ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಶೇಷ ವಿಚಕ್ಷಣಾ ಕಾರ್ಯದರ್ಶಿ ಕಚೇರಿಯಿಂದ ಅನಧಿಕೃತವಾಗಿ ತೆಗೆದುಹಾಕಲಾಗಿದೆ ಎಂದು ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ದೆಹಲಿ ಸರ್ಕಾರ ಮತ್ತು ಲೆ. ಗವರ್ನರ್ ಅಧಿಕಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ದಿನವೇ ದಾಖಲೆಗಳನ್ನು ತೆಗೆದುಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ ವಿಶೇಷ ವಕೀಲ ಜೋಹೆಬ್ ಹೊಸೈನ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರೆದುರು ಈ ವಾದ ಮಂಡಿಸಲಾಯಿತು. ದಾಖಲೆಗಳನ್ನು ತೆಗೆದುಹಾಕಿರುವ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೊಸೈನ್ ತಿಳಿಸಿದರು.
ಆದರೆ ಈ ವಾದಕ್ಕೆ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮೋಹಿತ್ ಮಾಥುರ್ ಇನ್ನೂ ತನಿಖೆ ನಡೆಯುತ್ತಿದೆಯೇ? ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಸಿಸೋಡಿಯಾ ಅವರು ಜೈಲಿನಲ್ಲಿದ್ದಾರೆ. ಇದು ಪೂರ್ವಾಗ್ರಹದಿಂದ ಕೂಡಿದ ವಾದವಾಗಿದೆ ಎಂದರು.
ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಹಣ ವರ್ಗಾವಣೆ ಪ್ರಕರಣದ ಮಧ್ಯಂತರ ಜಾಮೀನು ಅರ್ಜಿ ಮತ್ತು ಸಾಮಾನ್ಯ ಜಾಮೀನು ಅರ್ಜಿಯ ತೀರ್ಪನ್ನು ಶುಕ್ರವಾರವೇ (ಜೂನ್ 2) ನ್ಯಾಯಾಲಯ ಕಾಯ್ದಿರಿಸಿದ್ದು ಶನಿವಾರ ನ್ಯಾಯಾಲಯದ ವಿಶೇಷ ಕಲಾಪ ನಡೆಯಿತು.
ತೀರ್ಪು ಕಾಯ್ದಿರಿಸಿದ ನ್ಯಾ. ಶರ್ಮಾ ಅವರು ಮಧ್ಯಂತರ ಜಾಮೀನು ಅರ್ಜಿಯನ್ನು ಅಧ್ಯಯನ ಮಾಡಿದ ಬಳಿಕ ಆ ಬಗ್ಗೆ ಆಲಿಸಬೇಕಿದೆ ಎಂದು ತಿಳಿಸಿದರು. ತಮ್ಮ ಪತ್ನಿಯ ಆರೋಗ್ಯ ಸ್ಥಿತಿ ಸರಿ ಇಲ್ಲ ಎಂಬ ಆಧಾರದಲ್ಲಿ ಸಿಸೋಡಿಯಾ ಅವರು ತಮಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ ಹೊಸೈನ್ ಅವರು, ಸಿಸೋಡಿಯಾ ಪತ್ನಿ ಎರಡು ದಶಕಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಆರು ವಾರಗಳ ಜಾಮೀನು ಮಂಜೂರಾತಿಯಿಂದ ಅಂತಹ ವ್ಯತ್ಯಾಸವಾಗದು ಎಂದರು.
ವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿತು. ಇದೇ ವೇಳೆ ಶನಿವಾರ ಸಂಜೆಯೊಳಗೆ ಸಿಸೋಡಿಯಾ ಪತ್ನಿ ದಾಖಲಾಗಿದ್ದ ಎಲ್‌ಎನ್‌ಜೆಪಿ ಆಸ್ಪತ್ರೆ ವರದಿ ನೀಡಬೇಕು ಎಂದು ಅದು ಸೂಚಿಸಿತು.