ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್

ಸರಕು ಮತ್ತು ಪ್ರಯಾಣಿಕ ವರ್ಗಗಳ ಉಪವರ್ಗೀಕರಣವನ್ನು 1994ರ ಶಾಸನಾತ್ಮಕ ತಿದ್ದುಪಡಿಯು ತೆಗೆದುಹಾಕಿದ್ದು 'ಸಾರಿಗೆ ವಾಹನ'ಕ್ಕೆ ನೀಡುವ ಪರವಾನಗಿ ಇವೆರಡನ್ನೂ ಚಲಾಯಿಸಲು ಸಾಕು ಎಂದು ಆದೇಶಿಸಿದೆ ಎಂಬುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್
Published on

ಭಾರೀ ಸರಕು ವಾಹನ ಮತ್ತು ಪ್ರಯಾಣಿಕ ವಾಹನ ಎರಡನ್ನೂ 1994ರ ಕಾಯಿದೆಗೆ ತಿದ್ದುಪಡಿ ತಂದು ʼಸಾರಿಗೆ ವಾಹನʼ ಎಂಬ ಏಕೀಕೃತ ವರ್ಗದ ಅಡಿಯಲ್ಲಿ ತಂದಿರುವ ಹಿನ್ನೆಲೆಯಲ್ಲಿ ಭಾರೀ ಸರಕು ವಾಹನ ಚಲಾಯಿಸಲು ಪರವಾನಗಿ ಹೊಂದಿರುವ ಚಾಲಕ ಪ್ರಯಾಣಿಕ ಸೇವಾ ವಾಹನ ಚಲಾಯಿಸಲು ಕಾನೂನುಬದ್ಧವಾಗಿ ಸಮರ್ಥ ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ನ್ಯಾಷನಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ಮತ್ತು ನರೇಶ್ ಕುಮಾರ್ ಇನ್ನಿತರರ ನಡುವಣ ಪ್ರಕರಣ]

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10(2)(ಇ) ಅಡಿಯ ವರ್ಗೀಕರಣದ ಪ್ರಕಾರ ಎಲ್ಲಾ ರೀತಿಯ ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ಪಪರವಾನಗಿ ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಮೊಹಮ್ಮದ್ ಯೂಸುಫ್ ವಾನಿ ತಿಳಿಸಿದರು.

ಶಾಸಕಾಂಗವು 1994ರಲ್ಲಿ ತಿದ್ದುಪಡಿಯ ಮೂಲಕ ಉಪ-ವರ್ಗೀಕರಣ ತೆಗೆದುಹಾಕಿದ್ದು ಭಾರೀ ಸರಕು ಮತ್ತು ಪ್ರಯಾಣಿಕ ವರ್ಗಗಳೆರಡಕ್ಕೂ ಸಾರಿಗೆ ವಾಹನದ ಪರವಾನಗಿ ಸಾಕಾಗುತ್ತದೆ ಎಂದು ಅದು ಆದೇಶಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿತು.

"ಚಾಲನಾ ಪರವಾನಗಿ ಹೊಂದಿರುವ ಯಾವುದೇ ವ್ಯಕ್ತಿ ನಿರ್ದಿಷ್ಟ ರೀತಿಯ ವಾಣಿಜ್ಯ ವಾಹನವನ್ನು ಓಡಿಸಲು ಅಧಿಕಾರ ಪಡೆದರೆ, ಅಂತಹವರು ಯಾವುದೇ ರೀತಿಯ ವಾಣಿಜ್ಯ ವಾಹನ ಓಡಿಸಲು ಸ್ವಯಂಚಾಲಿತವಾಗಿ ಅರ್ಹರಾಗಿರುತ್ತಾರೆ. ಅಂದರೆ, ಭಾರೀ ಸರಕು ವಾಹನ ಓಡಿಸಲು ಚಾಲನಾ ಪರವಾನಗಿ ಹೊಂದಿರುವ ಚಾಲಕ ಪ್ರಯಾಣಿಕರನ್ನು ಸಾಗಿಸುವ ವಾಹನ ಓಡಿಸಲು ಸಮರ್ಥ" ಎಂದು ಹೈಕೋರ್ಟ್ ಹೇಳಿದೆ.

