ತಾ.ಪಂ, ಜಿ.ಪಂ ಚುನಾವಣೆ: 10 ದಿನಗಳಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಅಧಿಸೂಚನೆ ಪ್ರಕಟಿಸಲು ಸರ್ಕಾರಕ್ಕೆ ಗಡುವು

2022ರ ಡಿಸೆಂಬರ್‌ 14ರ ಆದೇಶಕ್ಕೆ ಅನುಗುಣವಾಗಿ ಐದು ಲಕ್ಷ ದಂಡ ಪಾವತಿಸಲು ಸರ್ಕಾರ ಒಪ್ಪಿದ್ದು, ಒಂದು ವಾರದಲ್ಲಿ ಪಾವತಿಸುವುದಾಗಿ ತಿಳಿಸಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
Karnataka HC and election
Karnataka HC and election
Published on

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಇಂದಿನಿಂದ ಹತ್ತು ದಿನಗಳಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಗಡುವು ನೀಡಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅಡ್ವೊಕೇಟ್‌ ಜನರಲ್‌ ಅವರ ಹೇಳಿಕೆಯನ್ನು ಪರಿಗಣಿಸಿ, ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಅಧಿಸೂಚನೆ ಪ್ರಕಟಿಸಿದ ಬಳಿಕ, ವರದಿಯನ್ನು ಮುಂದಿನ ಕ್ರಮಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗಕ್ಕೂ ಸಲ್ಲಿಸಲಾಗುವುದು ಎಂದು ಎಜಿ ತಿಳಿಸಿದ್ದಾರೆ. ಆನಂತರ, ಅಂತಿಮ ಅಧಿಸೂಚನೆಯ ಬಳಿಕ ಮೀಸಲಾತಿ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಲಿದೆ. ಇದನ್ನೂ ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಸಲ್ಲಿಸಬೇಕು. ಈ ಆದೇಶ ಅನುಪಾಲನೆಗಾಗಿ ಎರಡು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಸಲಾಗುವುದು” ಎಂದು ಪೀಠ ಆದೇಶದಲ್ಲಿ ಹೇಳಿದೆ.

2022ರ ಡಿಸೆಂಬರ್‌ 14ರ ಆದೇಶಕ್ಕೆ ಅನುಗುಣವಾಗಿ ರೂ. ಐದು ಲಕ್ಷ ದಂಡ ಪಾವತಿಸಲು ಸರ್ಕಾರ ಒಪ್ಪಿದ್ದು, ಒಂದು ವಾರದಲ್ಲಿ ಪಾವತಿಸುವುದಾಗಿ ತಿಳಿಸಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ₹5 ಲಕ್ಷ ದಂಡ ವಿಧಿಸಿತ್ತು. 2023ರ ಜನವರಿ 28ರ ಒಳಗೆ ಐದು ಲಕ್ಷ ರೂಪಾಯಿ ದಂಡದ ಮೊತ್ತವನ್ನು ಪಾವತಿಸುವುದನ್ನು ಆಧರಿಸಿ ರಾಜ್ಯ ಸರ್ಕಾರದ ಕಾಲಾವಕಾಶ ವಿಸ್ತರಣೆ ಮನವಿಯನ್ನು ಪರಿಗಣಿಸಲಾಗಿದೆ. ಈ ಪೈಕಿ ತಲಾ ಎರಡು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಕೀಲರ ಸಂಘ ಹಾಗೂ ಒಂದು ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿತ್ತು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “2022ರ ಫೆಬ್ರವರಿ 1ರ ಒಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿ ನಿಗದಿಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಥಿತಿಗತಿ ವರದಿ ಸಲ್ಲಿಸಿದೆ. ನಾವು ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಳಿಸಿದ್ದೇವೆ. 2023 ಜನವರಿ 30ರಂದು ಸೀಮಾ ನಿರ್ಣಯ ಆಯೋಗವು ಕ್ಷೇತ್ರ ಪುನರ್‌ ವಿಂಗಡಣಾ ವರದಿ ಸಿದ್ಧಪಡಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಿದೆ” ಎಂದರು.

