[ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ] 'ಡಿವೈಎಸ್‌ಪಿ ಕನಕಲಕ್ಷ್ಮಿಯನ್ನು ಏಕೆ ಬಂಧಿಸಿಲ್ಲ?' ಹೈಕೋರ್ಟ್‌ ಕೆಂಡಾಮಂಡಲ

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಕೋರಿರುವ ಮಧ್ಯಂತರ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್‌.
Justice M Nagaprasanna and Karnataka HC
Justice M Nagaprasanna and Karnataka HC
Published on

ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್‌ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಶುಕ್ರವಾರ ಪ್ರಕಟಿಸುವುದಾಗಿ ಕರ್ನಾಟಕ ಹೈಕೋರ್ಟ್‌ ಬುಧವಾರ ಹೇಳಿದೆ.

ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ತಮ್ಮ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ವಕೀಲೆ ಎಸ್‌ ಜೀವಾ ಸಲ್ಲಿಸಿರುವ ಅರ್ಜಿ ಹಾಗೂ ಜೀವಾ ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎನ್ನಲಾದ ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಕನಕಲಕ್ಷ್ಮಿ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ತನಿಖೆಗೆ ವಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಸಿಬಿಐ ಅನ್ನು ಪ್ರತಿವಾದಿಗಳನ್ನಾಗಿಸಲು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ನೋಟಿಸ್‌ ಜಾರಿ ಮಾಡಲಾಗಿದೆ. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಯಾರು ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆದೇಶ ಪ್ರಕಟಿಸಲಾಗುವುದು” ಎಂದು ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ, ಬೆಂಗಳೂರು ವಕೀಲರ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಡಿ ಆರ್‌ ರವಿಶಂಕರ್‌ ಮತ್ತು ವಿವೇಕ್‌ ಸುಬ್ಬಾರೆಡ್ಡಿ ಅವರು “ಬೆಂಗಳೂರು ಜಿಲ್ಲೆಯ ವಕೀಲರ ಕಲ್ಯಾಣಕ್ಕಾಗಿ ಎಎಬಿ ಇದೆ. ವಕೀಲೆ ಜೀವಾ ಅವರು ಸಿವಿಲ್‌ ನ್ಯಾಯಾಧೀಶರ ಪರೀಕ್ಷೆ ಬರೆದಿದ್ದು, ಭಾರತೀಯ ವಕೀಲರ ಪರಿಷತ್‌ ಸದಸ್ಯತ್ವ ಹೊಂದಿದ್ದಾರೆ. ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹಾಲಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ತುಮಕೂರಿನಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದಾಗ ತನಿಖಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಇದಕ್ಕಾಗಿ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಕನಕಲಕ್ಷ್ಮಿ ಅವರ ಪರವಾಗಿ ಬಿ ವರದಿ ಸಲ್ಲಿಕೆಯಾಗಿತ್ತು. ಇದರ ಬೆನ್ನಿಗೇ ಅವರು ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ರದ್ದತಿ ಕೋರಿದ್ದು, ಅದನ್ನು ಹೈಕೋರ್ಟ್‌ ವಜಾ ಮಾಡಿದೆ. ಮತ್ತೆರಡು ಪ್ರಕರಣಳಲ್ಲಿಯೂ ಕನಕಲಕ್ಷ್ಮಿ ಪರವಾಗಿ ಬಿ ವರದಿ ಸಲ್ಲಿಕೆಯಾಗಿದೆ. ಜೀವಾ ಆತ್ಮಹತ್ಯೆ ತನಿಖೆಗೆ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸುವ ಭರವಸೆ ನೀಡುತ್ತಿದ್ದು, ಅದರಿಂದ ನ್ಯಾಯ ನಿರೀಕ್ಷಿಸಲಾಗದು. ಹೀಗಾಗಿ, ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಕೋರುತ್ತಿದ್ದೇವೆ. ಕನಕಲಕ್ಷ್ಮಿ ಅವರು ಲಾಟರಿ ಹಗರಣದಲ್ಲೂ ಆರೋಪಿಯಾಗಿದ್ದರು” ಎಂದರು.

“ತನಗೆ ಡಿಐಜಿ, ಹೆಚ್ಚುವರಿ ಡಿಐಜಿ ಗೊತ್ತಿದ್ದು, ನ್ಯಾಯಾಲಯಗಳು ಸಹ ತನಗೆ ಏನೂ ಮಾಡಲಾಗದು ಎಂದು ಕನಕಲಕ್ಷ್ಮಿ ಹೇಳಿದ್ದಾರೆ ಎಂದು ಸಹ ಆರೋಪಿಗಳು ಆರೋಪಿಸಿದ್ದಾರೆ. ತನಿಖಾಧಿಕಾರಿಗಳ ಈ ರೀತಿಯ ನಡೆಗೆ ತಡೆ ಬೇಕಿದೆ. ಈ ಟ್ರೆಂಡ್‌ ಮುಂದುವರಿಯಲು ಅವಕಾಶ ನೀಡಬಾರದು” ಎಂದರು.

