ರಾಷ್ಟ್ರಕ್ಕೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ 2023ರ ಮೊದಲ ಕರ್ತವ್ಯ ದಿನವಾದ ಸೋಮವಾರ ಎಲೆಕ್ಟ್ರಾನಿಕ್ ಸುಪ್ರೀಂ ಕೋರ್ಟ್ ರಿಪೋರ್ಟ್ಸ್ (ಇ-ಎಸ್‌ಸಿಆರ್) ಯೋಜನೆಯನ್ನು ಆರಂಭಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸುಪ್ರೀಂ ಕೋರ್ಟ್ ರಿಪೋರ್ಟ್ಸ್ (ಇ-ಎಸ್‌ಸಿಆರ್) ಯೋಜನೆಗೆ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು. ಇದು ಉಚಿತ ಸೇವೆಯಾಗಿದ್ದು ಕಿರಿಯ ವಕೀಲರು ಹಣ ಪಾವತಿಸಬೇಕಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಯೋಜನೆಯು 34,000 ತೀರ್ಪುಗಳನ್ನು ಒಳಗೊಂಡಿದ್ದು ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ಕಾನೂನು ಗುಮಾಸ್ತರ ತಂಡವು ಕಾರ್ಯನಿರ್ವಹಿಸಿತ್ತಿರುವುದಾಗಿ ಅವರು ತಿಳಿಸಿದರು.
ಸುಪ್ರೀಂ ಕೋರ್ಟ್‌ನ ಅಧಿಕೃತ ಕಾನೂನು ವರದಿ ಕೋಶವಾದ ʼಸುಪ್ರೀಂ ಕೋರ್ಟ್ ರಿಪೋರ್ಟ್ಸ್ʼನಲ್ಲಿ ವರದಿ ಮಾಡಿರುವ ಸ್ವರೂಪದಲ್ಲಿಯೇ ಆ ತೀರ್ಪುಗಳ ಡಿಜಿಟಲ್ ಆವೃತ್ತಿಯನ್ನು ಒದಗಿಸುವ ಯೋಜನೆ ಇ- ಎಸ್‌ಸಿಆರ್ ಆಗಿದೆ. ಎಲ್ಲರೂ ಬಳಕೆ ಮಾಡಬಹುದಾದ ಈ ಯೋಜನೆಯು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನ (ಎನ್‌ಜೆಡಿಜಿ) ಜಡ್ಜ್‌ಮೆಂಟ್ ಪೋರ್ಟಲ್‌ನಲ್ಲಿ ದೊರೆಯುತ್ತದೆ.
"ಇ-ಎಸ್‌ಸಿಆರ್ ಯೋಜನೆಯು ಭಾರತೀಯ ನ್ಯಾಯಾಂಗದ ಡಿಜಿಟಲೀಕರಣದ ಗುರಿ ಸಾಧಿಸುವತ್ತ ಇರಿಸಲಾದ ಒಂದು ಹೆಜ್ಜೆಯಾಗಿದೆ. ಕಾನೂನಿನ ಎಲ್ಲಾ ಪಾಲುದಾರರಿಗೆ ಅದರಲ್ಲಿಯೂ ದಾವೆದಾರರು ಮತ್ತು ವಕೀಲ ಸಮುದಾಯ ಮಾತ್ರವಲ್ಲದೆ, ಉಚ್ಚ ನ್ಯಾಯಾಲಯ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ನ್ಯಾಯಾಂಗ ಅಕಾಡೆಮಿಗಳು ಇತ್ಯಾದಿಗಳ ಅನುಕೂಲಕ್ಕಾಗಿ ಸಕಾರಾತ್ಮಕ ಬದಲಾವಣೆ ತರುವ ದೃಷ್ಟಿಯನ್ನು ಇದು ಒತ್ತಿ ಹೇಳುತ್ತದೆ” ಎಂದು ಯೋಜನೆಯನ್ನು ವಿವರಿಸಲಾಗಿದೆ.
ಇ- ಎಸ್‌ಸಿಆರ್ ಯೋಜನೆಯು ಪಿಡಿಎಫ್ ರೂಪದಲ್ಲಿ ಪರಿಶೀಲಸಬಹುದಾದ ಅಧಿಕೃತ ಸಾಫ್ಟ್ ಕಾಪಿಗಳನ್ನು ಬಳಸಿಕೊಂಡು ತೀರ್ಪುಗಳ ನಕಲು ಸಾಫ್ಟ್ ಕಾಪಿಗಳನ್ನು ಪ್ರಸ್ತುತಪಡಿಸುತ್ತದೆ. 1950ರಲ್ಲಿ ಸುಪ್ರೀಂ ಕೋರ್ಟ್‌ನ ಪ್ರಾರಂಭದಿಂದ ಇಲ್ಲಿಯವರೆಗಿನ ತೀರ್ಪುಗಳ ಸಂಪೂರ್ಣ ವಿವರ ಇ-ಎಸ್‌ಸಿಆರ್ ಮತ್ತು ಡಿಜಿಟಲ್ ರೆಪೊಸಿಟರಿಯಲ್ಲಿ ದೊರೆಯುವುದರಿಂದ ಯೋಜನೆ ಅಮೂಲ್ಯವಾದ ಸಂಪನ್ಮೂಲ ಸೃಷ್ಟಿಸುತ್ತದೆ.