ರಂಜಾನ್ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಮರ್ಕಜ್ ಮಸೀದಿ ತೆರೆಯಬಹುದು ಎಂದು ಹೇಳಿದ ಮಾರನೇ ದಿನವೇ ಕೋವಿಡ್ ಪರಿಷ್ಕೃತ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಸಭೆ ನಡೆಸಲು ಅಥವಾ ಒಗ್ಗೂಡಲು ಅವಕಾಶ ನೀಡಲಾಗದು ಎಂದು ಕೇಂದ್ರ ಸರ್ಕಾರವು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ (ದೆಹಲಿ ವಕ್ಫ್ ಮಂಡಳಿ ವರ್ಸಸ್ ಭಾರತ ಸರ್ಕಾರ ಮತ್ತು ಇತರರು).
ಏಪ್ರಿಲ್ 10ರಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದ ಪ್ರಕಾರ ಎಲ್ಲಾ ಸಾಮಾಜಿಕ/ರಾಜಕೀಯ/ಕ್ರೀಡೆ/ ಮನರಂಜನೆ/ ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ/ಹಬ್ಬಕ್ಕೆ ಸಂಬಂಧಿಸಿದ ಸಭೆ ನಡೆಸುವುದು ಮತ್ತು ಒಗ್ಗೂಡುವುದನ್ನು ನಿಷೇಧಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಮುಕೇಶ್ ಗುಪ್ತ ಅವರಿದ್ದ ಏಕಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿಲುವಿನ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿನ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಇತ್ಯಾದಿಗಳ ಕಡೆ ಹೇಗೆ ಈ ಮಾರ್ಗಸೂಚಿಯ ನಿರ್ದೇಶನಗಳನ್ನು ಜಾರಿಗೊಳಿಸಲಾಗುತ್ತದೆ ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಮುಂದಿನ ವಿಚಾರಣೆಯವರೆಗೆ ದಿನಂಪ್ರತಿ ಐದು ಬಾರಿ, ಐವರು ನಾಮನಿರ್ದೇಶಿತ ಸದಸ್ಯರು ನಮಾಜ್ ಮಾಡಲು ಕಲ್ಪಿಸಲಾಗಿರುವ ಅನುಮತಿ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿಜಾಮುದ್ದೀನ್ ಮಸೀದಿಯನ್ನು ತೆರೆಯುವಂತೆ ಕೋರಿ ದೆಹಲಿ ವಕ್ಫ್ ಮಂಡಳಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಪೀಠ ನಡೆಸಿತು. ಕಳೆದ ವರ್ಷ ಕೋವಿಡ್ ವ್ಯಾಪಿಸಿದ್ದ ಸಂದರ್ಭದಲ್ಲಿ ತಬ್ಲೀಘಿ ಜಮಾತ್ ಸಭೆ ನಡೆಸಿದ್ದರಿಂದ ಮಸೀದಿಯು ಸುದ್ದಿಯಲ್ಲಿತ್ತು.
ಅನ್‌ಲಾಕ್ ಮೊದನಲೇ ಹಂತದಲ್ಲಿ ಕಂಟೈನ್‌ಮೆಂಟ್ ವಲಯದ ಹೊರಗಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿಸಲಾಗಿದ್ದು, ಕಳೆದ ಮಾರ್ಚ್‌ನಿಂದ ಮಸೀದಿ ತೆರೆಯಲು ಅನುಮತಿ ನೀಡಲಾಗಿಲ್ಲ ಎಂದು ವಕ್ಫ್ ಮಂಡಳಿ ಅಹವಾಲು ಸಲ್ಲಿಸಿದೆ. ರಂಜಾನ್ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿಸುವಂತೆ ಮಂಗಳವಾರ ಮಂಡಳಿಯು ಪ್ರಸ್ತಾವ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಬಯಸಿತ್ತು.
ರಿಟ್ ಮನವಿಯ ಕುರಿತು ಇನ್ನಷ್ಟೇ ನಿರ್ಣಯ ಕೈಗೊಳ್ಳಬೇಕಿರುವುದರಿಂದ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪೀಠ ಹೇಳಿದೆ. ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನುತುಲ್ಲಾ ಖಾನ್ ಅವರು ನ್ಯಾಯಾಲಯವು ಮಸೀದಿ ತೆರೆಯಲು ಅನುಮತಿಸಿದೆ ಎಂದು ಹೇಳಿರುವುದು ದುರದೃಷ್ಟಕರ ಎಂದು ಪೀಠ ಹೇಳಿದೆ. ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.