Also Read
ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಮೃತಪಟ್ಟರೆ ಪರಿಹಾರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್

ಫೆಬ್ರವರಿ 6, 2014ರಂದು ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ನಿಯಮ ಉಲ್ಲಂಘಿಸಿದ ಚಾಲಕ ಸುಭಾಷ್ ಚಂದರ್ 'ಭಾರೀ ಸರಕು ವಾಹನ' ಮಾತ್ರ ಓಡಿಸಲು ಪರವಾನಗಿಯನ್ನು ಹೊಂದಿದ್ದು ಪ್ರಯಾಣಿಕ ವಾಹನವನ್ನು ಓಡಿಸಲು ಅಗತ್ಯವಿರುವ ಪ್ರಯಾಣಿಕ ಸೇವಾ ವಾಹನ (ಪಿಎಸ್ ವಿ) ಪರವಾನಗಿ ಹೊಂದಿಲ್ಲ ಎಂಬ ಕಾರಣಕ್ಕೆ ವಿಮಾದಾರರು ಮಂಡಳಿಯ ತೀರ್ಪು ಪ್ರಶ್ನಿಸಿದ್ದರು. ಅಲ್ಲದೆ, ವಿಮಾ ಕಂಪನಿಯು 7.5% ಬಡ್ಡಿದರವು ಅತಿಯಾದದ್ದು ಎಂದು ಕೂಡ ವಾದಿಸಿತ್ತು.

ಆದರೆ ಕಾಯಿದೆಗೆ ತಿದ್ದುಪಡಿ ತಂದ ನಂತರ ಸಾರಿಗೆ ವರ್ಗದ ಅಡಿಯಲ್ಲಿ ನೀಡಲಾದ ಪರವಾನಗಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಣಿಜ್ಯ ವಾಹನಗಳನ್ನು ಓಡಿಸಲು ಪರವಾನಗಿದಾರರಿಗೆ ಅಧಿಕಾರ ನೀಡುತ್ತದೆ ಎಂದು ಪೀಠ ಹೇಳಿದೆ.

ಜೊತೆಗೆ ಬಶೀರ್ ಅಹ್ಮದ್ ಚೋಪನ್ ಪ್ರಕರಣದ ಮೇಲಿನ ಮೇಲ್ಮನವಿದಾರರ ಅವಲಂಬನೆಯನ್ನು ಹೈಕೋರ್ಟ್ ತಿರಸ್ಕರಿಸಿತು.

ಅತಿಯಾದ ಬಡ್ಡಿಯ ಕುರಿತಂತೆ ಕಂಪೆನಿಯ ವಾದ ಒಪ್ಪದ ನ್ಯಾಯಾಲಯ, ನಿರ್ದಿಷ್ಟ ಸಂದರ್ಭದಲ್ಲಿ ಎಂಎಸಿಟಿ ವಾರ್ಷಿಕ 7.5% ಬಡ್ಡಿ ವಿಧಿಸಿರುವುದು ಅಸಮಂಜಸ ಅಥವಾ ಅನಿಯಂತ್ರಿತವೆಂದು ತೋರುತ್ತಿಲ್ಲ ಎಂದಿತು.

ಅದರಂತೆ, ಮೇಲ್ಮನವಿಯಲ್ಲಿ ಹುರುಳಿಲ್ಲ ಎಂದು ಪರಿಗಣಿಸಿದ ಅದು ಅರ್ಜಿ ವಜಾಗೊಳಿಸಿತು.

ಮಾರ್ಚ್ 26, 2014ರಂದು ನೀಡಿದ ಮಧ್ಯಂತರ ಆದೇಶದ ಪ್ರಕಾರ ವಿಮಾ ಕಂಪನಿ ಈಗಾಗಲೇ ಠೇವಣಿ ಇಟ್ಟಿರುವ ಪರಿಹಾರದ ಮೊತ್ತವನ್ನು ಎಂಎಸಿಟಿ ನೀಡಿರುವ ತೀರ್ಪಿನಂತೆ ಕ್ಲೇಮುದಾರರಿಗೆ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿತು.

Kannada Bar & Bench
kannada.barandbench.com