ಭಾರತವನ್ನು ಒಡೆಯುವುದಕ್ಕಾಗಿ ದೇಶ ವಿರೋಧಿ ಶಕ್ತಿಗಳು ಮಾದಕ ವಸ್ತು ಸಮರ ಸಾರಿವೆ: ಉತ್ತರಾಖಂಡ್ ಹೈಕೋರ್ಟ್

ಎನ್‌ಡಿಪಿಎಸ್‌ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ತನಿಖೆಗಳನ್ನು ವೃತ್ತಿಪರವಾಗಿ ನಡೆಸದೆ ದೋಷಪೂರಿತವಾಗಿ ನಡೆಸಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Uttrakhand High Court
Uttrakhand High Court
Published on

ಭಾರತವನ್ನು ವಿಭಜಿಸುವ ತಮ್ಮ ಆತ್ಯಂತಿಕ ಧ್ಯೇಯದ ಅಂಗವಾಗಿ ವೈರಿ ಶಕ್ತಿಗಳು ಭಾರತದ ವಿರುದ್ಧ ಮಾದಕ ವಸ್ತು ಸಮರ ಸಾರಿವೆ ಎಂದು ಉತ್ತರಾಖಂಡ್ ಹೈಕೋರ್ಟ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದೆ.

ಮಾದಕ ವಸ್ತು ಕಳ್ಳಸಾಗಣೆದಾರರ ಗುಂಪು ಅಂತರರಾಷ್ಟ್ರೀಯ ಜಾಲವನ್ನು ಹೊಂದಿದ್ದು ವಿಚ್ಛಿದ್ರಕಾರಿ ಶಕ್ತಿಗಳಿಂದ ಬೆಂಬಲಿತವಾಗಿದೆ ಎಂದು ನ್ಯಾಯಮೂರ್ತಿ ವಿವೇಕ್ ಭಾರ್ತಿ ಶರ್ಮಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.  

Also Read
ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ಮಾದಕ ವಸ್ತು ಇರಿಸಿದ್ದ ಪ್ರಕರಣ ರದ್ದುಮಾಡಲು ಗುಜರಾತ್ ಹೈಕೋರ್ಟ್ ನಕಾರ

ಮಾದಕ ವಸ್ತು ಮತ್ತು ಅಮಲು ಪದಾರ್ಥ ಅಕ್ರಮ ಸಾಗಣೆ ಭಾರತದ ದೊಡ್ಡ ಸವಾಲು ಎಂಬುದು ಚರ್ವಿತ ಚರ್ವಣ ವಿಚಾರವಾಗಿದೆ. ಮಾದಕ ವಸ್ತು ಕಳ್ಳಸಾಗಣೆದಾರರ ಗುಂಪು ಅಂತರರಾಷ್ಟ್ರೀಯ ಜಾಲವನ್ನು ಹೊಂದಿದ್ದು ವಿಚ್ಛಿದ್ರಕಾರಿ ಶಕ್ತಿಗಳಿಂದ ಬೆಂಬಲಿತವಾಗಿದೆ. ಇದು ಎಂತಹವರಿಗೂ ಅರ್ಥವಾಗುವಂತಹ ವಿಚಾರ. ಭಾರತವನ್ನು ವಿಭಜಿಸಲು ತಮ್ಮ ಅಂತಿಮ ಗುರಿಯಾಗಿ ದೇಶ ವಿರೋಧಿ ವಿಚ್ಛಿದ್ರ ಶಕ್ತಗಳು ಮಾದಕ ವಸ್ತು ಸಮರ ಸಾರಿವೆ ಎಂದು ನ್ಯಾಯಾಲಯದ ಆದೇಶ ವಿವರಿಸಿದೆ.

