[ಬ್ರೇಕಿಂಗ್] ಶಾಹೀನ್ ಬಾಗ್: ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲಾಗದು - ಸುಪ್ರೀಂ ತೀರ್ಪು

ಪ್ರತಿಭಟಿಸುವ ಹಕ್ಕು ಸಂವಿಧಾನಾತ್ಮಕವಾಗಿ ಸಂರಕ್ಷಿತ ಹಕ್ಕಾಗಿದ್ದರೂ ಇತರೆ ನಾಗರಿಕರಿಗೆ ಅಡ್ಡಿಪಡಿಸುವ ರೀತಿಯಲ್ಲಿ ಅದನ್ನು ಬಳಸಲಾಗದು ಎಂದು ಸುಪ್ರೀಂ ಕೋರ್ಟ್‌ ನ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
Shaheen bagh
Shaheen bagh

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಹೋರಾಟದ ಸಂದರ್ಭದಲ್ಲಿ ಗಮನಸೆಳೆದಿದ್ದ ಶಾಹೀನ್ ಬಾಗ್ ಪ್ರತಿಭಟನೆಗಳ ಪೈಕಿ ಪ್ರತಿಭಟಿಸುವ ಹಕ್ಕು ಮತ್ತು ಜನರ ಇತರ ಹಕ್ಕುಗಳ ಸಮನ್ವಯ ಕುರಿತಾದ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠವು “ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವ ಜೊತೆಜೊತೆಯಲ್ಲಿಯೇ ನಡೆಯುತ್ತವೆ” ಎಂದೂ ಹೇಳಿದೆ.

ಪ್ರತಿಭಟಿಸುವ ಹಕ್ಕು ಸಂವಿಧಾನಾತ್ಮಕವಾಗಿ ಸಂರಕ್ಷಿತ ಹಕ್ಕಾಗಿದ್ದರೂ ಇತರೆ ನಾಗರಿಕರಿಗೆ ಅಡ್ಡಿಪಡಿಸುವ ರೀತಿಯಲ್ಲಿ ಅದನ್ನು ಬಳಸಲಾಗದು ಎಂದು ಹೇಳಿರುವ ನ್ಯಾಯಾಲಯವು ರಸ್ತೆಗಳನ್ನು ಆಕ್ರಮಿಸಲಾಗಿರುವುದನ್ನು ತೆರವುಗೊಳಿಸುವುದು ಆಡಳಿತಶಾಹಿಯ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ಆಡಳಿತದ ವೈಫಲ್ಯದಿಂದಾಗಿ ನ್ಯಾಯಾಲಯವು ಮಧ್ಯಪ್ರವೇಶಿಸಬೇಕಾಗಿದೆ ಎಂದು ಹೇಳಿದೆ.

ರಸ್ತೆಯಲ್ಲಿ ಉಂಟಾಗುವ ಅಡ್ಡಿ-ಆತಂಕಗಳನ್ನು ನಿವಾರಿಸಿ ಸರಕು-ಸರಂಜಾಮು ಸಾಗಿಸಲು ಅನುಕೂಲ ಮಾಡುವ ಕೆಲಸವನ್ನು ಆಡಳಿತವು ನಿರ್ವಹಿಸಬೇಕು. ಇದಕ್ಕಾಗಿ ನ್ಯಾಯಾಲಯದ ಆದೇಶ ಕಾಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೆಹಲಿಯ ಶಾಹಿನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದರಿಂದ ಪ್ರತಿಭಟನಾನಿರತ ಸ್ಥಳದ ಸಮೀಪವಿರುವ ಕಾಳಿಂದಿ ಕುಂಜ್ ರಸ್ತೆಯನ್ನು ತೆರವು ಮಾಡಿಸುವಂತೆ ಎರಡು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಮೊದಲ ಮನವಿಯನ್ನು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಮಿತ್ ಸಾಹ್ನಿ ಅವರು ಸಲ್ಲಿಸಿದ್ದು, ಪ್ರತಿಭಟನಾ ಸ್ಥಳದಲ್ಲಿ ಉದ್ಭವಿಸಿರುವ ತಡೆಯನ್ನು ತೆರವುಗೊಳಿಸಲು ನಿರ್ದಿಷ್ಟ ನಿರ್ದೇಶನ ನೀಡುವಂತೆ ಕೋರಿದ್ದರು. ಎರಡನೇ ಮನವಿಯನ್ನು ನಂದ ಕಿಶೋರ್ ಗಾರ್ಗ್‌ ಅವರು ಸಲ್ಲಿಸಿದ್ದು, ಕಲಿಂದಿ ಕುಂಜ್ ರಸ್ತೆಯಲ್ಲಿ ಪ್ರತಿಭಟನಾನಿರತರನ್ನು ತೆರವುಗೊಳಿಸುವಂತೆ ಕೋರಿದ್ದರು.

ಪ್ರತಿಭಟನಾನಿರತರ ಜೊತೆ ಚರ್ಚಿಸುವಂತೆ ಸಂವಾದಕರ ತಂಡಕ್ಕೆ ನ್ಯಾಯಾಲಯ ಸೂಚಿಸಿತ್ತು. ಸಂವಾದಕರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ವಕೀಲೆ ಸಾಧನಾ ರಾಮಚಂದ್ರನ್ ಅವರು ಫೆಬ್ರುವರಿ 26ರಂದು ನ್ಯಾಯಾಲಯಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು.

Also Read
ಶಾಹೀನ್‌ಬಾಗ್ ಪ್ರತಿಭಟನೆ: ಸಾರ್ವಜನಿಕ ಹಕ್ಕು ಮತ್ತು ಪ್ರತಿಭಟನೆ ಹಕ್ಕಿನ ಸಮನ್ವಯ ಕುರಿತ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಶಾಹಿನ್ ಬಾಗ್‌ನಲ್ಲಿ ತಿಂಗಳುಗಟ್ಟಲೆ ಶಾಂತಿಯುತವಾಗಿ ಪ್ರತಿಭಟನೆಗಳು ನಡೆದಿದ್ದು, ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಪ್ರತಿಭಟನಾನಿರತರನ್ನು ತೆರವುಗೊಳಿಸಲಾಗಿತ್ತು.

ಪ್ರತಿಭಟನೆಯ ಹಕ್ಕು ಜನರಿಗೆ ಇದೆ ಎಂಬುದನ್ನು ಒಪ್ಪಿದ್ದ ನ್ಯಾಯಾಲಯವು, ಅದೇ ವೇಳೆ ಚಲನೆ ಮತ್ತು ಸಂಚಾರದ ಹಕ್ಕುಗಳೂ ಸಾರ್ವಜನಿಕರಿಗೆ ಇವೆ. ಹಾಗಾಗಿ, ಇವುಗಳ ನಡುವೆ ಸಮನ್ವಯ ಕಾಪಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಅತ್ಯಂತ ಅಮೂಲ್ಯವಾಗಿದೆ. ಅದರಂತೆಯೇ ಸಾರ್ವಜನಿಕ ಹಕ್ಕುಗಳ ಪೈಕಿ ಚಲನೆಯ ಹಕ್ಕು ಮತ್ತು ಸುಗಮ ಸಂಚಾರದ ಹಕ್ಕುಗಳೂ ಇವೆ. ಇವುಗಳ ನಡುವಿನ ಸಮನ್ವಯ ಸಾಧಿಸುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Related Stories

No stories found.
Kannada Bar & Bench
kannada.barandbench.com