ಪ್ರಾಣಿಬಲಿ ವಿರುದ್ಧದ ಪಿಐಎಲ್‌: "ಪೂರ್ವ ಭಾರತವನ್ನು ಪೂರ್ಣ ಸಸ್ಯಾಹಾರಿ ಮಾಡುವ ಗುರಿಯೇ?" ಕಲ್ಕತ್ತಾ ಹೈಕೋರ್ಟ್ ಗರಂ

ʼಅಡ್ವೊಕೇಟ್ ಜನರಲ್‌ ಅವರಿಗೆ ಪ್ರತಿದಿನ ತುಂಡು ಮೀನು ಇಲ್ಲದೆ ಇರಲಾಗದುʼ ಎಂದು ನ್ಯಾಯಾಲಯ ನುಡಿಯಿತು. ಈ ಮಾತಿಗೆ ತಲೆದೂಗಿದ ಅಡ್ವೊಕೇಟ್ ಜನರಲ್ ದತ್ತಾ 'ನಾನು ಕಟ್ಟಾ ಮಾಂಸಾಹಾರಿʼ ಎಂದರು.
Fish Market
Fish Market
Published on

ಇಡೀ ಪೂರ್ವ ಭಾರತದಲ್ಲಿ ಸಸ್ಯಾಹಾರ ಅಳವಡಿಸಿಕೊಳ್ಳಬೇಕೆಂದು ನಿರೀಕ್ಷಿಸುವುದು ಅವಾಸ್ತವಿಕ ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಹೇಳಿದೆ.

ಕೋಲ್ಕತ್ತಾದ ಬೊಲ್ಲಾ ರಕ್ಷಾ ಕಾಳಿ ದೇವಸ್ಥಾನದಲ್ಲಿ ಶುಕ್ರವಾರ 10,000 ಕ್ಕೂ ಹೆಚ್ಚು ಪ್ರಾಣಿಗಳ ಬಲಿ ಕೊಡುತ್ತಿರುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿಸ್ವಜಿತ್ ಬಸು ಮತ್ತು ಅಜಯ್ ಕುಮಾರ್ ಗುಪ್ತಾ ಅವರಿದ್ದ ರಜಾಕಾಲೀನ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ನಾನೀಗ ಸಸ್ಯಾಹಾರಿ; ರೇಷ್ಮೆ, ಚರ್ಮದ ಉತ್ಪನ್ನ ಬಳಸುವುದಿಲ್ಲ: ಸಿಜೆಐ ಡಿ ವೈ ಚಂದ್ರಚೂಡ್

"ಒಂದು ವಿಷಯವಂತೂ ಸ್ಪಷ್ಟ, ಭಾರತದ ಪೂರ್ವ ಭಾಗವನ್ನು ಸಸ್ಯಾಹಾರಿ ಮಾಡುವುದೇ ಅಂತಿಮ ಗುರಿಯಾಗಿದ್ದರೆ ಅದು ಸಾಧ್ಯವಿಲ್ಲ ... ಅಡ್ವೊಕೇಟ್ ಜನರಲ್‌ ಅವರಿಗೆ ಪ್ರತಿದಿನ ತುಂಡು ಮೀನು ಇಲ್ಲದೆ ಬದುಕಲಾಗದು!" ಎಂದು ನ್ಯಾಯಾಲಯ ನುಡಿಯಿತು.

ಈ ಮಾತಿಗೆ ತಲೆದೂಗಿದ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ (ಎಜಿ) ಕಿಶೋರ್ ದತ್ತಾ  "ನಾನು ಕಟ್ಟಾ ಮಾಂಸಾಹಾರಿ!" ಎಂದರು.

ಪಿಐಎಲ್‌ ನಿರ್ದಿಷ್ಟ ದೇಗುಲಕ್ಕೆ ಸಂಬಂಧಿಸಿದ್ದೇ ಅಥವಾ ವಿಶಾಲ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ತಡೆಯುವ ಗುರಿ ಹೊಂದಿದೆಯೇ ಎಂದು ಪೀಠ ಅರ್ಜಿದಾರರ ಪರ ವಕೀಲರನ್ನು ಕೇಳಿತು. ಆಗ ದೇವಾಲಯವನ್ನೇ ಗುರಿಯಾಗಿಸಿಕೊಂಡು ಅರ್ಜಿ ಸಲ್ಲಿಸಲಾಗಿದೆ. ಅಂತಹ ಆಚರಣೆ ಸಂವಿಧಾನದ 25 ನೇ ವಿಧಿಯಿಂದ ರಕ್ಷಿಸಲ್ಪಟ್ಟ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅವರು ತಿಳಿಸಿದರು.