ಮಾದಕವಸ್ತು ಕಳ್ಳಸಾಗಣೆದಾರರು ವಿಶ್ವಾದ್ಯಂತ ಡ್ರಗ್ ಕಾನೂನು ಜಾರಿ ಸಂಸ್ಥೆಗಳಿಗೆ ಸವಾಲು ಹಾಕಲು ತಾಂತ್ರಿಕ ಆವಿಷ್ಕಾರಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಅಮಲು ಪದಾರ್ಥ ಮಾರಾಟ ಮಾಡಲು ಅಂತರ್ಜಾಲದ ಡಾರ್ಕ್‌ನೆಟ್ ಬಳಕೆ ಮತ್ತು ಡ್ರಗ್‌ಗಳನ್ನು ಗಡಿ ದಾಟಿ ಸಾಗಿಸಲು ಡ್ರೋನ್‌ ನಿಯೋಜನೆ ಮಾಡುತ್ತಿದ್ದರೂ  ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌) ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ತನಿಖೆಗಳನ್ನು ವೃತ್ತಿಪರವಾಗಿ ನಡೆಸದೆ ದೋಷಪೂರಿತವಾಗಿ ನಡೆಸಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಹುತೇಕ ವೇಳೆ ದೋಷಪೂರಿತ ಮತ್ತು ವೃತ್ತಿಪರವಲ್ಲದ ತನಿಖೆಗಳು ಗಂಭೀರ ಅಪರಾಧಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸುವುದಕ್ಕೆ ಕಾರಣವಾಗುತ್ತವೆ. ಇಂತಹ ಸ್ಥಿತಿ ದುರದೃಷ್ಟಕರ ಮಾತ್ರವಲ್ಲದೆ ಅಪಾಯಕಾರಿಯೂ ಆಗಿದೆ. ಏಕೆಂದರೆ ಗಂಭೀರ ಆರೋಪದಿಂದ ಖುಲಾಸೆಗೊಳ್ಳುವ ವ್ಯಕ್ತಿಗಳಿಗೆ ಇಂತಹ ದೋಷಪೂರಿತ ತನಿಖೆಗಳು ಧೈರ್ಯ ತುಂಬಿ ಕಾನೂನು ದುರ್ಬಲಗೊಳ್ಳಲು ಕಾರಣವಾಗುತ್ತವೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

Also Read
ಅಪರಾಧಕ್ಕಾಗಿ ಬಳಕೆಯಾಗದ ಹೊರತು ತನಿಖಾ ಸಂಸ್ಥೆಯು ಪಾಸ್‌ಪೋರ್ಟ್‌ ವಶಕ್ಕೆ ಪಡೆಯುವಂತಿಲ್ಲ: ಕೇರಳ ಹೈಕೋರ್ಟ್

ಕಾಯಿದೆ ಅಡಿಯಲ್ಲಿ ಅಪರಾಧ ಎಸಗಿದ್ದಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಮತ್ತು 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರನೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಸ್ತುತ ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಗಣಿಸಿದ ಅದು ಪ್ರಕರಣದ ಅರ್ಹತೆಯ ಬಗ್ಗೆ ವಿಚಾರಣೆ ನಡೆಸಲು ಮುಂದಾಗದೆ ಮೇಲ್ಮನವಿದಾರರಿಗೆ ಜಾಮೀನು ನೀಡಿತು.

ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲಿ ಅದರಲ್ಲಿಯೂ ಮಾದಕವಸ್ತು ಪ್ರಕರಣಗಳಲ್ಲಿ ತನಿಖೆಗಳನ್ನು ಅತ್ಯಂತ ಎಚ್ಚರಿಕೆಯಿಂದ  ಮತ್ತು ಆಸ್ಥೆಯಿಂದ ನಡೆಸಬೇಕು, ಎಲ್ಲಾ ಕಡ್ಡಾಯ ಶಾಸನಬದ್ಧ ನಿಯಮಗಳು ಪಾಲನೆಯಾಗುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂಬುದಾಗಿ ತಿಳಿಸಿದ ಏಕಸದಸ್ಯ ಪೀಠ ಎಲ್ಲಾ ಜಿಲ್ಲಾ ನ್ಯಾಯಾಧೀಶರು ತಮ್ಮ ಮಾಸಿಕ ಸಭೆಗಳಲ್ಲಿ ತನ್ನ ಅವಲೋಕನಗಳು ಮತ್ತು ನಿರ್ದೇಶನಗಳನ್ನು ಚರ್ಚಿಸಬೇಕು ಎಂದು ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದೆ.

Kannada Bar & Bench
kannada.barandbench.com