ಐಟಿ ಕಾಯಿದೆಯ ಸೆಕ್ಷನ್‌ 66ಎ ಅಡಿ ಪ್ರಕರಣ ದಾಖಲಿಸಬೇಡಿ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ

ಐಟಿ ಕಾಯಿದೆಯ ಸೆಕ್ಷನ್‌ 66ಎ ಅನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿರುವ ಹಿನ್ನೆಲೆಯಲ್ಲಿ ಅದರ ಅಡಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶಿಸಿದೆ.
Ministry of Home Affairs with Section 66A, Information Technology Act
Ministry of Home Affairs with Section 66A, Information Technology Act

ಸುಪ್ರೀಂ ಕೋರ್ಟ್‌ ಶ್ರೇಯಾ ಸಿಂಘಾಲ್‌ ವರ್ಸಸ್‌ ಭಾರತ ಸರ್ಕಾರದ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ಎ ಅನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಸದರಿ ಸೆಕ್ಷನ್‌ ಅಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದಾಖಲಿಸಿರುವ ಎಲ್ಲಾ ದೂರುಗಳನ್ನು ಹಿಂಪಡೆಯುವಂತೆ ಹಾಗೂ ಮುಂದೆ ಆ ಸೆಕ್ಷನ್‌ ಅಡಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ರಾಜ್ಯ ಸರ್ಕಾರಗಳಿಗೆ ಬುಧವಾರ ಕೇಂದ್ರ ಗೃಹ ಇಲಾಖೆಯು ನಿರ್ದೇಶನ ನೀಡಿದೆ.

ನಿರ್ದಿಷ್ಟ ನಿಬಂಧನೆಯು ಅಸಾಂವಿಧಾನಿಕ ಎಂದು ಘೋಷಿಸಿರುವ ನಡುವೆಯೂ ಅದರ ಅಡಿ ಪ್ರಕರಣ ದಾಖಲಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಗಂಭೀರ ನೋಟ ಬೀರಿದ್ದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

“ಐಟಿ ಕಾಯಿದೆಯ ವಜಾ ಮಾಡಲಾಗಿರುವ ಸೆಕ್ಷನ್‌ 66ಎ ಅಡಿ ಕೆಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ಸೆಕ್ಷನ್‌ 66ಎ ಅಡಿ ದೂರು ದಾಖಲಿಸದಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ನಿರ್ದೇಶಿಸಬೇಕು. ಅಲ್ಲದೇ, 2015ರ ಮಾರ್ಚ್‌ 24ರಂದು ಸುಪ್ರೀಂ ಕೋರ್ಟ್‌ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Also Read
ಮತಾಂತರ ನಿಷೇಧ ಕಾಯಿದೆ ಪಾಲಿಸದ ಮೂರು ವಿವಾಹಗಳನ್ನು ಕಾನೂನು ಬಾಹಿರ ಎಂದ ಅಲಾಹಾಬಾದ್ ಹೈಕೋರ್ಟ್: ರಕ್ಷಣೆ ನೀಡಲು ನಕಾರ

ಅಲ್ಲದೇ, ಸೆಕ್ಷನ್‌ 66ಎ ಅಡಿ ದಾಖಲಿಸಲಾಗಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣ ಹಿಂಪಡೆಯುವಂತೆಯೂ ಗೃಹ ಇಲಾಖೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್‌ ಶ್ರೇಯಾ ಸಿಂಘಾಲ್‌ ಪ್ರಕರಣದ ಐತಿಹಾಸಿಕ ತೀರ್ಪಿನಲ್ಲಿ ಐಟಿ ಕಾಯಿದೆಯ ಸೆಕ್ಷನ್‌ 66ಎ ಅನ್ನು ರದ್ದುಗೊಳಿಸಿದ್ದರೂ ಅದನ್ನು ಇನ್ನೂ ಚಾಲ್ತಿಯಲ್ಲಿ ಇಡಲಾಗಿದೆ ಎಂದು ಸರ್ಕಾರೇತರ ಸಂಸ್ಥೆ ಪಿಯುಸಿಎಲ್‌ ಸಲ್ಲಿಸಿದ್ದ ಮನವಿ ಆಧರಿಸಿ ಜುಲೈ 5ರಂದು ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿತ್ತು.

ಆರು ವರ್ಷಗಳ ಹಿಂದೆಯೇ ಐಟಿ ಕಾಯಿದೆಯ ಸೆಕ್ಷನ್‌ 66ಎ ಅನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ್ದರೂ ದೇಶಾದ್ಯಂತ ಹಲವು ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದಕ್ಕೆ ನ್ಯಾಯಾಲಯ ಆಘಾತ ವ್ಯಕ್ತಪಡಿಸಿತ್ತು. “ಅದ್ಭುತ, ಈಗ ನಡೆಯುತ್ತಿರುವ ಬೆಳವಣಿಗೆ ಭಯಾನಕವಾಗಿದೆ” ಎಂದು ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ನೇತೃತ್ವದ ಪೀಠವು ಅಸಮಾಧಾನ ವ್ಯಕ್ತಪಡಿಸಿತ್ತು.

ಐಟಿ ಕಾಯಿದೆಯ ಸೆಕ್ಷನ್‌ 66 ಎ ಅಡಿ ಯಾವುದೇ ವ್ಯಕ್ತಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಮತ್ತೊಬ್ಬರ ಮನನೋಯಿಸುವಂತಹ ಸಂದೇಶ ಅಥವಾ ಸಂಜ್ಞೆಗಳನ್ನು ಕಳುಹಿಸಿದರೆ ಅಥವಾ ತಪ್ಪು ಮಾಹಿತಿ ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಅಂತಹ ಮಾಹಿತಿಯನ್ನು ಮತ್ತೊಬ್ಬರಿಗೆ ಕಿರುಕುಳ ಕೊಡಲು, ಅಪಾಯವುಂಟು ಮಾಡಲು, ಕಿರಿಕಿರಿ ಉಂಟುಮಾಡಲು, ಅಡ್ಡಿಪಡಿಸಲು, ಅವಮಾನಿಸಲು ಕಳುಹಿಸಿದರೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಅರ್ಹರಾಗುತ್ತಿದ್ದರು.

Related Stories

No stories found.
Kannada Bar & Bench
kannada.barandbench.com