ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜಬಲ್‌ಪುರ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಋತುಸ್ರಾವ ರಜೆ ಘೋಷಿಸಲಾಗಿದೆ.
ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ಈ ವಿಚಾರ ತಿಳಿಸಲಾಗಿದ್ದು ಆ ಮೂಲಕ ವಿದ್ಯಾರ್ಥಿನಿಯರಿಗೆ ಋತುಸ್ರಾವ ರಜೆ ನೀಡಬೇಕೆಂಬ ವಿದ್ಯಾರ್ಥಿ ವಕೀಲರ ಸಂಘದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಈಗ (ಪ್ರತಿ 6 ವಿಷಯಗಳಿಗೆ 6 ತರಗತಿಗಳಂತೆ) ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ಗೆ 36 ಉಪನ್ಯಾಸಗಳಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಹೊಸ ನೀತಿಯಿಂದಾಗಿ ವಿವಿಯ ಪೂರ್ಣಾವಧಿ ವಿದ್ಯಾರ್ಥಿನಿಯರು ಋತುಸ್ರಾವ ರಜೆ ಪಡೆಯಲಿದ್ದಾರೆ.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಅವರು ಋತುಸ್ರಾವ ರಜೆ ಅನುಮೋದಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ರಜೆ ನೀಡಿರುವುದಕ್ಕೆ ವಿದ್ಯಾರ್ಥಿ ಸಮುದಾಯ ಹರ್ಷ ವ್ಯಕ್ತಪಡಿಸಿದೆ. "ಜನವರಿ 26ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೊದಲು ಈ ಮನವಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳು ಈ ನೀತಿ ಜಾರಿಗೆ ತರಲು ಆಡಳಿತ ವರ್ಗವನ್ನು ಒತ್ತಾಯಿಸಿದ್ದು ಈಗ ಆಡಳಿತ ವರ್ಗ ಜಾರಿಗೆ ತಂದಿದೆ. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಸೇರಿದಂತೆ ಆಡಳಿತ ವರ್ಗಕ್ಕೆ ಹಾಗೂ ಇದಕ್ಕೆ ಸಮ್ಮತಿ ಸೂಚಿಸಿದ ಗೌರವಾನ್ವಿತ ಉಪಕುಲಪತಿಗಳಿಗೆ ನಾವು ಕೃತಜ್ಞರಾಗಿದ್ದೇವೆ" ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಿದ್ಧಕಾನೂನು ಸಂಸ್ಥೆಯಾದ, ಖೈತಾನ್ ಅಂಡ್ ಕೋ ಇತ್ತೀಚೆಗೆ ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀತಿ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.