ವಸಾಹತುಶಾಹಿ ಆಡಳಿತಕ್ಕೆ ತೋರಿದ ಭಿನ್ನಾಭಿಪ್ರಾಯದ ರೀತಿಯನ್ನು ಸ್ವಯಂ ಆಡಳಿತದೊಂದಿಗೆ ಸಮೀಕರಿಸಲಾಗದು: ಸುಪ್ರೀಂ ತೀರ್ಪು

ನ್ಯಾಯಾಲಯದ ಆದೇಶದ ಹಿಂಬದಿಯಲ್ಲಿ ಅಡಗಿಕೊಳ್ಳುವ ಬದಲು ಆಡಳಿತಶಾಹಿಯು ಶಾಹಿನ್ ಬಾಗ್‌ನಲ್ಲಿ ಪ್ರತಿಭಟನಾನಿರತರನ್ನು ತೆರವುಗೊಳಿಸಲು ಪ್ರಯತ್ನಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
Shaheen bagh
Shaheen bagh

ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರತಿಭಟನೆಗೆ ಅಂಗೀಕಾರ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ವಸಾಹತುಶಾಹಿ ಆಡಳಿತದ ವಿರುದ್ಧದ ಭಿನ್ನಾಭಿಪ್ರಾಯದ ವಿಧಾನ-ರೀತಿಯನ್ನು ಈ ವರ್ಷದ ಆರಂಭದಲ್ಲಿ ನಡೆದ ಶಾಹೀನ್ ಬಾಗ್ ಹೋರಾಟದೊಂದಿಗೆ ಸಮೀಕರಿಸಲಾಗದು ಎಂದು ಬುಧವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಹೀಗೆ ಹೇಳಿದೆ.

“ಇಂದು ನಾವು ನೋಡುತ್ತಿರುವ ಭಾರತದ ಅಡಿಪಾಯವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆಳವಾಗಿ ಬಿತ್ತಲಾದ ಪ್ರತಿಭಟನೆಯ ಬೀಜಗಳಲ್ಲಿ ಕಾಣಬಹುದು. ಅವುಗಳು ಇಂದು ಪ್ರಜಾಪ್ರಭುತ್ವದ ಪುಷ್ಪವಾಗಿ ಅರಳಿನಿಂತಿವೆ. ಆದಾಗ್ಯೂ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ವಸಾಹತುಶಾಹಿ ಆಡಳಿತದ ವಿರುದ್ಧದ ಭಿನ್ನಾಭಿಪ್ರಾಯದ ವಿಧಾನ ಮತ್ತು ರೀತಿನೀತಿಗಳನ್ನು ಸ್ವಯಂ ಆಡಳಿತದ ಪ್ರಜಾಪ್ರಭುತ್ವದಲ್ಲಿನ ಭಿನ್ನಾಭಿಪ್ರಾಯದೊಂದಿಗೆ ಸಮೀಕರಿಸಲಾಗದು.”
ಸುಪ್ರೀಂ ಕೋರ್ಟ್

ಇತರರಿಗೆ ತೊಂದರೆಯಾಗುವ ರೀತಿಯಲ್ಲಿ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ನಡೆಸಲಾಗದು ಎಂದಿರುವ ನ್ಯಾಯಾಲಯವು ಹೀಗೆ ಹೇಳಿದೆ.

“...ಸಾರ್ವಜನಿಕ ಸ್ಥಳ ಹಾಗೂ ಹಾದಿಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಿದೆ. ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯ ಜೊತೆಜೊತೆಯಾಗಿ ಹೆಜ್ಜೆ ಹಾಕುತ್ತವೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಭಟನೆಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ನಡೆಸಬೇಕು” ಎಂದು ನ್ಯಾಯಪೀಠ ಹೇಳಿದೆ.

