
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿಯ ತೆಲಂಗಾಣ ಘಟಕ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ರಾಜ್ಯ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ರಾಜಕೀಯ ಹೋರಾಟಗಳಿಗೆ ನ್ಯಾಯಾಲಯಗಳನ್ನು ಬಳಸದಂತೆ ಬಿಜೆಪಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ , ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಅತುಲ್ ಎಸ್ ಚಂದೂರ್ಕರ್ ಅವರಿದ್ದ ಪೀಠ ಎಚ್ಚರಿಕೆ ನೀಡಿತು.
ರಾಜಕಾರಣಿಗಳು ಟೀಕೆಗಳನ್ನು ಸಹಿಸಿಕೊಳ್ಳುವಷ್ಟು ದಪ್ಪ ಚರ್ಮದವರಾಗಿರಬೇಕು ಎಂದು ಪೀಠ ನುಡಿಯಿತು.
"ರಾಜಕೀಯ ಹೋರಾಟಗಳಿಗೆ ನ್ಯಾಯಾಲಯವನ್ನು ಬಳಸಬೇಡಿ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ. (ಅರ್ಜಿ) ವಜಾಗೊಳಿಸಲಾಗಿದೆ. ನೀವು ರಾಜಕಾರಣಿಯಾಗಿದ್ದರೆ, ಇದನ್ನೆಲ್ಲ ಸಹಿಸಿಕೊಳ್ಳುವ ಬಲವಾದ ಕೌಶಲ್ಯ ನಿಮ್ಮಲ್ಲಿರಬೇಕು " ಎಂದು ಪೀಠ ಹೇಳಿತು.
ಬಿಜೆಪಿ ಮೀಸಲಾತಿ ಕೊನೆಗೊಳಿಸುತ್ತದೆ ಎಂಬ ನಿರೂಪಣೆ ಸೃಷ್ಟಿಸಲು ರೆಡ್ಡಿ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಪಿತೂರಿ ನಡೆಸಿದ್ದರು ಎಂದು ತೆಲಂಗಾಣ ಘಟಕದ ಪ್ರಧಾನ ಕಾರ್ಯದರ್ಶಿ ಮೂಲಕ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಆಗಸ್ಟ್ 2024 ರಲ್ಲಿ ವಿಚಾರಣಾ ನ್ಯಾಯಾಲಯವು ರೆಡ್ಡಿ ವಿರುದ್ಧ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿತ್ತು. ಇದನ್ನು ಕಾಂಗ್ರೆಸ್ ನಾಯಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಉಚ್ಚ ನ್ಯಾಯಾಲಯ ಕಳೆದ ತಿಂಗಳು ಪ್ರಕರಣ ರದ್ದುಗೊಳಿಸಿತ್ತು.
ಭಾಷಣದಲ್ಲಿ ರೆಡ್ಡಿ ಅವರು ಬಿಜೆಪಿಯ ರಾಷ್ಟ್ರೀಯ ಘಟಕದ ಬಗ್ಗೆ ಪ್ರಸ್ತಾಪಿಸಿದ್ದು ತೆಲಂಗಾಣ ಘಟಕದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಆಗಸ್ಟ್ 1 ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಕೆ ಲಕ್ಷ್ಮಣ್, ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.