“ವಾರ್ಡ್‌ ಮೀಸಲಾತಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಲಾಗಿದ್ದು, ರಾಜಕೀಯ ಪ್ರಾತಿನಿಧ್ಯ ಪರಿಗಣಿಸಿ ಮೀಸಲಾತಿ ಕಲ್ಪಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದು ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿ ನಿಗದಿಗೊಳಿಸಲು 2023ರ ಏಪ್ರಿಲ್‌ 1ರವರೆಗೆ ಕಾಲಾವಕಾಶ ನೀಡಿದೆ” ಎಂದರು.

ಆಗ ಸಿಜೆ ವರಾಳೆ ಅವರು “ನೀವು ಸಲ್ಲಿಸಿರುವುದು ಸಂಹವನ ಮಾತ್ರ. ಸೂಕ್ತ ಅಧಿಸೂಚನೆ ಹೊರಡಿಸಬೇಕಲ್ಲವೇ?” ಎಂದರು.

Also Read
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬ: ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿ ಕಾಲಾವಕಾಶ ವಿಸ್ತರಿಸಿದ ಹೈಕೋರ್ಟ್‌

ಇದಕ್ಕೆ ಎಜಿ ಅವರು “ಅಧಿಸೂಚನೆಯು ಬೃಹತ್‌ ಗಾತ್ರದಲ್ಲಿದ್ದು, ಅದನ್ನು ಇಲ್ಲಿ ಹಾಜರುಪಡಿಸಲಾಗಿಲ್ಲ. ಇದನ್ನು ಸರ್ಕಾರಕ್ಕೆ ನೀಡಲಾಗಿದೆ. ಒಂದು ವಾರದಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು. ಸಚಿವ ಸಂಪುಟ ಮತ್ತು ಮುಖ್ಯಮಂತ್ರಿ ಅನುಮತಿ ಪಡೆಯಬೇಕಾಗಿರುವುದರಿಂದ ಅಧಿಸೂಚನೆ ಪ್ರಕಟಿಸುವುದು ತಡವಾಗಿದೆ. ತಕ್ಷಣ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಅಧಿಸೂಚನೆಯನ್ನು ಪ್ರಕಟಿಸುವ ಔಪಚಾರಿಕತೆಯಷ್ಟೆ ಬಾಕಿ ಇದೆ. ಬಿಬಿಎಂಪಿ ಪ್ರಕರಣದಲ್ಲಿ ರಾಜಕೀಯ ಮೀಸಲಾತಿ ನಿಗದಿಪಡಿಸಲು ಏಪ್ರಿಲ್‌ 1ರವರೆಗೆ ಸುಪ್ರೀಂ ಕೋರ್ಟ್‌ ಕಾಲಾವಕಾಶ ನೀಡಿದೆ. ಈ ಸಮಯದೊಳಗೆ ನಾವು ಮೀಸಲಾತಿ ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ನೀಡುತ್ತೇವೆ. ಆನಂತರ ಈ ಘನ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಆಯೋಗವು ಚುನಾವಣೆ ನಡೆಸುವ ವಿಚಾರದಲ್ಲಿ ಮುಂದುವರಿಯಬಹುದು” ಎಂದರು.

ಆಗ ಸಿಜೆ ಅವರು “ಯಾವಾಗ ಅಧಿಸೂಚನೆ ಪ್ರಕಟಿಸುತ್ತೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಎಜಿ ಅವರು “ಇಂದಿನಿಂದ ಒಂದು ವಾರದಲ್ಲಿ ಅಧಿಸೂಚನೆ ಪ್ರಕಟಿಸುತ್ತೇವೆ” ಎಂದರು.

ಬಳಿಕ ಸಿಜೆ ವರಾಳೆ ಅವರು ದಂಡ ವಿಧಿಸಿರುವುದರ ಬಗ್ಗೆ ಏನು ಹೇಳುತ್ತೀರಿ ಎಂದರು. ಇದಕ್ಕೆ ಎಜಿ “ದಂಡ ಪಾವತಿಯಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದೆವು. ದಂಡ ಪಾವತಿಯ ಉದ್ದೇಶವನ್ನು ಅರ್ಥಮಾಡಿಕೊಂಡಿರಲಿಲ್ಲ.ಈಗ ನ್ಯಾಯಾಲಯದ ಆದೇಶದಂತೆ ಹಣ ಪಾವತಿಸುತ್ತೇವೆ” ಎಂದರು.

Kannada Bar & Bench
kannada.barandbench.com