ಗಣಿ ಚಟುವಟಿಕೆಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ ಎಂಬ ತೀರ್ಪು ಹೊರಬಿದ್ದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗಣಿ ನಿರ್ವಾಹಕರು ಪಾವತಿಸುವ ಗಣಿ ರಾಯಧನಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಥವಾ ಸೇವೆ ತೆರಿಗೆ ವಿಧಿಸಬೇಕೇ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಸಲಿದೆ.
ಆಗಸ್ಟ್ ಮೂರನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸಿಜೆಐ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ವಕೀಲರಾದ ಕಾರ್ತಿಕ್ ಸೇಠ್ ಮತ್ತು ಓಂಪ್ರಕಾಶ್ ಅಜಿತ್‌ಸಿಂಗ್ ಪರಿಹಾರ್ (ಅರ್ಜಿದಾರರ ಪರ ವಕೀಲ) ಮತ್ತು ವಕೀಲ ಭುವನ್ ಮಿಶ್ರಾ (ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು) ಅವರನ್ನು ನೋಡಲ್ ವಕೀಲರನ್ನಾಗಿ ಸುಪ್ರೀಂ ಕೋರ್ಟ್ ನೇಮಿಸಿದೆ.
ಅವರು ಸಂಬಂಧಪಟ್ಟ ವಿವಿಧ ದಾಖಲೆಗಳನ್ನು ಸಂಗ್ರಹಿಸಿ 7 ಆಗಸ್ಟ್ 2024ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಖನಿಜವನ್ನು ಅಗೆಯಲು ಗುತ್ತಿಗೆ ಹೊಂದಿರುವವರು ರಾಯಧನ ಪಾವತಿಗೆ ಸೇವಾ ತೆರಿಗೆ ಪಾವತಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಕೆಲದಿನಗಳ ಹಿಂದೆ ಅಂದರೆ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ʼಗಣಿ ನಿರ್ವಾಹಕರು ಕೇಂದ್ರ ಸರ್ಕಾರಕ್ಕೆ ಪಾವತಿಸುವ ರಾಯಧನ ತೆರಿಗೆಯಲ್ಲ. ಗಣಿಗಾರಿಕೆ ಮತ್ತು ಅದಿರು-ಬಳಕೆ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇದೆʼ ಎಂದು ತೀರ್ಪು ನೀಡಿತ್ತು. ನ್ಯಾ. ನಾಗರತ್ನ ಇದಕ್ಕೆ ವ್ಯತಿರಿಕ್ತವಾದ ತೀರ್ಪಿತ್ತಿದ್ದರು. ಗಣಿ ಮತ್ತು ಖನಿಜಭರಿತ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಶಾಸನಾತ್ಮಕ ಸಾಮರ್ಥ್ಯ ಇಲ್ಲ. ಇಂಡಿಯಾ ಸಿಮೆಂಟ್ ಪ್ರಕರಣದಲ್ಲಿ ನೀಡಲಾದ ತೀರ್ಪು ಸೂಕ್ತವಾಗಿಯೇ ಇದೆ ಎಂದು ಅವರು ನುಡಿದಿದ್ದರು.