
ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ಘಟಿಸಿದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣದ ಸಂಬಂಧ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಜುಲೈ 11ರಂದು ನೀಡಿರುವ ವರದಿಯನ್ನು ರದ್ದುಗೊಳಿಸಲು ಕೋರಿ ಆರ್‌ಸಿಬಿ ವಿಜಯೋತ್ಸವದ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್ ಮೇಟ್ಟಿಲೇರಿದೆ.
ಮೆಸರ್ಸ್ ಬಿ ಕೆ ಸಂಪತ್ ಕುಮಾರ್ ಅಂಡ್ ಅಸೋಸಿಯೇಟ್ಸ್ ಮೂಲಕ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ನಿರ್ದೇಶಕ ಸುನಿಲ್ ಮ್ಯಾಥ್ಯೂ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಎಸ್ ಜಿ ಪಂಡಿತ್ ಅವರ ಪೀಠದ ಮುಂದೆ ಇಂದು ಬೆಳಿಗ್ಗೆ ಉಲ್ಲೇಖಿಸಿದ್ದು, ಪೀಠವು ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ವಿಚಾರಣಾ ಆಯೋಗವು ದಾಖಲಿಸಿರುವ ಸಾಕ್ಷಿಗಳ ಪಾಟೀ ಸವಾಲಿಗೆ ವಿಚಾರಣಾ ಆಯೋಗ ಕಾಯಿದೆ 1952ರಲ್ಲಿ ಅವಕಾಶವಿದೆ. ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಸಾಕ್ಷಿ ನೀಡಿರುವವರ ಪಾಟೀ ಸವಾಲಿಗೆ ಅರ್ಜಿದಾರರು ಕೋರಿದ್ದು, ಇದಕ್ಕೆ ನ್ಯಾ. ಕುನ್ಹಾ ಆಯೋಗ ನಿರಾಕರಿಸಿದೆ. ಹೀಗಾಗಿ, ಇಡೀ ವಿಚಾರಣಾ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.
ತನ್ನ ಸಾಕ್ಷಿಗಳು ಮತ್ತು ಇತರೆ ಸಾಕ್ಷಿಗಳು ದಾಖಲಿಸಿರುವ ಪ್ರತಿಯನ್ನು ಕೋರಲಾಗಿದ್ದು, ಅದನ್ನು ಆಯೋಗವು ನಿರಾಕರಿಸಿದೆ. ತಪ್ಪಾಗಿ ದಾಖಲಿಸಿರುವ ಉತ್ತರದತ್ತ ಬೆರಳು ಮಾಡಲು ಪ್ರತಿ ಕೇಳಿರುವುದಕ್ಕೆ ನಿರಾಕರಿಸಿರುವುದರಿಂದ ಆಕ್ಷೇಪಾರ್ಹ ವರದಿಯನ್ನು ವಜಾಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ತನ್ನ ಮತ್ತು ತನ್ನ ಅಧಿಕಾರಿಗಳ ವಿರುದ್ಧ ಮಾತನಾಡಿರುವ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವ ಉದ್ದೇಶದಿಂದ ಸಾಕ್ಷಿ ದಾಖಲಿಸಿರುವ ಪ್ರತಿಯನ್ನು ಕೋರಿರುವುದಕ್ಕೆ ನಿರಾಕರಿಸಲಾಗಿದೆ. ಈ ಸಂಬಂಧ ನಿರ್ಧಾರ ಕೈಗೊಂಡಿರುವುದನ್ನು ತಿಳಿಸಲು ನ್ಯಾ. ಕುನ್ಹಾ ಅವರು ನಿರಾಕರಿಸಿದ್ದು, ಜುಲೈ 3ರಂದು ತಾವು ನೀಡಿರುವ ಮೆಮೊಗೂ ಉತ್ತರಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ.
