ಮಾದಕವಸ್ತು ಬಳಕೆ 'ಆಹ್ಲಾದಕರ' ಸಂಗತಿಯಲ್ಲ, ಗೆಳೆಯರ ಒತ್ತಾಯದಿಂದ ದೂರವಿರಿ: ಯುವಜನರಿಗೆ ಸುಪ್ರೀಂ ಕೋರ್ಟ್ ಕಿವಿಮಾತು

ಪಾಕಿಸ್ತಾನದಿಂದ ಭಾರತಕ್ಕೆ 500 ಕಿಲೋಗ್ರಾಂ ಹೆರಾಯಿನ್ ಕಳ್ಳಸಾಗಣೆ ಮಾಡುವ ಗುಂಪಿನೊಂದಿಗೆ ನಂಟು ಹೊಂದಿದ್ದ ಆರೋಪಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿದೆ.
Supreme Court
Supreme Court
Published on

ದೇಶದ ಯುವಜನತೆಯು ನಿಷೇಧಿತ ಮಾದಕ ವಸ್ತುಗಳಿಂದ ದೂರವಿರಬೇಕು ಮತ್ತು ಅದನ್ನು ಗಾಢಸ್ನೇಹ ಪ್ರದರ್ಶಿಸುವ ದ್ಯೋತಕದಂತೆ ನೋಡುವ ಪ್ರಲೋಭನೆಯಿಂದ ಹೊರಬರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಲಹೆ ನೀಡಿದೆ [ಅಂಕುಶ್ ವಿಪನ್ ಕಪೂರ್ ವರ್ಸಸ್ ರಾಷ್ಟ್ರೀಯ ತನಿಖಾ ಸಂಸ್ಥೆ].

ಪಾಕಿಸ್ತಾನದಿಂದ ಭಾರತಕ್ಕೆ 500 ಕಿಲೋಗ್ರಾಂ ಹೆರಾಯಿನ್ ಕಳ್ಳಸಾಗಣೆ ಮಾಡುವ ಗುಂಪಿನೊಂದಿಗೆ ನಂಟು ಹೊಂದಿದ್ದ ಆರೋಪಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ಪ್ರತಿಕ್ರಿಯಿಸಿತು.

Also Read
ಸಿನಿಮಾ ಸೆಟ್‌ಗಳಲ್ಲಿ ಮಾದಕ ದ್ರವ್ಯ, ಮದ್ಯದ ವ್ಯಾಪಕ ಬಳಕೆ: ತನಿಖೆ ನಡೆಸುವಂತೆ ಎಸ್ಐಟಿಗೆ ಆದೇಶಿಸಿದ ಕೇರಳ ಹೈಕೋರ್ಟ್

ಮಾದಕ ದ್ರವ್ಯ ಸೇವನೆ  ಗಂಭೀರ ಕಳವಳಕಾರಿ ಸಂಗತಿಯಾಗಿದ್ದು ದೇಶದ ಯುವಜನತೆಯನ್ನು ಅಪಾಯದಿಂದ ರಕ್ಷಿಸಲು ಪರಿಣಾಮಕಾರಿ ಮಧ್ಯಪ್ರವೇಶ ತಂತ್ರಗಳಿಗೆ ರಾಜ್ಯಗಳು ಮುಂದಾಗಬೇಕು ಎಂದು ಅದು ತಿಳಿಸಿತು.

ಯುವಕರನ್ನು ಉದ್ದೇಶಿಸಿಯೂ ಬುದ್ಧಿವಾದ ಹೇಳಿದ ಪೀಠ ಮಾದಕ ವ್ಯಸನಿಗಳ ಅನುಕರಣೆ ನಿಲ್ಲಿಸಬೇಕು ಎಂದಿತು. “ಜಗತ್ತನ್ನು ಅನ್ವೇಷಿಸಲು ಈಗಷ್ಟೇ ಪ್ರಾರಂಭಿಸುತ್ತಿರುವ ಯುವಕರಿಗೆ ಜನಪ್ರಿಯ ಸಂಸ್ಕೃತಿಯಲ್ಲಿ ಕಂಡುಬರುವ ಮಾದಕ ದ್ರವ್ಯಗಳ ಸೇವನೆಯ ಅಂಶವು ಅಪಾಯಕಾರಿ ಜೀವನಶೈಲಿಗೆ ಕಾರಣವಾಗುವ ಸಾಂಸ್ಕೃತಿಕ ಪ್ರೇರಣೆಯಾಗಿದೆ. ಈ ಜೀವನಶೈಲಿಯು ಮಾದಕವಸ್ತುಗಳ ಬಳಕೆಯನ್ನು ಅನುಮೋದಿಸುವುದರೊಂದಿಗೆ ಅದನ್ನು 'ಆಹ್ಲಾದಕರ' ಮತ್ತು ಗಾಢಸ್ನೇಹದ ಪ್ರದರ್ಶನದ ಪ್ರತೀಕದಂತೆ ಕಾಣುತ್ತದೆ. ಯುವಕರು ನಿರ್ಧಾರಕೈಗೊಳ್ಳುವ ತಮ್ಮ ಸ್ವಾತಂತ್ರ್ಯವನ್ನು ತಮ್ಮಲ್ಲೇ ಉಳಿಸಿಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ ಹಾಗೂ ಈ ನಿಟ್ಟಿನಲ್ಲಿ ವಾರಿಗೆಯ ಗೆಳೆಯರ ಒತ್ತಡವನ್ನು ದೃಢಮನಸ್ಸಿನಿಂದ ವಿರೋಧಿಸುವಂತೆ ಕೋರುತ್ತೇವೆ. ಅದೇ ರೀತಿ, ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿರುವ ನಿರ್ದಿಷ್ಟ ವ್ಯಕ್ತಿಗಳನ್ನು ಅನುಸರಿಸುವುದರಿಂದ ದೂರ ಇರುವಂತೆಯೂ ಕೇಳಿಕೊಳ್ಳುತ್ತೇವೆ” ಎಂದು ನ್ಯಾಯಾಲಯ ನುಡಿಯಿತು.

