ವಿಕಲ ಚೇತನರ ಮನೆಗಳಿಗೇ ತೆರಳಿ ಕೋವಿಡ್ ಲಸಿಕೆ ನೀಡೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಪ್ರಕರಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯ ಕೋರಿತು. "ವಿಕಲಚೇತನರ ಹಕ್ಕುಗಳ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಮನವಿ ಹುಟ್ಟುಹಾಕುವುದರಿಂದ ನಾವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡುತ್ತಿದ್ದೇವೆ. ಅರ್ಜಿದಾರರ ಆತಂಕ ಪರಿಹರಿಸುವ ಸಲುವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೆಗೆದುಕೊಂಡ ಕ್ರಮಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಹಾಯ ಮಾಡಬೇಕೆಂದು ನಾವು ಕೋರುತ್ತೇವೆ. ಪ್ರಕರಣವನ್ನು 2 ವಾರಗಳ ನಂತರ ಪಟ್ಟಿ ಮಾಡಿ” ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ ಎಲ್ಲಾ ರಾಜ್ಯಗಳಿಗೂ ನೋಟಿಸ್ ನೀಡುವಂತೆ ಅರ್ಜಿದಾರರು ಮಾಡಿದ ವಿನಂತಿಯನ್ನು ಪೀಠ ಸದ್ಯಕ್ಕೆ ತಿರಸ್ಕರಿಸಿತು. "ನಾವು ರಾಜ್ಯಗಳಿಗೆ ನೋಟಿಸ್ ನೀಡಿದರೆ, ಅದಕ್ಕೆ 2 ತಿಂಗಳು ಬೇಕಾಗುತ್ತದೆ. ಮೊದಲು ಕೇಂದ್ರ ಏನು ಮಾಡುತ್ತದೆ ಎಂಬುದನ್ನು ನೋಡೋಣ" ಎಂದು ಪೀಠ ಹೇಳಿತು.
ನೈರ್ಮಲ್ಯ ಕ್ರಮ ಅನುಸರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮ ಪಾಲಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ತಮ್ಮ ಆರೋಗ್ಯ ಸ್ಥಿತಿಗಳಿಂದಾಗಿ ವಿಕಲಚೇತನರು ಬಹುಬೇಗ ಕೋವಿಡ್‌ಗೆ ತುತ್ತಾಗುವ ಹೆಚ್ಚಿನ ಅಪಾಯ ಇದೆ ಎಂದು ಸರ್ಕಾರೇತರ ಸಂಸ್ಥೆ ಈವಾರಾ ಫೌಂಡೇಶನ್ ಸಲ್ಲಿಸಿದ ಮನವಿ ತಿಳಿಸಿದೆ.
ನಿರ್ದಿಷ್ಟ ಲಸಿಕೆ ಕೇಂದ್ರದಲ್ಲಿ ವಿಕಲಚೇತನರು ಲಸಿಕೆ ತೆಗೆದುಕೊಳ್ಳಬೇಕು ಎಂದು ನಿಗದಿಪಡಿಸುವುದು ಅತ್ಯಂತ ತಾಂತ್ರಿಕ ಪ್ರಕ್ರಿಯೆಯಾಗಿದ್ದು ಇದರಿಂದಾಗಿ ವಿಕಲ ಚೇತನರು ಲಸಿಕೆ ಹಾಕಿಸಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಅಲ್ಲದೆ ಲಾಕ್‌ಡೌನ್ ನಡುವೆ ಲಸಿಕೆ ಕೇಂದ್ರಗಳಿಗೆ ಅವರು ಭೇಟಿ ನೀಡುವುದು ಕೂಡ ದುಸ್ತರ ಎಂದು ಅರ್ಜಿದಾರರ ಪರ ವಕೀಲ ಶಶಾಂಕ್ ಸಿಂಗ್ ಹೇಳಿದರು.
ವಿಕಲಚೇತನರ ಹಕ್ಕು ಕಾಯಿದೆ- 2016ರ ಸೆಕ್ಷನ್ 3ರ ಅಡಿ ಅಂಗವಿಕಲ ವ್ಯಕ್ತಿಗಳಿಗೆ ಸರಿಯಾದ ವಾಸ್ತವ್ಯ ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದ್ದು ವಿಕಲಚೇತನರು ಮತ್ತು ಅವರ ಆರೈಕೆ ಮಾಡುವವರಿಗೆ ಅವರ ನಿವಾಸದಲ್ಲಿ ಕೋವಿಡ್ ಲಸಿಕೆ ಹಾಕಲು ವ್ಯವಸ್ಥೆ ಮಾಡಬೇಕು. ಲಸಿಕೆಗಾಗಿ ಸ್ಲಾಟ್‌ಗಳನ್ನು ನಿಗದಿಪಡಿಸುವಾಗ ವಿಕಲಚೇತನ ವ್ಯಕ್ತಿಗಳಿಗೆ ಆದ್ಯತೆ ನೀಡಬೇಕು ಎಂದು ವಿನಂತಿಸಲಾಗಿದೆ.