
ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖಾ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್ ಜೀವಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಕನಕಲಕ್ಷ್ಮಿ ಅವರು ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರಿ ಅಧಿಕಾರಿಯನ್ನು ಲಂಚದ ಮೂಲಕ ಪ್ರಭಾವಿಸುವುದು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬಿ ಎಂ ಕನಕಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಕಾಲತ್ತು ಹಾಕಿರುವ ವಕೀಲ ಸೂರ್ಯ ಮುಕುಂದರಾಜ್ ಪರ ವಾದಿಸಿದ ಹಿರಿಯ ವಕೀಲ ಎಂ ಎಸ್ ಶ್ಯಾಮ್ ಸುಂದರ್ ಅವರು “ತನಿಖಾಧಿಕಾರಿಯನ್ನೇ ಆರೋಪಿಯಾಗಿಸಲಾಗಿದೆ. ಸಾವನ್ನಪ್ಪಿರುವವರು ವಕೀಲರಲ್ಲ” ಎಂದರು.
ಆಗ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.
ಜೀವಾ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ ತನಿಖೆಗೆ ವಹಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು “ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರೇಕೆ ಇನ್ನೂ ನಿರೀಕ್ಷಣಾ ಜಾಮೀನು ಪಡೆದಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
“ತನಿಖೆಗೆ ಹಾಜರಾಗುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್ ಯಾಕೆ ನೀಡಿಲ್ಲ. ಕನಕಲಕ್ಷ್ಮಿ ಅವರನ್ನು ಏಕೆ ಸಾಮಾನ್ಯ ಆರೋಪಿ ಎಂದು ಪರಿಗಣಿಸಿಲ್ಲ? ಆಕೆ ಪೊಲೀಸ್ ಅಧಿಕಾರಿ ಎಂದ ಮಾತ್ರಕ್ಕೆ ಕಾನೂನು ಮೀರಬಹುದೇ? ಆರೋಪಿತ ಅಧಿಕಾರಿ ಆರಾಮಾವಾಗಿ ಓಡಾಡಿಕೊಂಡಿದ್ದಾರೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ನೀವು ಬಿಡುತ್ತಿದ್ದೀರಾ? ಹತ್ತು ವರ್ಷಗಳ ಶಿಕ್ಷೆ ಆಗುವ ಸಂಜ್ಞೇ ಅಪರಾಧದಲ್ಲಿ ಯಾರನ್ನೂ ಬಂಧಿಸಿಲ್ಲ! ಇಂಥ ಪ್ರಕರಣಗಳಲ್ಲಿ ಅರ್ನೇಶ್ ಕುಮಾರ್ ಪ್ರಕರಣದ ಆದೇಶ ಪಾಲಿಸುತ್ತೀರಿ, ಬಡಪಾಯಿ ಸಿಲುಕಿಕೊಂಡರೆ ಕಾಟ ಕೊಡುತ್ತೀರಿ" ಎಂದು ಪೀಠವು ಕಿಡಿಕಾರಿತ್ತು.