ರವಿಶಂಕರ್‌ ಅವರು “ಯಾರು ತನಿಖೆ ನಡೆಸಬೇಕು ಎಂಬುದನ್ನು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ, ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತನಿಖೆ ನಡೆಸುವ ಆಸಕ್ತಿ ಹೊಂದಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಪ್ರಮುಖ ಆರೋಪಿಯ ಸೂಚನೆಯಂತೆ ಎಎಬಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ಷೇಪಣೆಯಲ್ಲಿ ಹೇಳಲಾಗಿದೆ. ಎಎಬಿಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಲಾಗದು ಎಂಬ ಭರವಸೆಯನ್ನು ನೀಡುತ್ತೇವೆ. ಸರ್ಕಾರ ತನ್ನ ಹೇಳಿಕೆ ಹಿಂಪಡೆಯಬೇಕು” ಎಂದು ಕೋರಿದರು.

“ಭೋವಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ರೂಪಿಸಿ ಪ್ರಶ್ನಿಸಿಲಾಗಿಲ್ಲ, ತನಿಖಾಧಿಕಾರಿ ಕನಕಲಕ್ಷ್ಮಿ ತನಗೆ ಬೇಕಾದ ಉತ್ತರಕ್ಕಾಗಿ ಜೀವಾ ಅವರಿಗೆ ಕಿರುಕುಳ ನೀಡಿದ್ದಾರೆ. ಈಗ ತನಿಖೆಗೆ ಸಹಕರಿಸಿಲ್ಲ ಎಂದು ಹೇಳುತ್ತಿದ್ದಾರೆ. ಜೀವಾ ಸಾವಿನ ತನಿಖೆ ನಡೆಸುವುದು ಬಿಟ್ಟು, ಆಕೆ ವಕೀಲೆಯೋ? ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ನ್ಯಾಯಾಲಯದಲ್ಲಿ ಓಡಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಧಿಕಾರಿ ಬಿ ಎನ್‌ ಜಗದೀಶ್‌ ಅವರು “ಭೋವಿ ಹಗರಣದಲ್ಲಿ ಭಾಗಿಯಾಗಿರುವ ಕೆಲವರು ಎಎಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿದೆ. ಜೀವಾ ಅವರು ಉದ್ಯಮಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಿಯಮದ ಪ್ರಕಾರ ವಕೀಲರು ಅದನ್ನು ಮಾಡಲಾಗದು. ಈ ಸಂಬಂಧ ಅಫಿಡವಿಟ್‌ ಸಲ್ಲಿಸಲಾಗಿದೆ. ಈ ಪ್ರಕರಣ ತನಿಖೆಯಾಗಬೇಕಿದೆ. ಪ್ರಮುಖರು ಮತ್ತು ಎಎಬಿಯ ಪಾತ್ರ ಕಂಡಿದೆ. ದಾಖಲೆ ಪತ್ತೆಯಾದ ಹಿನ್ನೆಲೆಯಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ. ಯಾವ ಪ್ರಶ್ನೆ ಕೇಳಬೇಕು ಅಥವಾ ಕೇಳಬಾರದು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರವಾಗಿದೆ. ಮೊದಲನೇ ಆರೋಪಿಗೆ ಸಂಪರ್ಕ ಕಲ್ಪಿಸುವ ದಾಖಲೆಗಳು ದೊರೆತಿವೆ. ಅದನ್ನು ನ್ಯಾಯಾಲಯದ ಮುಂದೆ ಇರಿಸಲಾಗುವುದು” ಎಂದು ನೆನಪಿಸಿದರು.

