ಭೌತಿಕ ವಿಚಾರಣೆಯಿಂದ ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಇಟ್ಟಂತಾಗುತ್ತದೆ: ಮುಂಬೈ ವಕೀಲರು

ಭೌತಿಕ ಕಲಾಪ ಆರಂಭಿಸಲು ಬಾಂಬೆ ಹೈಕೋರ್ಟ್ ಮುಂದಾದ ಬೆನ್ನಲ್ಲೇ ಮುಂಬೈ ನಗರದ ವಿವಿಧ ವಕೀಲರು‌ ಭಾನುವಾರ ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಹೈಕೋರ್ಟ್‌ ತನ್ನ ಆದೇಶವನ್ನು ಮರುಪರಿಶೀಲಿಸಬೇಕೆಂದು ಬಾಂಬೆ ವಕೀಲರ ಸಂಘ ಮನವಿ ಮಾಡಿದೆ.
Chief Justice Dipankar Datta, Bombay HC
Chief Justice Dipankar Datta, Bombay HC
Published on

ಮುಂಬೈನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ 452 ವಕೀಲರು ಹಾಗೂ ಬಾಂಬೆ ವಕೀಲರ ಸಂಘ (ಬಿಬಿಎ) ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭೌತಿಕ ಅಥವಾ ವರ್ಚುವಲ್‌ ಕಲಾಪದ ಆಯ್ಕೆಯನ್ನು ವಕೀಲರಿಗೇ ಬಿಡಬೇಕು ಎಂದು ಕೋರಿದ್ದಾರೆ. ಡಿ. 1ರಿಂದ ಜ. 10ರವರೆಗೆ ಪ್ರಾಯೋಗಿಕವಾಗಿ ವಿವಿಧ ಪೀಠಗಳಲ್ಲಿ ಭೌತಿಕ ಕಲಾಪ ಆರಂಭಿಸಲು ಬಾಂಬೆ ಹೈಕೋರ್ಟ್‌ ಶುಕ್ರವಾರ ಕಚೇರಿ ಆದೇಶ ಹೊರಡಿಸಿದ ಬೆನ್ನಲ್ಲೇ ಭಾನುವಾರ ಈ ಮನವಿ ಮಾಡಲಾಗಿದೆ. ಆದೇಶದಲ್ಲಿ ಸೂಕ್ತ ಮಾರ್ಪಾಡು ಮಾಡುವಂತೆ ಬಿಬಿಎ ಕೋರಿದೆ.

ಭೌತಿಕ ಕಲಾಪ ಆರಂಭಿಸಲು ಮುಂದಾಗಿ ವೈರಸ್‌ ಹರಡಿದ್ದರಿಂದ ದೇಶದ ವಿವಿಧ ಹೈಕೋರ್ಟ್‌ಗಳು ಆ ನಿರ್ಧಾರದಿಂದ ಹಿಂದೆ ಸರಿದಿವೆ ಎಂದು ಅನೇಕ ವಕೀಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. “ಭೌತಿಕ ಕಲಾಪ ಆರಂಭಿಸುವುದರಿಂದ ಸಾಂಕ್ರಾಮಿಕ ರೋಗ ಮತ್ತಷ್ಟು ಹರಡುವ ಭೀತಿ ಇದೆ. ವಕೀಲರು, ನ್ಯಾಯಾಂಗ ಸಿಬ್ಬಂದಿ ಮಾತ್ರವಲ್ಲದೆ ಕುಟುಂಬಗಳ ಹಿರಿಯ ಸದಸ್ಯರು ಕೂಡ ಕಾಯಿಲೆಗೆ ತುತ್ತಾಗುವ ಭೀತಿ ಇದೆ” ಎಂದು ದೆಹಲಿ, ರಾಜಸ್ಥಾನ, ಕರ್ನಾಟಕ, ಚೆನ್ನೈ, ಪಾಟ್ನಾ, ಅಲಾಹಾಬಾದ್, ಜಾರ್ಖಂಡ್ ಮತ್ತು ಮೇಘಾಲಯ ಹೈಕೋರ್ಟ್‌ಗಳ ಉದಾಹರಣೆಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ತಬ್ಲೀಘಿಗಳನ್ನು ಹರಕೆಯ ಕುರಿಯಾಗಿಸಲಾಗಿದೆ, ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ: ಬಾಂಬೆ ಹೈಕೋರ್ಟ್‌

