ಉಗ್ರವಾದ ಮಣಿಸಲು ಆರ್ಥಿಕ ಬೆಳವಣಿಗೆ ಅತ್ಯಗತ್ಯ: ಸಿಮೆಂಟ್‌ ಕಂಪೆನಿಗೆ ಭೂಮಿ ಹಂಚಿಕೆ ಸಮರ್ಥಿಸಿಕೊಂಡ ಅಸ್ಸಾಂ ಸರ್ಕಾರ

ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಅವರು, ಹೂಡಿಕೆದಾರರು ವಿಚಿತ್ರ ಕಾರಣಗಳಿಂದಾಗಿ ಅಸ್ಸಾಂ ತೊರೆಯುವುದಕ್ಕಿಂತ ದುಃಖದ ಸಂಗತಿ ಬೇರೊಂದಿಲ್ಲ ಎಂದರು.
Forest Dwellers (Representative Image)
Forest Dwellers (Representative Image)
Published on

ಸಿಮೆಂಟ್ ಕಾರ್ಖಾನೆ ನಿರ್ಮಾಣಕ್ಕಾಗಿ ಬುಡಕಟ್ಟು ಜಿಲ್ಲೆಯಲ್ಲಿ 3,000 (ಸುಮಾರು ಎರಡು ಸಾವಿರ ಎಕರೆ) ಬಿಗಾ ಭೂಮಿಯನ್ನು ಮಂಜೂರು ಮಾಡುವ ನಿರ್ಧಾರವನ್ನು ಅಸ್ಸಾಂ ಸರ್ಕಾರ ಗುವಾಹಟಿ ಹೈಕೋರ್ಟ್‌ನಲ್ಲಿ ಬುಧವಾರ ಸಮರ್ಥಿಸಿಕೊಂಡಿದೆ [ಸೋನೇಶ್ ಹೊಜೈ ಮತ್ತಿತರರು ಹಾಗೂ ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ರಾಜ್ಯ ಸರ್ಕಾರ ಮತ್ತು ದಿಮಾ ಹಸಾವೊ ಬುಡಕಟ್ಟು ಜಿಲ್ಲೆಯಲ್ಲಿ ಆಡಳಿತ ನಡೆಸುವ ನಾರ್ತ್‌ ಕ್ಯಾಚರ್ ಹಿಲ್ಸ್ ಸ್ವಾಯತ್ತ ಮಂಡಳಿ (ಎನ್‌ಸಿಎಚ್‌ಎಸಿ) ಪರವಾಗಿ ವಾದ ಮಂಡಿಸಿದ , ಅಡ್ವೊಕೇಟ್ ಜನರಲ್ (ಎಜಿ) ದೇವಜಿತ್ ಸೈಕಿಯಾ ಅವರು,  ಹೂಡಿಕೆದಾರರು ವಿಚಿತ್ರ ಕಾರಣಗಳಿಗಾಗಿ ಅಸ್ಸಾಂ ತೊರೆಯುವುದಕ್ಕಿಂತ ದುಃಖದ ಸಂಗತಿ ಬೇರೊಂದಿಲ್ಲ ಎಂದರು.

Also Read
ಪತ್ರಕರ್ತ ಅಭಿಸಾರ್ ವಿರುದ್ಧ ಅಸ್ಸಾಂ ಸರ್ಕಾರ ಎಫ್ಐಆರ್: ಬಂಧಿಸದಂತೆ ಸುಪ್ರೀಂ ಮಧ್ಯಂತರ ರಕ್ಷಣೆ

ಈ ಪ್ರದೇಶವನ್ನು ಉಗ್ರವಾದದಿಂದ ಮುಕ್ತಗೊಳಿಸಲು ಆರ್ಥಿಕ ಬೆಳವಣಿಗೆ ಅತ್ಯಗತ್ಯ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಹಿಂದೆ ಹಿಂಸಾಚಾರ ಇತ್ತು. ಆದರೆ ಈಗ ಬಂದೂಕಿನ ಶಬ್ದ ಇಲ್ಲ. ಇದಕ್ಕೆ ಆರ್ಥಿಕ ಬೆಳವಣಿಗೆಯೇ ಕಾರಣ.ಸಿಮೆಂಟ್ ಪ್ಲಾಂಟ್ ಮೂಲಕ ₹11,000 ಕೋಟಿ ಹೂಡಿಕೆ ಆಗಲಿದೆ. 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸುಮಾರು 20,000 ಜನರಿಗೆ ಜೀವನೋಪಾಯ ಒದಗಲಿದೆ ಎಂದರು.

