ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಕಾರ್ಯಕಾರಿ ಸಮಿತಿ ಮಂಡಳಿಯನ್ನು ಪುನರ್ ರಚಿಸಲು ಮತ್ತು ಅದರ ಆಡಳಿತ ಮಂಡಳಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಆಯಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿ ಇತರೆ ನ್ಯಾಯಾಂಗ ವಲಯದ ಸ್ಥಳೀಯ ಪ್ರತಿನಿಧಿಗಳಿಗೆ ಸ್ಥಾನ ಕಲ್ಪಿಸಲು 1986ರ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲಾ ಕಾಯಿದೆಗೆ (ಕರ್ನಾಟಕ ಕಾಯಿದೆ 22- 1986) ತಿದ್ದುಪಡಿ ಮಾಡುವಂತೆ ವಕೀಲರು ಆಗ್ರಹಿಸಿದ್ದಾರೆ.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಸೇರಿ ಹಲವು ವಕೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿಗೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಕಾನೂನು ಶಿಕ್ಷಣದಲ್ಲಿ ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದ್ದು, ಇದು 1986ರ ಕಾಯಿದೆಯಡಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಕರ್ನಾಟಕ ವಿಧಾನ ಮಂಡಲ ಅನುಮೋದಿಸಿದೆ. ಈ ಕಾಯಿದೆಯ ಮೂಲಕ ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ಶಾಸನ ರೂಪಿಸಲಾಗಿತ್ತು. ಅದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಆನಂತರ ಎನ್‌ಎಲ್‌ಎಸ್‌ಐಯು ತನ್ನ 2021ರ ವಿಸ್ತರಣಾ ಯೋಜನೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲು ನೀಡಲು ಉದ್ದೇಶಿಸಿತ್ತು. ಆದರೆ, ಅದನ್ನು ಜಾರಿಗೊಳಿಸಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಸದ್ಯ ಎನ್‌ಎಲ್‌ಎಸ್‌ಐಯು ಆಡಳಿತವನ್ನು ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ನಿರ್ವಹಿಸುತ್ತಿವೆ. ಇವುಗಳಲ್ಲಿ ರಾಜ್ಯದ ಪ್ರತಿನಿಧಿಗಳಿಗೆ ಸ್ಥಾನ ಕಲ್ಪಿಸಿಲ್ಲ. ಹೀಗಾಗಿ, ಈ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಮೂಲದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರು, ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಸೇರಿದಂತೆ ಸ್ಥಳೀಯ ಪ್ರತಿನಿಗಳನ್ನು ಸೇರಿಸಬೇಕು. ಅದಕ್ಕಾಗಿ ಕಾನೂನು ತಿದ್ದುಪಡಿ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕೇವಲ ನಾಮಕಾವಸ್ತೆಗಾಗಿ ಇರುವ ಪ್ರತಿನಿಧಿತ್ವ ಸಾಕಾಗುವುದಿಲ್ಲ. ಕರ್ನಾಟಕ ಮೂಲದ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ನಿಜವಾದ ಪ್ರಾತಿನಿಧ್ಯ ದೊರಕಬೇಕು. ಹೀಗಾಗಿ, ಕಾನೂನು ತಿದ್ದುಪಡಿ ಮಾಡುವ ಕುರಿತಂತೆ ಮುಂಬರುವ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೂ ರಂಗನಾಥ್ ಅವರು ಪತ್ರ ಬರೆದಿದ್ದರು. “ಅಖಿಲ ಭಾರತ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸ್ಥಳೀಯ ವಿಭಾಗದಲ್ಲಿ ಸೇರ್ಪಡೆ ಮಾಡಬಾರದು. ಮುಂದಿನ ಶೈಕ್ಷಣಿಕ ವರ್ಷ (2023ರ ಜುಲೈ) ಆರಂಭವಾಗಲು ಇನ್ನೂ ಸಾಕಷ್ಟು ಕಾಲಾವಕಾಶವಿದ್ದು, ಪ್ರವೇಶಾತಿ ಪ್ರಕ್ರಿಯೆಯನ್ನು ಅಮಾನತಿನಲ್ಲಿಡಬೇಕು. ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಮೀಸಲಾತಿ ನೀತಿ ಜಾರಿ ಮಾಡಲು ಎನ್‌ಎಲ್‌ಎಸ್‌ಐಯು ಕುಲಪತಿಗೆ ನಿರ್ದೇಶಿಸಬೇಕು” ಎಂದು ಕೋರಲಾಗಿತ್ತು.