ವಿಚಾರಣಾ ಆಯೋಗ ಕಾಯಿದೆಯ ಪ್ರಕಾರ ವೈಯಕ್ತಿಕವಾಗಿ ವಾದ ಆಲಿಸಲು ಅವಕಾಶ ನೀಡಬೇಕು. ಅರ್ಜಿದಾರರ ವಿರುದ್ಧ ನೀಡುವ ಯಾವುದೇ ಹೇಳಿಕೆಯು ತಮ್ಮ ಮತ್ತು ಅಧಿಕಾರಿಗಳ ಘನತೆಗೆ ಪೂರ್ವಾಗ್ರಹ ಉಂಟು ಮಾಡಲಿದೆ. ಇದಕ್ಕೆ ಅನುಮತಿಸದೇ ಇರುವುದರಿಂದ ಆಕ್ಷೇಪಾರ್ಹವಾದ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಆಯೋಗವು ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿದ್ದು, ಇದು ವಾಸ್ತವಿಕ ಅಂಶಗಳನ್ನು ಪತ್ತೆ ಮಾಡುವ ಆಯೋಗಕ್ಕೆ ಬದಲಾಗಿ ದೋಷ ಹುಡುಕುವ ಆಯೋಗದ ರೀತಿಯಲ್ಲಿ ಕೆಲಸ ಮಾಡಿದೆ. ನ್ಯಾ. ಕುನ್ಹಾ ವರದಿಯಲ್ಲಿ ತನ್ನ ಇಬ್ಬರು ನಿರ್ದೇಶಕರತ್ತ ಬೆರಳು ಮಾಡಿದೆ ಎಂದು ಮಾಧ್ಯಮ ವರದಿಯಿಂದ ತಿಳಿದಿದೆ. ಈ ಪೈಕಿ ಒಬ್ಬ ನಿರ್ದೇಶಕರು ತನ್ನ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ದಾಖಲಿಸಿಲ್ಲ. ಹೀಗಾಗಿ, ಅದರ ಪ್ರತಿ ನೀಡುವಂತೆ ಕೋರಿದ್ದು, ಅದನ್ನೂ ನಿರಾಕರಿಸಲಾಗಿದೆ. ಆಕ್ಷೇಪಾರ್ಹವಾದ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ, ಅರ್ಜಿದಾರರಿಗೆ ನಿರಾಕರಿಸುವ ಮೂಲಕ ಪೂರ್ವ ನಿಯೋಜಿತವಾಗಿ ಆಯೋಗ ವರ್ತಿಸಿದೆ. ಈ ಮೂಲಕ ತನ್ನ ಮತ್ತು ತನ್ನ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಮಾಡಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ನ್ಯಾ. ಕುನ್ಹಾ ಅವರು ಆತುರದಿಂದ ತನಿಖೆ ನಡೆಸಿರುವುದನ್ನ ನೋಡಿದರೆ ಸರ್ಕಾರವು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ. ಪ್ರಕರಣದಿಂದ ನುಣಿಚಿಕೊಂಡು ಅರ್ಜಿದಾರರಂಥ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ.
ಕಾಲ್ತುಳಿತ ಪ್ರಕರಣವು ಕ್ರೀಡಾಂಗಣದ ಹೊರಗೆ ನಡೆದಿದ್ದು, ತಾನು ಕಾರ್ಯಕ್ರಮದ ಜವಾಬ್ದಾರಿಯನ್ನು ಕ್ರೀಡಾಂಗಣದ ಒಳಗೆ ಒಪ್ಪಿಕೊಂಡಿದ್ದು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಘಟನೆ ನಡೆದಿರುವ ಪ್ರದೇಶವು ಸರ್ಕಾರ ಮತ್ತು ಪೊಲೀಸರ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಂಬಂಧ ತಾನು ಸಲ್ಲಿಸಿರುವ ದಾಖಲೆಗಳನ್ನು ಆಯೋಗ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಪೊಲೀಸರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಅದಾಗಲೇ ಹಣ ಪಾವತಿಸಲಾಗಿತ್ತು. ಐಪಿಎಲ್ ಪಂದ್ಯಕ್ಕೆ ಬಂದೋಬಸ್ತ್ ನೀಡಲು ಪೊಲೀಸರು ಹಣ ಸಂಗ್ರಹಿಸಿದ್ದು, ಆ ಪಂದ್ಯವು ಲಖನೌಗೆ ಸ್ಥಳಾಂತರಗೊಂಡಿತ್ತು ಎಂಬ ಮಾಧ್ಯಮ ವರದಿಯನ್ನು ನ್ಯಾ. ಕುನ್ಹಾ ಆಯೋಗ ಪರಿಗಣಿಸಿಲ್ಲ. ನ್ಯಾ. ಕುನ್ಹಾ ಅವರಿಗೆ ಜೂನ್ 5ರಿಂದ ಅನ್ವಯಿಸುವಂತೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿತ್ತು. ಆನಂತರ ಸಮಯದ ವಿಸ್ತರಣೆ ನೀಡಿರಲಿಲ್ಲ. ಅದಾಗ್ಯೂ, ಸಮಯ ಮೀರಿ ನ್ಯಾ. ಕುನ್ಹಾ ಅವರು ಜುಲೈ 11ರಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.
ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಲ್ಲಿಸಿರುವ ಅರ್ಜಿಯಲ್ಲಿ, ಸರ್ಕಾರದ ಅನುಮತಿಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೊಮ್ಮೆ ಅನುಮತಿ ನಿರಾಕರಿಸಿದ್ದರೆ ಪೊಲೀಸರು ಕಾರ್ಯಕ್ರಮ ಆಯೋಜಿಸುವುದಕ್ಕೆ ತಡೆಯೊಡ್ಡಬೇಕಿತ್ತು. ಆದರೆ, ಬಂದೋಬಸ್ತ್ ಕಲ್ಪಿಸಿ, ಶುಲ್ಕ ಸಂಗ್ರಹಿಸುವುದು ಸೇರಿ ಹಲವು ಕ್ರಮಕೈಗೊಳ್ಳನ್ನು ಅವರು ಕೈಗೊಂಡಿದ್ದರು. ಸರ್ಕಾರದ ಪ್ರಮುಖರ ಸಮ್ಮುಖದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ.
ಮುಂದುವರೆದು, ವಿಧಾನಸೌಧದ ಮುಂಭಾಗದ ಕಾರ್ಯಕ್ರಮದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಸರ್ಕಾರ, ಪೊಲೀಸರು ಮಾಡಿರುವ ಟ್ವೀಟ್, ಸಂಚಾರ ದಟ್ಟಣೆಯ ಸೂಚನೆಗಳು, ಅಗ್ನಿಶಾಮಕ ದಳದ ಉಪಸ್ಥಿತಿ, ಶುಲ್ಕ ವಸೂಲಿ ಇತ್ಯಾದಿಯು ಅದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ, ಆಯೋಗದ ವರದಿ ಆಧರಿಸಿ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ.
ಮುಂಗಾರು ಅಧಿವೇಶನದಲ್ಲಿ ಆಕ್ಷೇಪಾರ್ಹವಾದ ವರದಿಯನ್ನು ಮಂಡಿಸಲಾಗುತಿದ್ದು, ಮಧ್ಯಂತರ ಕೋರಿಕೆಯನ್ನು ಪರಿಗಣಿಸದಿದ್ದರೆ ತನ್ನ ಮತ್ತು ತನ್ನ ಅಧಿಕಾರಿಗಳಿಗೆ ಅಪಾರ ಹಾನಿಯಾಗಲಿದೆ. ಇದರಿಂದ ಉಂಟಾಗಬಹುದಾದ ನಷ್ಟವನ್ನು ಯಾವುದೇ ರೀತಿಯಲ್ಲೂ ತಮಗೆ ತುಂಬಿಕೊಡಲಾಗುವುದಿಲ್ಲ. ಅಲ್ಲದೇ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದು, ಅದರಲ್ಲಿ ತಮಗೆ ಭಾರಿ ಪೂರ್ವಗ್ರಹ ಉಂಟಾಗಲಿದೆ ಎಂದು ಮಧ್ಯಂತರ ಕೋರಿಕೆಯ ಭಾಗವಾಗಿ ವಿವರಿಸಲಾಗಿದೆ.