ಎನ್‌ಎಲ್‌ಎಸ್‌ಐಯುನಲ್ಲಿ ಸ್ಥಳೀಯ ಮೀಸಲಾತಿ: ಸರ್ಕಾರದ ವಾದಕ್ಕೆ ಸಿಜೆಐ ಬೆಂಬಲ; ಸದನಕ್ಕೆ ಸಚಿವ ಮಾಧುಸ್ವಾಮಿ ವಿವರಣೆ

ವಿಚಾರ ಸೂಕ್ಷ್ಮವಾಗಿದ್ದು, ಅದನ್ನು ಮುಕ್ತವಾಗಿ ಮಾತನಾಡಲಾಗದು. ಆಡಳಿತ ಮಂಡಳಿಯ ಮುಖ್ಯಸ್ಥರು ಸಿಜೆಐ ಆಗಿದ್ದು, ಸಂಧಾನ-ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದು ಸೂಕ್ತ ಎಂದ ಶಾಸಕ ಕೃಷ್ಣ ಬೈರೇಗೌಡ.
NLSIU
NLSIU

ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ವಾದ ಸರಿಯಾಗಿದೆ ಎಂದು ಕಾರ್ಯಕಾರಿ ಸಭೆಯಲ್ಲಿ ಈಚೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರು ಹೇಳಿದ್ದಾರೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಮಂಗಳವಾರ ಸದನಕ್ಕೆ ತಿಳಿಸಿದರು.

ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಕಲ್ಪಿಸದಿರುವುದಕ್ಕೆ ಆಕ್ಷೇಪಿಸಿ ಶಾಸಕ ಎಸ್‌ ಸುರೇಶ್‌ ಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಸುದೀರ್ಘವಾದ ಲಿಖಿತ ಉತ್ತರವನ್ನು ಕಾನೂನು ಸಚಿವರು ಒದಗಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಮೀಸಲಾತಿಗೆ ಸಂಬಂಧಿಸಿದಂತೆ ಸುರೇಶ್‌ ಕುಮಾರ್‌ ಅವರು ಚರ್ಚೆಗೆ ನಾಂದಿ ಹಾಡಿದರು.

“ಕಾನೂನು ಸಚಿವರ ಉತ್ತರವು ಸರಿಯಾಗಿದೆ. ಆದರೆ, ಎನ್‌ಎಲ್‌ಎಸ್‌ಐಯುಗೆ ರಾಜ್ಯ ಸರ್ಕಾರದಿಂದ 23 ಎಕರೆ ಭೂಮಿ ನೀಡಲಾಗಿದೆ. 22 ಕೋಟಿ ರೂಪಾಯಿಯನ್ನು ನೀಡಲಾಗಿದ್ದು, 2020ರಲ್ಲಿ ಕಾನೂನಿಗೆ ತಿದ್ದುಪಡಿ ಸಹ ತರಲಾಗಿದೆ. ಈ ಮೂಲಕ ಸ್ಥಳೀಯ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, 2021 ಮತ್ತು 22ರಲ್ಲಿ ಮೀಸಲಾತಿ ಕಲ್ಪಿಸಲಾಗಿಲ್ಲ. ದೇಶದಲ್ಲಿ 24 ಕಾನೂನು ಶಾಲೆಗಳಿವೆ. ಅವೆಲ್ಲವೂ ಸ್ಥಳೀಯ ಮೀಸಲಾತಿ ಕಲ್ಪಿಸಿವೆ. ಹಾಗಾದರೆ ಬೆಂಗಳೂರಿನ ಕಾನೂನಿನ ವಿಶ್ವವಿದ್ಯಾಲಯವು ತನ್ನನ್ನು ತಾನು ಏನೆಂದುಕೊಂಡಿದೆ? ಎನ್‌ಎಲ್‌ಎಸ್‌ಐಯುಗೆ ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವರು ಪತ್ರ ಬರೆದಿದ್ದಾರೆ. ಇದೆಲ್ಲದರ ಹೊರತಾಗಿ ಕನ್ನಡದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಅವಕಾಶ ಕಲ್ಪಿಸಲು ಸರ್ಕಾರ ಯಾವ ಕ್ರಮಕೈಗೊಂಡಿದೆ” ಎಂದು ಪ್ರಶ್ನಿಸಿದರು.