“ತನಿಖೆಯಲ್ಲಿ ಎಲ್ಲಿ ಲೋಪವಾಗಿರುವುದನ್ನು ತೋರಿಸಬೇಕು. ಆದರೆ, ತನಿಖೆ ನಡೆಸಲು ಬಿಡುತ್ತಿಲ್ಲ. ಮರಣ ಪತ್ರ ಜಪ್ತಿ ಮಾಡಲಾಗಿದೆ. ಐಪಿಸಿ ಸೆಕ್ಷನ್‌ 306 ಅಡಿ ಎಲ್ಲಾ ಪ್ರಕರಣಗಳಲ್ಲೂ ಆರೋಪಿಗಳನ್ನು ಬಂಧಿಸುವುದಿಲ್ಲ. ಏನು ಜಪ್ತಿಯಾಗುತ್ತದೆ ಎಂಬುದನ್ನು ಆಧರಿಸಿ ಬಂಧಿಸಲಾಗುತ್ತದೆ. ಆರೋಪಿಗಳು ನ್ಯಾಯಾಲಯದ ಮುಂದೆ ಬಂದಿದ್ದು, ಅವರು ತನಿಖೆಗೆ ಸಹಕರಿಸುತ್ತಿಲ್ಲ. ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಜೀವಾ ಅವರ ಆತ್ಮಹತ್ಯೆ ಪ್ರಕರಣದ ಕುರಿತು ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚಿಸಿದ್ದೇವೆ. ಇದಕ್ಕೂ ಮುನ್ನ, ಜೀವಾ ಅವರು ಹಗರಣದ ತನಿಖೆಯಲ್ಲಿ ಭಾಗಿಯಾಗಿದ್ದ ವಿಚಾರಣೆಯ ವಿಡಿಯೊ ಆಗಿದೆ. ಅದನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಪೀಠವು ಸರ್ಕಾರವನ್ನು ಕುರಿತು “ಎಎಬಿಯು ಇಡಿಯಾಗಿ ಭೋವಿ ನಿಗಮದ ಹಗರಣವನ್ನು ಸ್ವತಂತ್ರ ಸಂಸ್ಥೆಯ ತನಿಖೆಗೆ ವಹಿಸಬೇಕು ಎಂದು ಕೇಳುತ್ತಿಲ್ಲ, ಜೀವಾ ಪ್ರಕರಣವನ್ನು ಕೇಳಿದೆ. ಸರ್ಕಾರ ಅಫಿಡವಿಟ್‌ ಸಲ್ಲಿಸುವವರೆಗೆ ಆಕೆ ಉದ್ಯಮಿ, ವಕೀಲೆ. ಈಗ ಜೀವಾ ಸಾವನ್ನಪ್ಪಿದ್ದಾರೆ. ತನಿಖಾಧಿಕಾರಿ ಕನಕಲಕ್ಷ್ಮಿ ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ 13 ಪುಟಗಳ ಮರಣ ಪತ್ರದಲ್ಲಿ ಸಣ್ಣಪುಟ್ಟ ವಿಚಾರಗಳನ್ನೂ ಉಲ್ಲೇಖಿಸಿದ್ದಾರೆ. ಸರ್ಕಾರವು ಎಲ್ಲವನ್ನೂ ತನಿಖೆ ಮಾಡಬಹುದು. ಆದರೆ, ಜೀವಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 306ರ ಆರೋಪದ ತನಿಖೆಯಾಗಲೇಬೇಕು. ಆದರೆ, ಇಲ್ಲ ತನಿಖೆಯೇ ಆರಂಭವೇ ಆಗಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮುಂದುವರೆದು, "ಸಾಮಾನ್ಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅದು ಐಪಿಸಿ ಸೆಕ್ಷನ್‌ 306 ಅಡಿ ಅಪರಾಧವಾದರೇ ಏನು ಮಾಡುತ್ತೀರಿ? ಬಂಧಿಸುವುದಿಲ್ಲವೇ? ಐಪಿಸಿ ಸೆಕ್ಷನ್‌ 420 ಅಡಿಯ ಪ್ರಕರಣಗಳಲ್ಲೆಲ್ಲಾ ಬಂಧಿಸುತ್ತೀರಿ? ಅದು ವ್ಯಕ್ತಿಯನ್ನು ಆಧರಿಸಿರುತ್ತದೆಯೇ? ಯಾವ ತನಿಖೆ ನಡೆಸಿದ್ದೀರಿ? ವಕೀಲೆ ಜೀವಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಡಿವೈಎಸ್‌ಪಿ ಕನಕಲಕ್ಷ್ಮಿ ಅವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಿ? ಆಕೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆಯೇ? ಆಕೆ ಡಿವೈಎಸ್‌ಪಿ ಅದಕ್ಕೆ ನಿರೀಕ್ಷಣಾ ಜಾಮೀನು ಪಡೆದಿಲ್ಲ. ಏಕೆಂದರೆ ಕಾನೂನಿನ ಅಸ್ತ್ರ ಪೊಲೀಸರನ್ನು ತಲುಪುವುದಿಲ್ಲ. ಬೇರೆಯವರನ್ನು ದೂರು ದಾಖಲಾದ ತಕ್ಷಣ ಬಂಧಿಸುತ್ತೀರಲ್ಲಾ?” ಎಂದು ಕುಟುಕಿತು.

