

ಮದ್ಯ ಸೇವಿಸಿ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರಣಕ್ಕೆ ತನಗೆ ಕಪಾಳ ಮೋಕ್ಷ ಮಾಡಿದ್ದ ಯುವಕನೊಬ್ಬನನ್ನು ಬಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.
ಪ್ರಕರಣದ ಸಂಬಂಧ ಕಳೆದ ಎಂಟು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರಿನ ಕನವನಹಳ್ಳಿ ಮುಖ್ಯರಸ್ತೆಯ ಕೂಡ್ಲು ಕೊಳಚೆ ಬಡಾವಣೆ ನಿವಾಸಿ ಕೆ ನವೀನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ಇದಕ್ಕಿದ್ದಂತೆ ಏರ್ಪಟ್ಟ ಜಗಳದಿಂದ ಕೊಲೆಯಾಗಿದೆ. ಮೃತನನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, “ಆರೋಪಿಯು ಕೊಲೆ ಮಾಡಿ ಫೇಮಸ್ ಆಗಬೇಕು ಎಂದು ಪದೇ ಪದೇ ಹೇಳುತ್ತಿದ್ದ. ಮೃತನ ತಾಯಿ ಹಾಗೂ ಇತರೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಆರೋಪಿ ಮೃತನ ಕುತ್ತಿಗೆಗೆ ಡ್ಯಾಗರ್‌ನಿಂದ ಚುಚ್ಚಿದ್ದಾನೆ. ನಂತರ ಓಡಿಹೋಗುತ್ತಿದ್ದ ಮೃತನನ್ನು ಬೆನ್ನಟ್ಟಿ ಮತ್ತೆ ಕುತ್ತಿಗೆ ಮತ್ತು ಹೊಟ್ಟೆಗೆ ಡ್ಯಾಗರ್‌ನಿಂದ ಚುಚ್ಚಿದ್ದಾನೆ. ಶವಪರೀಕ್ಷೆಯ ವರದಿ ಪ್ರಕಾರ ಮೃತನ ದೇಹದ ಮೇಲೆ ಏಳು ಗಂಭೀರಗಾಯಗಳಿವೆ. ಆಘಾತ ಮತ್ತು ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾರೆ. ಈ ಹಂತದಲ್ಲಿ ಉಂಟಾದ ಹಠಾತ್ ಜಗಳದಿಂದ ಘಟನೆ ನಡೆದಿದೆ. ಕೊಲೆ ಮಾಡುವ ಉದ್ದೇಶವು ಆರೋಪಿಗೆ ಇರಲಿಲ್ಲ ಎಬುದಾಗಿ ಹೇಳಲಾಗದು” ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪ್ರಕರಣದ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಿದರೆ ಇದು ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಲು ಅರ್ಹ ಪ್ರಕರಣವಲ್ಲ ಎಂದು ತೀರ್ಮಾನಿಸಿದ ಪೀಠವು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಆರೋಪಿ ನವೀನ್ ಮದ್ಯಪಾನಿಯಾಗಿದ್ದ. ಫೇಮಸ್ ಆಗಲು ಒಂದು ಕೊಲೆ ಮಾಡುವುದಾಗಿ ಪದೇ ಪದೇ ಹೇಳುತ್ತಿದ್ದ. 2022ರ ಅಕ್ಟೋಬರ್ 3ರಂದು ರಾತ್ರಿ 10 ಗಂಟೆಗೆ ಕಿರುಚಾಡುತ್ತಿದ್ದ ಸಾರ್ವಜನಿಕರಿಗೆ ಸಮಸ್ಯೆ ಮಾಡುತ್ತಿದ್ದಾಗ ಅನಿಲ್ ಕುಮಾರ್ (24) ಎಂಬಾತ ತಿಳಿವಳಿಕೆ ಹೇಳಿದ್ದ. ಆಗ ಜಗಳ ನಡೆದಿದ್ದು, ನವೀನ್‌ಗೆ ಅನಿಲ್ ಕಪಾಳ ಮೋಕ್ಷ ಮಾಡಿದ್ದ. ಈ ಹಿನ್ನೆಲೆಯಲ್ಲಿ 2022ರ ಅಕ್ಟೋಬರ್ 9ರಂದು ಸಂಜೆ 6.10ರ ಸಮಯದಲ್ಲಿ ಮನೆಯಿಂದ ಹೊರ ಬಂದಿದ್ದ ಅನಿಲ್ ಮೇಲೆ ಎರಗಿದ ನವೀನ್, ಕುತ್ತಿಗೆಗೆ ಡ್ಯಾಗರ್‌ನಿಂದ ಚುಚ್ಚಿದ್ದ. ಅನಿಲ್ ರಕ್ಷಣೆಗೆ ಮುಂದಾದ ಮೂವರಿಗೆ ಜೀವ ಬೆದರಿಕೆ ಹಾಕಿದ್ದ. ಈ ವೇಳೆ ತಪ್ಪಿಸಿಕೊಂಡು ಓಡುತ್ತಿದ್ದ ಅನಿಲ್ ಬೆನ್ನಟ್ಟಿ ಹಿಡಿದು ಮತ್ತೆ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಿಗೆ ಡ್ಯಾಗರ್‌ನಿಂದ ಚುಚ್ಚಿ ಪರಾರಿಯಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅನಿಲ್ ಮೃತಪಟ್ಟಿದ್ದರು.
ಮೃತನ ತಾಯಿಯ ದೂರು ಆಧರಿಸಿ ತನಿಖೆ ನಡೆಸಿದ್ದ ಬೆಳ್ಳಂದೂರು ಠಾಣಾ ಪೊಲೀಸರು ನವೀನ್‌ನನ್ನು ಬಂಧಿಸಿದ್ದರು. ಜಾಮೀನು ಕೋರಿ ಬಂಧಿತ ಹೈಕೋರ್ಟ್ ಮೆಟ್ಟಿಲೇರಿದ್ದನು.
ನವೀನ್ ಪರ ವಕೀಲರು, ಹಿಂದೆ ನಡೆದಿದ್ದ ಜಗಳದ ಹಿನ್ನೆಲೆಯಲ್ಲಿ ಮೃತನು ಕಪಾಳಕ್ಕೆ ಹೊಡೆದಿದ್ದ. ದಿಢೀರ್ ಆಗಿ ನಡೆದ ಘಟನೆಯಿಂದ ಅರ್ಜಿದಾರ ಕೊಲೆಗೈದಿದ್ದಾನೆ. ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ. ಆರೋಪಿಗೆ 22 ವರ್ಷವಾಗಿದ್ದು, 2022ರ ಅಕ್ಟೋಬರ್ 10ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಷರತ್ತುಗಳನ್ನು ವಿಧಿಸಿ ಜಾಮೀನು ನೀಡುವಂತೆ ಕೋರಿದ್ದರು.