ಇದಕ್ಕೆ ಸಚಿವ ಮಾಧುಸ್ವಾಮಿ ಅವರು “ಕರ್ನಾಟಕದಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇ. 25 ಮೀಸಲಾತಿ ಕಲ್ಪಿಸಲು ಶಾಸನ ಜಾರಿಗೊಳಿಸಿದ್ದೇವೆ. ದುರದೃಷ್ಟಕರ ಬೆಳವಣಿಗೆ ಎಂದರೆ ಅದಕ್ಕೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಅಂದಿನ ಸಿಜೆಐ ಅವರು ಸಂಘರ್ಷ ಬೇಡ ಎಂದು ಶೇ. 25ರಷ್ಟು ಮೀಸಲಾತಿ ಕೊಡಿ ಎಂದು ಸೂಚಿಸಿದ್ದಾರೆ ಎಂದು ತಿಳಿದಿದ್ದೆವು. ಆನಂತರ ಮೀಸಲಾತಿ ನೀಡಲಾಗಿತ್ತು. ಆದರೆ, ಕಳೆದು ಎರಡು ವರ್ಷಗಳಿಂದ ಸ್ಥಳೀಯ ಮೀಸಲಾತಿಯಲ್ಲಿ ವ್ಯತ್ಯಾಸವಾಗಿರುವ ವಿಚಾರ ಗಮನಕ್ಕೆ ಬಂದಿತ್ತು. ಸಾಮಾನ್ಯ ವರ್ಗದಲ್ಲಿ ಅರ್ಹತೆ ಗಳಿಸಿರುವ ಕನ್ನಡಿಗ ವಿದ್ಯಾರ್ಥಿಗಳನ್ನೂ ಶೇ. 25ರ ಸ್ಥಳೀಯ ಮೀಸಲಾತಿ ಕೋಟಾದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ಇದಕ್ಕೆ ಆಕ್ಷೇಪಿಸಿ ಅಲ್ಲಿನ ಕುಲಪತಿಗೆ ಪತ್ರ ಬರೆದಿದ್ದೆ. ಆನಂತರ ಉನ್ನತ ಶಿಕ್ಷಣ ಸಚಿವರೂ ಪತ್ರ ಬರೆದಿದ್ದರು. ನಾವಿಬ್ಬರೂ ಅಲ್ಲಿನ ಆಡಳಿತ ಮಂಡಳಿ ಸದಸ್ಯರಾಗಿದ್ದೇವೆ. ಇದಕ್ಕೆ ಕುಲಪತಿ ಅವರು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ನಾವು ಮೀಸಲಾತಿ ನೀಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು. ಆನಂತರ ನಾವು ಕಿರಿಕಿರಿಯಾಗಿ ಸುಮ್ಮನಾಗಿದ್ದೆವು” ಎಂದು ವಿವರಿಸಿದರು.

