ಡೀಪ್‌ಸೀಕ್‌ ಹಾನಿಕಾರಕವಾಗಿದ್ದರೆ ಅದನ್ನು ಬಳಸಬೇಡಿ: ದೆಹಲಿ ಹೈಕೋರ್ಟ್

ಡೀಪ್‌ಸೀಕ್‌ಗೆ ಸಂಬಂಧಿಸಿದಂತೆ ಗೌಪ್ಯತೆ ಕಳವಳಗಳನ್ನು ಹುಟ್ಟುಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತ್ವರಿತ ವಿಚಾರಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.
Deepseek and Delhi HC
Deepseek and Delhi HC
Published on

ಚೀನಾದ ಕೃತಕ ಬುದ್ಧಿಮತ್ತೆ (AI) ಕಂಪನಿ ಒಡೆತನದ  ಡೀಪ್‌ಸೀಕ್‌ ವೇದಿಕೆ ಬೆದರಿಕೆ ಒಡ್ಡುವಂತಿದ್ದರೆ, ಅದನ್ನು ಬಳಸದೆ ಇರುವ ಸ್ವಾತಂತ್ರ್ಯ ಬಳಕೆದಾರರಿಗೆ ಇದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ಡೀಪ್‌ಸೀಕ್‌ ನಿರ್ಬಂಧಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ತ್ವರಿತವಾಗಿ ವಿಚಾರಣೆ ನಡೆಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ತುಂಬಾ ಹಾನಿಕಾರಕವಾಗಿದ್ದರೆ ಅದನ್ನು ಬಳಸಬೇಡಿ. ನೀವು ಅದನ್ನು ಬಳಸುವುದು ಕಡ್ಡಾಯವೇ? ತುರ್ತು ವಿಚಾರಣೆ ನಡೆಸುವಂತೆ ಕೋರಲು ಯಾವುದೇ ಕಾರಣವಿಲ್ಲ" ಎಂದು ನ್ಯಾಯಮೂರ್ತಿ ಉಪಾಧ್ಯಾಯ ಹೇಳಿದರು.

Also Read
ಚೀನಾ ಬಳಿ ಇರಲಿ ಅಥವಾ ಅಮೆರಿಕನ್ನರ ಬಳಿಯೇ ಇರಲಿ ಕೃತಕ ಬುದ್ಧಿಮತ್ತೆ ಅಪಾಯಕಾರಿ: ದೆಹಲಿ ಹೈಕೋರ್ಟ್

ಡೀಪ್‌ ಸೀಕ್‌ ಕೃತಕ ಬುದ್ಧಿಮತ್ತೆ ಬಳಕೆ ಆರಂಭವಾದಾಗಿನಿಂದ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಳವಳ ಇದ್ದು ಅಂತಹ ಸಾಧನಗಳನ್ನು ನಿರ್ಬಂಧಿಸಲು ಮಾರ್ಗಸೂಚಿ ರೂಪಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿ ಕೋರಿತ್ತು.

ಈ ಸಂಬಂಧ ಕೇಂದ್ರದಿಂದ ಸೂಚನೆ ಪಡೆಯುವಂತೆ ಫೆ. 12ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರದ ಪರ ವಕೀಲರಿಗೆ ಸೂಚಿಸಿತ್ತು. ಫೆಬ್ರವರಿ 20 ರಂದು ವಿಚಾರಣೆ ನಿಗದಿಯಾಗಿತ್ತಾದರೂ ಸಮಯದ ಅಭಾವದಿಂದ ಅಂದು ವಿಚಾರಣೆ ನಡೆಸದೆ ಏಪ್ರಿಲ್ 16ಕ್ಕೆ ಪ್ರಕರಣವನ್ನು ಮುಂದೂಡಲಾಗಿತ್ತು. ಆದರೆ ಆದ್ಯತೆ ಮೇಲೆ ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com