ಪರಿಸರ ಬಲಿಕೊಟ್ಟು ಆರ್ಥಿಕ ಅಭಿವೃದ್ಧಿ ಕೂಡದು ಎಂದು  ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಈ ವೇಳೆ ಹೇಳಿದರು.

ಪರಿಸರ ಸಮತೋಲನ ಎಂಬುದು ಈಗ ಸಂವಿಧಾನದ 2ನೇ ವಿಧಿಯಡಿ ಜಾರಿಗೆ ತರಲಾಗುತ್ತಿದೆ. ಪರಿಸರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಅನ್ನಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಗಮನಾರ್ಹ ಅಂಶವೆಂದರೆ, ಆಗಸ್ಟ್ 12ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಂವಿಧಾನದ 6ನೇ ಶೆಡ್ಯೂಲ್‌ ಅಡಿ  ಸ್ಥಳೀಯ ಬುಡಕಟ್ಟು ಜನಾಂಗದವರ ಹಕ್ಕುಗಳಿಗೆ ಆದ್ಯತೆ ನೀಡಬೇಕಾದ ಜಿಲ್ಲೆಯೊಂದರಲ್ಲಿ ಖಾಸಗಿ ಕಂಪನಿಗೆ ಬೃಹತ್ ಪ್ರಮಾಣದ ಭೂಮಿಯನ್ನು ಮಂಜೂರು ಮಾಡಲಾದ ಬಗ್ಗೆ ಹೈಕೋರ್ಟ್ ಆಘಾತ ವ್ಯಕ್ತಪಡಿಸಿತ್ತು. ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುವಂತೆ ಹೈಕೋರ್ಟ್ ಎನ್‌ಸಿಎಚ್‌ಎಸಿಗೆ ಸೂಚಿಸಿತ್ತು.

ಅಸ್ಸಾಂ ಸರ್ಕಾರ ರಚಿಸಿದ ತ್ರಿಸದಸ್ಯ ಸಮಿತಿಯ ತನಿಖೆ ಬಳಿಕ ಬುಧವಾರ ರಾಜ್ಯ ಸರ್ಕಾರ ಮತ್ತು ಎನ್‌ಸಿಎಚ್‌ಎಸಿ ದಾಖಲೆ ಮತ್ತು ವರದಿ ಸಲ್ಲಿಸಿದವು.

ರಾಜ್ಯ ಸರ್ಕಾರ ಈ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ  ನೀಡಲಾಗಿದ್ದು ಪ್ರತಿ ಬಿಘಾಗೆ ವಾರ್ಷಿಕ ₹250 ಆದಾಯ ಹಾಗೂ ಒಮ್ಮೆಗೇ ₹2 ಲಕ್ಷ ಪ್ರೀಮಿಯಂ ನಿಗದಿಯಾಗಿದೆ ಎಂದು ಹೇಳಿತ್ತು.

Also Read
ನಕಲಿ ಎನ್‌ಕೌಂಟರ್‌: ತನಿಖೆ ನಡೆಸುವಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಆದೇಶ

ನ್ಯಾಯಾಲಯಗಳ ಹಿಂದಿನ ಅವಲೋಕನಗಳಿಂದ ಉಂಟಾದ ವಿವಾದದ ಬಗ್ಗೆಯೂ ಸರ್ಕಾರ ದೂರು ನೀಡಿತು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾ. ಮೇಧಿ ಅವರು ಹೊರಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಮಗೆ ಕಾಳಜಿ ಇಲ್ಲ ಮತ್ತು ಯಾರಾದರೂ ಅವಲೋಕನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದರು.  

ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಮತ್ತು ರಾಜ್ಯ ಸರ್ಕಾರ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಸೈಕಿಯಾ ಉತ್ತರಿಸಿದರು.

ಅಂತಿಮವಾಗಿ, ನ್ಯಾಯಾಲಯವು ರಾಜ್ಯ ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯಿಸಲು ಇತರ ಕಕ್ಷಿದಾರರಿಗೆ ಮೂರು ವಾರಗಳ ಕಾಲಾವಕಾಶ ನೀಡಿತು ಮತ್ತು ಸೆಪ್ಟೆಂಬರ್ 24ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com