ಮುಂದುವರಿದು, “ಈಗ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರವರಿ 24ಕ್ಕೆ ವಿಚಾರಣೆಗೆ ಬರಲಿದೆ. ಇದಕ್ಕಾಗಿ ಸಮರ್ಥ ವಕೀಲರನ್ನು ನಿಯೋಜಿಸಲಾಗಿದೆ. ಎನ್‌ಎಲ್‌ಎಸ್‌ಐಯುನಲ್ಲಿ ಲಂಬ (ವರ್ಟಿಕಲ್‌) ಮೀಸಲಾತಿ ಆಗಲೇಬೇಕು. ಸಣ್ಣ ಪುಟ್ಟ ಲೋಪದೋಷಗಳನ್ನು ಇಟ್ಟುಕೊಂಡು ಕುಲಪತಿ ಮಾತನಾಡಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಇಷ್ಟು ಪ್ರಮಾಣದ ಸ್ಥಳೀಯ ವಿದ್ಯಾರ್ಥಿಗಳು ಇದ್ದರೆ ಮುಗಿಯುತು ಎಂಬುದು ಎನ್‌ಎಲ್‌ಎಸ್‌ಐಯು ವಾದ. ಮಹಿಳಾ ಮೀಸಲಾತಿ ಪರಿಗಣಿಸುವ ವಿಧಾನದಲ್ಲಿ ಹೋಗಬೇಕು ಎಂಬುದು ವಿಶ್ವವಿದ್ಯಾಲಯದ ತರ್ಕ. ಕಾಯಿದೆಯ ಅನುಸಾರ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಐಐಟಿ, ಐಐಎಸ್‌ಸಿಯಲ್ಲಿ ಮೀಸಲಾತಿ ನೀಡಲಾಗಿದೆ. ಈಗ ವಿಶ್ವವಿದ್ಯಾಲಯಕ್ಕೂ ನಾವು ಜಲ, ನೆಲ ನೀಡಿದ್ದೇವೆ. ಈಗ ನಮ್ಮ ಮಕ್ಕಳಿಗೆ ಮೀಸಲಾತಿ ನೀಡುವುದಿಲ್ಲ ಎಂಬುದನ್ನು ಸಹಿಸಲಾಗದು. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದು, ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಾಮಾನ್ಯ ವರ್ಗದಲ್ಲಿ ಸ್ಥಾನ ಗಿಟ್ಟಿಸಿದವರನ್ನು ಸ್ಥಳೀಯ ಮೀಸಲಾತಿ ಕೋಟಾಗೆ ಸೇರಿಸುವುದಕ್ಕೆ ವಿರೋಧಿಸುವ ಹೋರಾಟವನ್ನು ಮುಂದುವರಿಸುತ್ತೇವೆ. ನಮ್ಮ ಮಕ್ಕಳ ಹಿತಾಸಕ್ತಿ ಕಾಯಲು ಬದ್ಧವಾಗಿದ್ದೇವೆ” ಎಂದರು.

ಆಗ ಸುರೇಶ್‌ ಕುಮಾರ್‌ ಅವರು “ಸಿಎಲ್‌ಎಟಿ ಮೂಲಕ ವಿದ್ಯಾರ್ಥಿಗಳು ಎನ್‌ಎಲ್‌ಎಸ್‌ಯುನಲ್ಲಿ ಸೀಟು ಪಡೆಯುತ್ತಾರೆ. ದೇಶದ ಇತರೆ ಎನ್‌ಎಲ್‌ಎಸ್‌ಐಯುಗಳು ಸ್ಥಳೀಯ ಮೀಸಲಾತಿ ನೀಡುತ್ತವೆ. ಆದರೆ, ನಮ್ಮಲ್ಲಿ ಈ ವಿಧಾನವಿಲ್ಲ ಎಂಬುದು ಪ್ರಶ್ನೆಯಾಗಿದೆ. ನಮ್ಮ ಮಕ್ಕಳಿಗೆ ಸೀಟು ಹಂಚಿಕೆ ಮಾಡದಿದ್ದರೆ ಅನುದಾನ ನೀಡುವುದಿಲ್ಲ ಎಂಬ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆಯೇ? ಈಗ ಹೆಚ್ಚುವರಿ ಜಾಗ ಬೇಕು ಎಂದು ವಿಶ್ವವಿದ್ಯಾಲಯ ಕೇಳಿತ್ತು. ಜಾಗ ನೀಡಲಾಗದು ಎಂದು ಹೇಳಲಾಗಿದೆ. ಈಗ ಅನುದಾನ ತಡೆಯಲು ಏನಾದರೂ ಕ್ರಮಕೈಗೊಳ್ಳಲಾಗುತ್ತದೆಯೆ?” ಎಂದು ಮರು ಪ್ರಶ್ನೆ ಹಾಕಿದರು.

ಈ ಸಂದರ್ಭದಲ್ಲಿ ಮತ್ತೊಬ್ಬ ಶಾಸಕ ಕೆ ಜಿ ಬೋಪಯ್ಯ ಅವರು “ಎನ್‌ಎಲ್‌ಎಸ್‌ಐಯು ವರ್ತನೆಯು ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ರೀತಿಯಲ್ಲಿದೆ. ಇದನ್ನು ಸರಿಪಡಿಸಬೇಕು” ಎಂದು ಸರ್ಕಾರಕ್ಕೆ ಆಗ್ರಹಿಸಿದರು.