Also Read
ಭೋವಿ ಅಭಿವೃದ್ಧಿ ನಿಗಮದ ಹಗರಣ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ವಿವರ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅಲ್ಲದೆ, “ತನಿಖೆಗೆ ಹಾಜರಾಗುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್‌ ಯಾಕೆ ನೀಡಿಲ್ಲ. ಕನಕಲಕ್ಷ್ಮಿ ಅವರನ್ನು ಏಕೆ ಸಾಮಾನ್ಯ ಆರೋಪಿ ಎಂದು ಪರಿಗಣಿಸಿಲ್ಲ? ಆಕೆ ಪೊಲೀಸ್‌ ಅಧಿಕಾರಿ ಎಂದ ಮಾತ್ರಕ್ಕೆ ಕಾನೂನು ಮೀರಬಹುದೇ? ಆರೋಪಿತ ಅಧಿಕಾರಿ ಆರಾಮಾವಾಗಿ ಓಡಾಡಿಕೊಂಡಿದ್ದಾರೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ನೀವು ಬಿಡುತ್ತಿದ್ದೀರಾ? ಹತ್ತು ವರ್ಷಗಳ ಶಿಕ್ಷೆ ಆಗುವ ಸಂಜ್ಞೇ ಅಪರಾಧದಲ್ಲಿ ಯಾರನ್ನೂ ಬಂಧಿಸಿಲ್ಲ! ಇಂಥ ಪ್ರಕರಣಗಳಲ್ಲಿ ಅರ್ನೇಶ್‌ ಕುಮಾರ್‌ ಪ್ರಕರಣದ ಆದೇಶ ಪಾಲಿಸುತ್ತೀರಿ, ಬಡಪಾಯಿ ಸಿಲುಕಿಕೊಂಡರೆ ಕಾಟ ಕೊಡುತ್ತೀರಿ" ಎಂದು ಪೀಠವು ಬೇಸರಿಸಿತು.

ಇದೇ ವೇಳೆ, "ರಾಜ್ಯ ಸರ್ಕಾರ ಏನೂ ಮಾಡಿಲ್ಲ, ಅದಕ್ಕೆ ಅವರು ಸಿಬಿಐ ತನಿಖೆಗೆ ಕೋರುತ್ತಿದ್ದಾರೆ. ವ್ಯಕ್ತಿ ಯಾರೆಂದು ತೋರಿಸಿ, ಕಾನೂನು ಏನೆಂದು ಹೇಳುತ್ತೇನೆ ಎನ್ನುವ ರೀತಿಯಲ್ಲಿ ಪ್ರಕರಣದಲ್ಲಿ ನಡೆದುಕೊಳ್ಳಲಾಗಿದೆ. ವಿಚಾರಣೆಯ ವಿಡಿಯೋ ರೆಕಾರ್ಡ್‌ ವೇಳೆ ಅಗತ್ಯಬಿದ್ದಾಗ ವಿಡಿಯೋ ನಿಲ್ಲಿಸಿ, ಕಿರುಕುಳ ನೀಡಿ ಆನಂತರ ವಿಡಿಯೋ ಮಾಡಲಾಗಿದೆ ಎಂದು ಜೀವಾ ಆರೋಪಿಸಿದ್ದಾರೆ. ವಕೀಲೆ ಜೀವಾ ಅವರ ಬಟ್ಟೆ ತೆಗೆಸಿ, ಏನಾದರೂ ಸಾಧನ ಇಟ್ಟುಕೊಂಡಿದ್ದಾರೆಯೇ ಎಂದು ಪರಿಶೀಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಏಳನೇ ಆರೋಪಿಯು ಅದನ್ನೇ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಗುಪ್ತಾಂಗದಲ್ಲಿ ಸೈನೈಡ್‌ ಇಟ್ಟುಕೊಳ್ಳಲಾಗಿದೆ, ಅದನ್ನು ಪರಿಶೀಲಿಸಬೇಕು ಎಂದು ಕನಕಲಕ್ಷ್ಮಿ ಹೇಳಿದ್ದರು ಎಂದು ವಿವರಿಸಲಾಗಿದೆ. ಮರಣ ಪತ್ರದ ವಿಚಾರದಲ್ಲಿ ತನಿಖೆ ನಡೆಸದಿದ್ದರೆ ಅದು ಅಕ್ಷಮ್ಯವಾಗಲಿದೆ” ಎಂದಿತು.

ಕನಕಲಕ್ಷ್ಮಿ ಅವರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯಲಿ. ಆದರೆ, ನನ್ನ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ನಾನು ತನಿಖೆ ಎದುರಿಸಲು ಸಿದ್ದವಿದ್ದೇನೆ. ಯಾರಿಗಾದರೂ ತನಿಖೆಯ ಜವಾಬ್ದಾರಿ ನೀಡಬಹುದು. ಆದರೆ, ನ್ಯಾಯಾಲಯವು ಈ ಪ್ರಕರಣದ ಮೇಲೆ ನಿಗಾ ಇಡಬೇಕು. ತನಿಖೆ ಕಾಲಮಿತಿ ನಿಗದಿಪಡಿಸಬೇಕು” ಎಂದು ಕೋರಿದರು.  

Kannada Bar & Bench
kannada.barandbench.com