“ಪ್ರತಿಭಟನೆ ಮುನ್ನಡೆಸುವ ನಾಯಕತ್ವದ ಗೈರು ಮತ್ತು ಹಲವು ಗುಂಪುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಹಲವು ಮಂದಿ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಹವಣಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಶಾಹೀನ್ ಬಾಗ್ ಹೋರಾಟವು ಮಹಿಳೆಯರನ್ನು ಸಶಕ್ತಗೊಳಿಸುವ ಏಕೈಕ ಧ್ವನಿಯಾಗಿ ಉಳಿದಿಲ್ಲ. ಅಲ್ಲದೇ ಪ್ರತಿಭಟನೆಯನ್ನು ಹಿಂಪಡೆಯುವ ಸಾಮರ್ಥ್ಯವನ್ನೂ ಮಹಿಳೆಯರು ಹೊಂದಿರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯ ಜೊತೆಜೊತೆಯಲ್ಲಿ ಸಾಗುತ್ತವೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ನಡೆಸುವ ಹೋರಾಟಗಳನ್ನು ನಿಗದಿತ ಸ್ಥಳಗಳಲ್ಲಿ ನಡೆಸಬೇಕು. ಸದರಿ ಪ್ರಕರಣದಲ್ಲಿ ಅನಿಗದಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೇ ಸಾರ್ವಜನಿಕ ಹಾದಿಯನ್ನು ನಿರ್ಬಂಧಿಸಿದ್ದರಿಂದ ಸಂಚಾರಿಗಳಿಗೆ ತೀವ್ರ ಸಮಸ್ಯೆಯಾಯಿತು.”
ಸುಪ್ರೀಂ ಕೋರ್ಟ್

“ಸಾರ್ವಜನಿಕ ಹಾದಿಯನ್ನು ಸುತ್ತುವರಿಯುವುದು, ಪ್ರಶ್ನಾರ್ಹವಾದ ಸ್ಥಳದಲ್ಲಿ ಪ್ರತಿಭಟಿಸುವುದು ಅಥವಾ ಎಲ್ಲೆಂದರಲ್ಲಿ ಪ್ರತಿಭಟಿಸುವುದಕ್ಕೆ ನಮ್ಮ ಸಹಮತವಿಲ್ಲ ಎಂದು ಹೇಳುವುದಕ್ಕೆ ನಮಗೆ ಯಾವುದೇ ಅಳುಕಿಲ್ಲ. ಅಂಥ ಸ್ಥಳಗಳನ್ನು ಆಕ್ರಮಿಸುವುದು ಅಥವಾ ಅಡ್ಡಿ ಉಂಟು ಮಾಡುವವರ ವಿರುದ್ಧ ಆಡಳಿತಶಾಹಿ ಕ್ರಮಕೈಗೊಳ್ಳಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

“ಇಂಥದ್ದರ ವಿರುದ್ಧ ಯಾವ ರೀತಿಯ ಕ್ರಮಕೈಗೊಳ್ಳಬೇಕು ಎಂಬುದು ಆಡಳಿತಶಾಹಿಯ ಜವಾಬ್ದಾರಿಯಾಗಿದ್ದು, ಅವರುಗಳು ನ್ಯಾಯಾಲಯದ ಆದೇಶದ ಹಿಂಬದಿಯಲ್ಲಿ ಅಡಗಿಕೊಳ್ಳಬಾರದು ಅಥವಾ ತಮ್ಮ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ನ್ಯಾಯಾಲಯದ ಬೆಂಬಲ ಬಯಸಬಾರದು. ನ್ಯಾಯಾಲಯಗಳು ಕಾನೂನುಬದ್ಧತೆಯನ್ನು ನಿರ್ಣಯಿಸಲಿದ್ದು, ಕ್ರಮಕೈಗೊಳ್ಳಲು ಆಡಳಿತಶಾಹಿಗೆ ಹೆಗಲು ಕೊಡುವುದಿಲ್ಲ. ದುರದೃಷ್ಟವಶಾತ್, ಸಾಕಷ್ಟು ಸಮಯದ ವಿಳಂಬದ ಹೊರತಾಗಿಯೂ, ಆಡಳಿತಶಾಹಿಯು ಯಾವುದೇ ತೆರನಾದ ಮಾತುಕತೆ ಅಥವಾ ಕ್ರಮ ಕೈಗೊಂಡಿಲ್ಲ, ಹೀಗಾಗಿ ನಾವು ಹಸ್ತಕ್ಷೇಪ ಮಾಡಬೇಕಾಯಿತು” ಎಂದು ಹೇಳಿದೆ.

