ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಸರಳುಗಳ ಹಿಂದೆ ಬಂಧಿಗಳಾಗಿರುವ ವ್ಯಕ್ತಿಗಳು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಖಾತರಿಪಡಿಸಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ [ಸತೇಂದ್ರ ಬಾಬು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಬಂಧಿಗಳಾಗಿರುವ ವ್ಯಕ್ತಿಗಳು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಆ ನಿರ್ಲಕ್ಷ್ಯದ ಹೊಣೆಯನ್ನು ಪೊಲೀಸರು, ಜೈಲಿನಲ್ಲಿರುವ ಆರೋಪಿಗಳ ತಲೆಗೆ ಕಟ್ಟುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ.
ಪ್ರಸ್ತುತ ಪ್ರಕರಣದಲ್ಲಿ ಸರ್ಕಾರಿ ನೌಕರನೊಬ್ಬ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಅವರಿಗೆ ಜಾಮೀನು ನೀಡುವುದನ್ನು ಉತ್ತರ ಪ್ರದೇಶ ಪೊಲೀಸರು ವಿರೋಧಿಸಿದ್ದರು. ಆದರೆ ಆ ಸಮಯದಲ್ಲಿ ಆರೋಪಿ ಜೈಲಿನಲ್ಲಿದ್ದುದನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿತು. ಪೊಲೀಸರ ಈ ಲೋಪಕ್ಕೆ ಆರೋಪಿಯನ್ನು ದೂಷಿಸಲಾಗದು ಎಂದು ಅದು ಹೇಳಿತು.
"ಅರ್ಜಿದಾರರು ಜೈಲಿನಲ್ಲಿರುವುದರಿಂದ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ಅರ್ಜಿದಾರರನ್ನು ದೂಷಿಸಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ. ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿದೆ.
ಮೇಲ್ಮನವಿದಾರ ಸರ್ಕಾರಿ ಉದ್ಯೋಗಿಯಾಗಿದ್ದು ಜನ ಸೇವಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಡ ಹೂಡಿಕೆದಾರರನ್ನು ವಂಚಿಸಿದ ಆರೋಪ ಅವರ ಮೇಲಿತ್ತು. ಆರೋಪಿಯು ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದು, ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅದು ಸೂಚಿಸಿತು.