ದುರ್ಬಲ ಮನಸ್ಸಿನ ಮಕ್ಕಳು ಭಾವನಾತ್ಮಕ ಯಾತನೆ, ಶೈಕ್ಷಣಿಕ ಒತ್ತಡ ಮತ್ತು ಗೆಳೆಯರ ನಡುವಿನ ಸ್ಪರ್ಧಾತ್ಮಕ ಒತ್ತಡದಿಂದ ತಪ್ಪಿಸಿಕೊಳ್ಳಲು ಮಾದಕದ್ರವ್ಯದೆಡೆಗೆ ವಾಲುತ್ತಾರೆ. ಹೀಗಾಗಿ ಮಾದಕ ವ್ಯಸನದ ಸಂತ್ರಸ್ತರನ್ನು ಪಾಶವೀಕರಿಸಬಾರದು ಎಂದು ಅದು ಹೇಳಿತು.

ತೀರ್ಪು ಬರೆದ ನ್ಯಾಯಮೂರ್ತಿ ನಾಗರತ್ನ ಅವರು, ಹದಿಹರೆಯದವರಲ್ಲಿ ಮಾದಕ ದ್ರವ್ಯ ಸೇವನೆ ತಡೆಗಟ್ಟಲು ಪೋಷಕರು ನಿರ್ಣಾಯಕ ಪಾತ್ರ ವಹಿಸಬೇಕಿದ್ದು ಪೋಷಕರು ಮತ್ತು ಮಕ್ಕಳ ನಡುವೆ ಪ್ರೀತಿಯ ಮತ್ತು ಸ್ನೇಹಪರ ಮಾತುಕತೆ ಇರಬೇಕು. ಮಕ್ಕಳು ಹಿಡಿಯುವ ಹಾದಿಯ ನಿರಂತರ ಅವಲೋಕನ ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂದರು.

Also Read
ಭಾರತವನ್ನು ಒಡೆಯುವುದಕ್ಕಾಗಿ ದೇಶ ವಿರೋಧಿ ಶಕ್ತಿಗಳು ಮಾದಕ ವಸ್ತು ಸಮರ ಸಾರಿವೆ: ಉತ್ತರಾಖಂಡ್ ಹೈಕೋರ್ಟ್

"ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯಗಳಲ್ಲಿ ಮಾದಕವಸ್ತುಗಳಿಗೆ ಸುಲಭತುತ್ತಾಗಬಹುದಾದ ರಾಜ್ಯಗಳ ವಲಯಗಳು ಮತ್ತು ಮಾದಕ ವ್ಯಸನಕ್ಕೆ ಹೆಚ್ಚು ಒಡ್ಡಿಕೊಂಡಿರುವ ಪ್ರದೇಶಗಳಲ್ಲಿ ಅವುಗಳನ್ನು ಕಾರ್ಯಗತಗೊಳಿಸಬೇಕು" ಎಂದು ಪೀಠ ಹೇಳಿತು.

ಶಾಲಾ ಪಠ್ಯಕ್ರಮಗಳಲ್ಲಿ ಮಾದಕ ವ್ಯವಸನ ತಡೆಯ ವಿಷಯ ಇರಬೇಕು ಎಂದು ತಿಳಿಸಿರುವ ನ್ಯಾ. ನಾಗರತ್ನ ಹದಿಹರೆಯದವರಲ್ಲಿ ಮಾದಕ ವ್ಯಸನ ತಡೆಗಟ್ಟಲು ವಿವಿಧ ಭಾಗೀದಾರರು ಸಂಘಟಿತ ಯತ್ನ ನಡೆಸುವ ಅಗತ್ಯವಿದೆ ಎಂದರು.

Kannada Bar & Bench
kannada.barandbench.com