Also Read
[ಬ್ರೇಕಿಂಗ್] ಶಾಹೀನ್ ಬಾಗ್: ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲಾಗದು - ಸುಪ್ರೀಂ ತೀರ್ಪು

“ಡಿಜಿಟಲ್ ಮೂಲಸೌಕರ್ಯವು ಸಶಕ್ತ ಚಳುವಳಿಗೆ ಪೂರಕವಾಗಿ ಕೆಲಸ ಮಾಡಿದ್ದು, ಅವುಗಳು ಸಾಮಾನ್ಯವಾಗಿ ಬಯಸುವ ನಾಯಕತ್ವರಹಿತ ಆಕಾಂಕ್ಷೆಗಳನ್ನು ಅಪ್ಪಿಕೊಳ್ಳಲು ಮತ್ತು ಸಾಮಾನ್ಯವಾಗಿ ಎದುರಾಗುವ ಸೆನ್ಸಾರ್ ಶಿಪ್ ನಿರ್ಬಂಧಗಳಿಂದ ಮುಕ್ತವಾಗಿ ದಿಢೀರನೆ ಬೆಳೆಯಲು ಕಾರಣವಾಗಿದೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಚಾನೆಲ್‌‌ ಗಳ ಸಮಸ್ಯೆಯೇನೆಂದರೆ ಅವುಗಳು ಅಪಾಯಕಾರಿಯಾದ ಧ್ರುವೀಕರಣಗೊಂಡ ಪರಿಸರ ಸೃಷ್ಟಿಸಲು ಕಾರಣವಾಗಬಹುದು, ಇದು ಯಾವುದೇ ರಚನಾತ್ಮಕ ಫಲಿತಾಂಶಗಳಿಲ್ಲದೆ ಪರ್ಯಾಯ ಸಂಭಾಷಣೆಗಳಿಗೆ ಕಾರಣವಾಗುತ್ತದೆ. ಈ ಎರಡೂ ಸನ್ನಿವೇಶಗಳಿಗೆ ಶಾಹೀನ್ ಬಾಗ್‌ ಹೋರಾಟ ಸಾಕ್ಷಿಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯಾಗಿ ಆರಂಭವಾದ ಶಾಹೀನ್ ಬಾಗ್ ಹೋರಾಟವು ಮಹಿಳೆಯರು ಮತ್ತು ಅವರ ಹಿತಾಸಕ್ತಿ ಕಾಯುವ ಉದ್ದೇಶದಿಂದ ದೇಶದ ವಿವಿಧ ನಗರಗಳಿಗೆ ವ್ಯಾಪಿಸಿತು. ಇದೇ ವೇಳೆ ಸರಿಸಮವಾಗಿ ದೋಷಗಳನ್ನೂ ಒಳಗೊಂಡಿತ್ತು”

ಸುಪ್ರೀಂ ಕೋರ್ಟ್

“ಭವಿಷ್ಯದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಮತ್ತು ಪ್ರತಿಭಟನೆಗಳು ಕೆಲವು ಸಹಾನುಭೂತಿ ಮತ್ತು ಸಂಭಾಷಣೆಯೊಂದಿಗೆ ಮೇಲೆ ತಿಳಿಸಿದಂತೆ ಕಾನೂನು ಪರಿಧಿಗೆ ಒಳಪಟ್ಟಿರುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ, ಅವು ಕೈಮೀರುವುದಕ್ಕೆ ಅವಕಾಶ ನೀಡಲಾಗದು” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com