

ವ್ಯಕ್ತಿಯೊಬ್ಬ ತನ್ನ ಡೀಪ್‌ಫೇಕ್ ವಸ್ತುವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದು ದೂರಿದರೆ ಆ ಸಂಬಂಧ ಮಧ್ಯಸ್ಥ ವೇದಿಕೆಗಳೇ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ತಿಳಿಸಿದೆ [ರಜತ್ ಶರ್ಮ ಇತರರು ಹಾಗೂ ತಮಾರಾ ಡಾಕ್ ಮತ್ತಿತರರ ನಡುವಣ ಪ್ರಕರಣ].
ಇಂತಹ ಪ್ರಕರಣಗಳನ್ನು ಹಿಡಿದು ಜನ ನ್ಯಾಯಾಲಯಗಳಿಗೆ ಎಡತಾಕುವಂತಾಗಬಾರದು. ಶಾಸನಬದ್ಧ ವ್ಯವಸ್ಥೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಹೇಳಿದರು.
“ಡೀಪ್‌ಫೇಕ್‌ಗೆ ತುತ್ತಾದವರೇ ಅದನ್ನು ಡೀಪ್‌ಫೇಕ್ ಎಂದು ಹೇಳುತ್ತಿರುವಾಗ ತನಿಖೆಯ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ?” ಎಂದು ನ್ಯಾಯಾಲಯ ಪ್ರಶ್ನಿಸಿತು.
ಡೀಪ್‌ಫೇಕ್ ವಸ್ತುವಿಷಯ ತೆಗೆದುಹಾಕುವಂತೆ ಪದೇ ಪದೇ ಜನ ಎಡತಾಕುತ್ತಿರುವುದರಿಂದ ನ್ಯಾಯಾಲಯ ಕುಂದುಕೊರತೆ ಪರಿಹಾರ ಕೇಂದ್ರವಾಗಿ ಪರಿಣಮಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
“ವ್ಯಾಜ್ಯದ ಪ್ರಕರಣವಲ್ಲದ ಹೊರತು ಇಂತಹ ಪ್ರಕರಣಗಳಿಗಾಗಿ ಜನ ನ್ಯಾಯಾಲಯಕ್ಕೆ ಬರುವಂತಾಗಬಾರದು… ನನ್ನನ್ನು (ಸಾಮಾಜಿಕ ಮಾಧ್ಯಮ ವೇದಿಕೆಯ) ಕುಂದುಕೊರತೆ ಪರಿಹಾರ ಅಧಿಕಾರಿಯನ್ನಾಗಿ ಏಕೆ ಮಾಡಲಾಗಿದೆ?” ಎಂದು ನ್ಯಾಯಮೂರ್ತಿಗಳು ಕಟುವಾಗಿ ಪ್ರಶ್ನಿಸಿದರು.
ಕುಂದುಕೊರತೆ ಪರಿಹಾರ ಅಧಿಕಾರಿ ಎರಡು ಪುಟಗಳಲ್ಲಿ ನಿರ್ವಹಿಸಬಹುದಾದ ಪ್ರಕರಣಕ್ಕೆ 30 ಪುಟಗಳ ಆದೇಶ ಬರೆಯುವಂತಾಗಿದೆ ಎಂದು ಅವರು ಹೇಳಿದರು.
ಯೂಟ್ಯೂಬ್‌ನಲ್ಲಿರುವ ತನ್ನ ಬಗೆಗಿನ ಡೀಪ್‌ಫೇಕ್ ವಸ್ತುವಿಷಯ ತೆಗೆದುಹಾಕುವಂತೆ ಕೋರಿ ಪತ್ರಕರ್ತ ರಜತ್ ಶರ್ಮಾ ಅವರು ಈ ಹಿಂದೆ ವ್ಯಕ್ತಿತ್ವ ಹಕ್ಕು ಮೊಕದ್ದಮೆ ಸಲ್ಲಿಸಿದ್ದು, ಅದು ಬಾಕಿ ಇದೆ. ಈ ನಡುವೆ ಅವರು ಯೂಟ್ಯೂಬ್‌ನಲ್ಲಿ ತಮ್ಮ ಡೀಪ್‌ಫೇಕ್ ವಿಡಿಯೋ ಹರಡುತ್ತಿರುವುದನ್ನು ತಡೆಯುವಂತೆ ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಯೂಟ್ಯೂಬ್ ಪಕ್ಷಕಾರನನ್ನಾಗಿ ಮಾಡಬೇಕು. ಡೀಪ್‌ಫೇಕ್ ವಿಡಿಯೋಗಳನ್ನು ಪ್ರಕಟಿಸುತ್ತಿರುವ ಮತ್ತು ಪ್ರಸರಣ ಮಾಡುತ್ತಿರುವ ಹಲವಾರು ಯೂಟ್ಯೂಬ್ ಚಾನಲ್‌ಗಳಿಂದ ಅವುಗಳನ್ನು ತೆಗೆದುಹಾಕಬೇಕು ಎಂದು ರಜತ್ ಶರ್ಮಾ ಕೇಳಿದ್ದರು. ಈ ಚಾನೆಲ್‌ಗಳು ತಮ್ಮ ಡೀಪ್‌ಫೇಕ್ ವಿಡಿಯೋಗಳನ್ನು ಬಳಸಿ ಬಂಡವಾಳ ಹೂಡಿಕೆ ಮಾಡುವಂತಹ, ಸುದ್ದಿ ಬಿತ್ತರ ಮಾಡುವಂತಹ ಯತ್ನಗಳನ್ನು ಮಾಡುತ್ತಿವೆ ಎಂದು ಅವರು ಆಪಾದಿಸಿದ್ದರು.