Also Read
ಎನ್‌ಎಲ್‌ಎಸ್‌ಐಯುನಲ್ಲಿ ಕನ್ನಡಿಗರಿಗೆ ಜಾರಿಯಾಗದ ಸ್ಥಳೀಯ ಮೀಸಲಾತಿ ನೀತಿ: ಅಸಮಾಧಾನ ಹೊರಹಾಕಿದ ಕಾನೂನು ಸಚಿವರು

ಆಗ ಶಾಸಕ ಕೃಷ್ಣಬೈರೇಗೌಡ ಅವರು “ಕಾನೂನು ತಂದ ಬಳಿಕ ದೇಶದಲ್ಲಿ ಮೊದಲಿಗೆ ಎನ್‌ಎಲ್‌ಎಸ್‌ಐಯು ಆರಂಭವಾಗಿದ್ದು ಕರ್ನಾಕದಲ್ಲಿ. ನಾವು ಕಾನೂನು ಜಾರಿಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಮೀಸಲಾತಿ ಆಲೋಚನೆ ಇರಲಿಲ್ಲ. ಆನಂತರ ಇತರೆ ಕಾನೂನು ಶಾಲೆಗಳು ಆರಂಭವಾಗಿದ್ದು, ಅವರು ಸ್ಥಳೀಯ ಮೀಸಲಾತಿ ವಿಚಾರವನ್ನು ಕಾನೂನಿನಲ್ಲಿ ಸೇರ್ಪಡೆಗೊಳಿಸಿಬಿಟ್ಟರು. ಆನಂತರ ನಮ್ಮಲ್ಲಿ ತಿದ್ದುಪಡಿ ಮಾಡಲಾಗಿದೆ. ಇಲ್ಲಿ ವಿಚಾರ ಸೂಕ್ಷ್ಮವಾಗಿದ್ದು, ಅದನ್ನು ಮುಕ್ತವಾಗಿ ಮಾತನಾಡಲಾಗದು. ಆಡಳಿತ ಮಂಡಳಿಯ ಮುಖ್ಯಸ್ಥರು ಸಿಜೆಐ ಆಗಿದ್ದು, ಸಂಧಾನ-ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದು ಸೂಕ್ತ. ಅನುದಾನ ತಡೆ ಹಿಡಿಯುತ್ತೇವೆ ಎಂಬ ವಿಚಾರವು ವಿಷಯವನ್ನು ಬೇರೆ ಕಡೆ ಹೊರಳುವಂತೆ ಮಾಡುತ್ತದೆ” ಎಂದು ತಿಳಿ ಹೇಳಿದರು.

ಆಗ ಸಚಿವ ಮಾಧುಸ್ವಾಮಿ ಅವರು “ರಾಜ್ಯ ಸರ್ಕಾರದ ವಾದ ಸರಿಯಾಗಿದೆ. ಇದನ್ನು ನಾವೇಕೆ ಪರಿಗಣಿಸಬಾರದು ಎಂದು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಿಜೆಐ ಹೇಳಿದ್ದಾರೆ. ಹೀಗಾಗಿ, ಎನ್‌ಎಸ್‌ಎಲ್‌ಐಯು ಮೇಲೆ ತೀಕ್ಷ್ಮವಾಗಿ ಬೀಳಬೇಕಾದ ಅಗತ್ಯ ಕಾಣುತ್ತಿಲ್ಲ. ಸಿಜೆಐ ಅವರು ಪ್ರಗತಿಪರವಾಗಿದ್ದಾರೆ. ಈ ಪ್ರಕರಣದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ನಮ್ಮ ವಕೀಲರನ್ನಾಗಿ ನೇಮಕ ಮಾಡಿದ್ದೇವೆ. ಮೂರು-ನಾಲ್ಕು ದಿನದಲ್ಲಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅಲ್ಲಿ ಏನಾಗುತ್ತದೆ ಎಂದು ನೋಡಬೇಕಿದೆ. ಆಮೇಲೆ ಉಗ್ರವಾದ ನಿರ್ಧಾರಕ್ಕೆ ಮುಂದಾಗಲು ನಾನು ಹಿಂಜರಿಯುವುದಿಲ್ಲ” ಎಂದು ಸಮಜಾಯಿಷಿ ನೀಡಿದರು.

Related Stories

No stories found.
Kannada Bar & Bench
kannada.barandbench.com