ ಹೊಂದಬಹುದು. ಅಂಥ ವ್ಯಕ್ತಿಗಳ ವಿರುದ್ಧವೂ ಮಾನಹಾನಿ ಪ್ರಕ್ರಿಯೆ ಆರಂಭಿಸಬಹುದು. ಹೀಗಾಗಿ, ಐಪಿಸಿ ಸೆಕ್ಷನ್‌ 499 & 500ರಲ್ಲಿ ಉಲ್ಲೇಖಿಸಿರುವ ʼಯಾರಾದರೂʼ ಎಂಬ ಪದವು ವ್ಯಕ್ತಿಗತ ಸಂಸ್ಥೆ, ಅದು ನಿಗಮಿತ ಆಗಿದ್ದರೂ ಅಥವಾ ಆಗದಿದ್ದರು, ಹಾಲಿ ಅರ್ಜಿದಾರರಾಗಿರುವಂತೆ ಅಂಥ ಸಂಸ್ಥೆಗಳನ್ನು ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಆರೋಪಿಯನ್ನಾಗಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ರಿಜ್ವಾನ್‌ ಅರ್ಷದ್‌ ಪರವಾಗಿ ವಕೀಲ ಎಸ್‌ ಎ ಅಹಮದ್‌ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ನಿರ್ವಹಣೆಯ ಟ್ವಿಟರ್ ಅಕೌಂಟ್‌ನಲ್ಲಿ ನನ್ನ ವಿರುದ್ಧ ಟ್ವೀಟ್ ಮಾಡಲಾಗಿದೆ ಎಂಬುದು ಫಿರ್ಯಾದುದಾರರೂ ಆದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್‌ ಅರ್ಷದ್ ಆರೋಪಿಸಿದ್ದರು.

ನಕಲಿ ವೋಟರ್ ಐ ಡಿ ಕಾರ್ಡುಗಳನ್ನು ತಯಾರಿಸುವ ವೇಳೆ ಯುವ ಕಾಂಗ್ರೆಸ್ ಮುಖಂಡ ಖಲೀಲುಲ್ಲಾ ಇಬ್ರಾಹಿಂ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಈ ಅಕ್ರಮದ ಹಿಂದೆ ಬೆಂಗಳೂರು ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇದ್ದಾರೆ ಎಂದು ಟ್ವೀಟ್‌ನಲ್ಲಿ ಪ್ರಕಟಿಸಿಲಾಗಿದೆ ಎಂದು ರಿಜ್ವಾನ್‌ ಅರ್ಷದ್‌ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಸಂಜ್ಞೇಯ ಅಪರಾಧವನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು. ದೂರನ್ನು ರದ್ದುಗೊಳಿಸುವಂತೆ ಕೋರಿ ನಳಿನ್ ಕುಮಾರ್ ಕಟೀಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Attachment
PDF
BJP Vs Rizwan Arshad.pdf
Preview

Related Stories

No stories found.
Kannada Bar & Bench
kannada.barandbench.com