ಆದರೆ ಇದಕ್ಕೆ ಸಮ್ಮತಿಸದ ನ್ಯಾಯಾಲಯ "ನೀವು ಹೇಗೆ ಹಾಗೆ ಹೇಳುತ್ತೀರಿ? ನೀವು ಈ ತೀರ್ಮಾನಕ್ಕೆ ಹೇಗೆ ಬರುತ್ತೀರಿ? ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಬಂಗಾಳದ ಈ ಭಾಗದಲ್ಲಿ ಅಂದರೆ ದೇಶದ ಪೂರ್ವ ಭಾಗದಲ್ಲಿರುವ ಧಾರ್ಮಿಕ ಆಚರಣೆಗಳು ಉತ್ತರ ಭಾಗದಲ್ಲಿರುವಂತೆ ಇಲ್ಲ. ಪೌರಾಣಿಕ ಪಾತ್ರಗಳು ನಿಜವಾಗಿಯೂ ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬುದು ವಿವಾದಿತ ವಿಷಯ" ಎಂದಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಸಾಂಕೇತಿಕವಾಗಿ ಪ್ರಾಣಿಬಲಿ ಕೈಗೊಳ್ಳಬಹುದು. ಆದರೆ ಒಂದೇ ದಿನದಲ್ಲಿ 10,000 ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಬಲಿಕೊಡುವ ಅಗತ್ಯವಿಲ್ಲ ಎಂದರು.

ಆಗ ನ್ಯಾಯಪೀಠವು “ನೀವು ಅದನ್ನು ಆ ರೀತಿ ನಿರ್ಬಂಧಿಸಲು ಸಾಧ್ಯವಿಲ್ಲ... ಅದು ನಮ್ಮ ಆತ್ಮಸಾಕ್ಷಿಗೆ ಘಾಸಿ ಉಂಟುಮಾಡಬಹುದು. ಕೋಳಿಯನ್ನು ಮೆಲ್ಲುವ ಆದರೆ ನೈವೇದ್ಯಕ್ಕಾಗಿ ಕೋಳಿ ಕೊಲ್ಲುವುದನ್ನು ನೋಡಲಾಗದ ವ್ಯಕ್ತಿಗಳನ್ನು ನಾವು ಕಂಡಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ. 

ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕೊರತೆಯಿದೆ ಎಂದು ಎಜಿ ದತ್ತಾ ಪ್ರತಿಪಾದಿಸಿದರು. ಧಾರ್ಮಿಕವಾದ ಪ್ರಾಣಿ ಬಲಿ ಮೇಲೆ ನಿಷೇಧ ಹೇರಲು ಕಾನೂನನ್ನು ಜಾರಿಗೆ ತರಬೇಕೆ ವಿನಾ, ನ್ಯಾಯಾಲಯದ ಆದೇಶಗಳ ಮೂಲಕವಲ್ಲ ಎಂದು ಸೂಚಿಸಿದ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಅವರು ಪ್ರಸ್ತಾಪಿಸಿದರು. ಯಾವುದೇ ಸಮುದಾಯದ ಧರ್ಮದ ಭಾಗವಾಗಿ ಪ್ರಾಣಿಗಳನ್ನು ಕೊಲ್ಲಲು ಅನುವು ಮಾಡಿಕೊಡುವ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯ ಸೆಕ್ಷನ್ 28ಅನ್ನು ಅವರು ವಿವರಿಸಿದರು.

Also Read
ತಿರುಪತಿ ಲಡ್ಡು ವಿವಾದ: ಸಿಬಿಐ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಆದರೆ ಪ್ರಾಣಿಬಲಿಯಿಂದಾಗುವ ಮಾಲಿನ್ಯ ಪರಿಸರದ ಬಗೆಗಿನ ಆತಂಕ ಹೆಚ್ಚಿಸಿದೆ ಎಂದು ದಾವೆದಾರರ ಪರ ವಕೀಲರು ಆಕ್ಷೇಪಿಸಿದರು. ಇದನ್ನೂ ಒಪ್ಪದ ನ್ಯಾಯಾಲಯ ಪ್ರಾಣಿ ಬಲಿಯಂತಹ ಪದ್ದತಿಯಿಂದ ಮಾಲಿನ್ಯ ಉಂಟಾದರೆ ಅದನ್ನು ಸರ್ಕಾರ ನಿವಾರಿಸಬೇಕು ಎಂದರು.

"ಇಂದು, ನಾನು ಎಲ್ಲಾ ಪ್ರಾಣಿ ಬಲಿ ನಿಲ್ಲಿಸುವಂತೆ ನಿರ್ದೇಶಿಸಿದರೆ, ಅದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ?" ಎಂದು ನ್ಯಾಯಮೂರ್ತಿ ಬಸು ಕೇಳಿದರು.

ಇದೇ ರೀತಿಯ ಪಿಐಎಲ್ ಈಗಾಗಲೇ ಸಾಮಾನ್ಯ ಪೀಠದ ಮುಂದೆ ಬಾಕಿ ಇದೆ ಎಂದು ರಜಾಕಾಲೀನ ಪೀಠಕ್ಕೆ ತಿಳಿಸಲಾಯಿತು. ಹೀಗಾಗಿ ನಿಯತ ಪೀಠದ ಮುಂದೆ ಬಾಕಿ ಉಳಿದಿರುವ ಪ್ರಕರಣದೊಂದಿಗೆ ಅರ್ಜಿಯನ್ನು ಲಗತ್ತಿಸುವಂತೆ ಪೀಠ ನಿರ್ದೇಶಿಸಿತು.

Kannada Bar & Bench
kannada.barandbench.com