ಭೌತಿಕ ವಿಚಾರಣೆ ಆರಂಭಿಸುವುದರಿಂದ "ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ" ಇಡುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಭೌತಿಕ ಕಲಾಪ ಆರಂಭಿಸಿದರೆ ಸಾಂಕ್ರಮಿಕ ರೋಗವನ್ನು ಹತೋಟಿಗೆ ತರುವುದು ಅಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಭೌತಿಕ ವಿಚಾರಣೆಗೆ ಮುಂದಾದರೂ ಅವು ಐಚ್ಛಿಕವಾಗಿರಬೇಕು ಮತ್ತು ಒತ್ತಾಯಪೂರ್ವಕವಾಗಿರಬಾರದು ಎಂದು ದೆಹಲಿ ಸರ್ಕಾರದ ಆದೇಶವನ್ನು ಪ್ರಸ್ತಾಪಿಸಿ ವಿನಂತಿ ಮಾಡಿಕೊಳ್ಳಲಾಗಿದೆ.

ಅಲ್ಲದೆ ವಕೀಲರಿಗೆ ಮುಂಬೈನಲ್ಲಿ ಬೆಳಿಗ್ಗೆ 11ರ ನಂತರ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಲು ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮತ್ತೊಂದೆಡೆ ಬಹುತೇಕ ವಕೀಲರು ತಮ್ಮ ಸ್ವಂತ ಊರುಗಳಿಗೆ ಮರಳಿದ್ದಾರೆ. ಅವರೆಲ್ಲರನ್ನೂ ಮುಂಬೈಗೆ ಮರಳುವಂತೆ ಒತ್ತಾಯಿಸಿದರೆ ನಗರದಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚುತ್ತದೆ. ನ್ಯಾಯಾಲಯದ ಸಾಮಾನ್ಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಬಳಸುವುದರಿಂದ ಅವುಗಳ ಶುಚಿತ್ವ ಕಾಪಾಡಿಕೊಳ್ಳುವುದು ಕಷ್ಟಕರವಾಗುತ್ತದೆ ಎಂದು ವಕೀಲರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಮುಖ್ಯ ನ್ಯಾಯಾಧೀಶರು ವರ್ಚುವಲ್‌ ಕಲಾಪಗಳ ಜೊತೆಗೆ ಭೌತಿಕ ಕಲಾಪಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಏರ್ಪಡುತ್ತದೆ ಎಂಬ ಅಂಶದ ಮೂಲಕವೂ ಗಮನ ಸೆಳೆಯಲಾಗಿದೆ.

ಇತರೆ ನ್ಯಾಯಾಲಯಗಳು ಭೌತಿಕ ಹಾಗೂ ವರ್ಚುವಲ್‌ ನ್ಯಾಯಾಲಯಗಳೆರಡರ ಹೈಬ್ರಿಡ್‌ ವ್ಯವಸ್ಥೆಯನ್ನು ಪ್ರಾರಂಭಿಸಬಹುದಾಗಿದ್ದು ತಡೆರಹಿತ ವ್ಯವಸ್ಥೆ ಸ್ಥಾಪಿಸುವಲ್ಲಿ ನ್ಯಾಯಾಲಯದ ತಾಂತ್ರಿಕ ತಂಡಕ್ಕೆ ಸಹಕರಿಸಲು ತಾಂತ್ರಿಕ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಬಿಬಿಎ ತಿಳಿಸಿದೆ. ಯಶಸ್ವಿಯಾಗಿರುವ ವರ್ಚುವಲ್‌ ಕಲಾಪ ವ್ಯವಸ್ಥೆಯನ್ನು ಡಿಸೆಂಬರ್ 31ರವರೆಗೆ ಮುಂದುವರೆಸಬಹುದು ಎಂದು ವಕೀಲರು ಒತ್ತಾಯಿಸಿದ್ದಾರೆ.

Kannada Bar & Bench
kannada.barandbench.com