Anil Deshmukh with CBI
Anil Deshmukh with CBI

ರಾಜ್ಯ ಸರ್ಕಾರ ಉರುಳಿಸಲು ಅನಿಲ್ ದೇಶಮುಖ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ: ಮುಂಬೈ ನ್ಯಾಯಾಲಯಕ್ಕೆ ಹೃಷಿಕೇಶ್

ಘೋಷಿತ ಅಪರಾಧಿಯಾದ ಪರಮ್ ಬೀರ್ ಸಿಂಗ್ ಅವರಿಗೆ ಸುಪ್ರೀಂಕೋರ್ಟ್ ರಕ್ಷಣೆ ನೀಡುವುದಾದರೆ ಯಾವುದೇ ಕ್ರಿಮಿನಲ್ ಪೂರ್ವಾಪರ ಇಲ್ಲದ ನನ್ನನ್ನು ಈ ನ್ಯಾಯಾಲಯ ಏಕೆ ರಕ್ಷಿಸಲು ಸಾಧ್ಯವಿಲ್ಲ ಎಂದು ಹೃಷಿಕೇಶ್ ಪ್ರಶ್ನಿಸಿದ್ದಾರೆ.
Published on

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಮತ್ತು ತನ್ನ ತಂದೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯು ಮಹಾರಾಷ್ಟ್ರ ಸರ್ಕಾರವನ್ನು ಬೀಳಿಸುವ ಉದ್ದೇಶದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ನಡೆಸಿರುವ ದುಷ್ಕೃತ್ಯ ಎಂದು ಮುಂಬೈ ನ್ಯಾಯಾಲಯಕ್ಕೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಪುತ್ರ ಹೃಷಿಕೇಶ್ ದೇಶಮುಖ್ ಶನಿವಾರ ತಿಳಿಸಿದ್ದಾರೆ.

ಹೃಷಿಕೇಶ್ ದೇಶಮುಖ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂಜಿ ದೇಶಪಾಂಡೆ ನಡೆಸಿದರು. ತನ್ನ ಮತ್ತು ತನ್ನ ತಂದೆಯ ವಿರುದ್ಧದ ತನಿಖೆ ಸಂಪೂರ್ಣ ದುರುದ್ದೇಶದಿಂದ ಕೂಡಿದ್ದು ನಿಗೂಢ ರೀತಿಯಲ್ಲಿ ನಡೆಯುತ್ತಿದೆ. ವಜಾಗೊಂಡ ಪೋಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರಂತಹ ಕೆಲವರು ಸುಳ್ಳು ಆರೋಪ ಮಾಡಿದ್ದರಿಂದ ಇಡೀ ತನಿಖೆ ʼದುಷ್ಟಶಕ್ತಿಗಳ ಸಮರವಾಗಿದೆ. ರಾಜ್ಯ ಸರ್ಕಾರವನ್ನು ಕೆಡವುವ ಉದ್ದೇಶದಿಂದ ಅರ್ಜಿದಾರರು ಮತ್ತವರ ತಂದೆಯ ವಿರುದ್ಧ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಆರೋಪ ಮಾಡಿದೆ ಎಂದು ಹೃಷಿಕೇಶ್‌ ಪರ ವಕೀಲ ಇಂದರ್‌ಪಾಲ್ ಸಿಂಗ್ ತಿಳಿಸಿದರು.

Also Read
ಅನಿಲ್ ದೇಶಮುಖ್ ಕಾರ್ಯದರ್ಶಿ ಬಳಿ ಅನಧಿಕೃತ ವರ್ಗಾವಣೆ, ಸ್ಥಳ ನಿಯುಕ್ತಿಗಳ ಪಟ್ಟಿ ಇತ್ತು: ಬಾಂಬೆ ಹೈಕೋರ್ಟ್‌ಗೆ ಇ ಡಿ

ಘೋಷಿತ ಅಪರಾಧಿಯಾದ ಪರಮ್ ಬೀರ್ ಸಿಂಗ್ ಅವರಿಗೆ ಸುಪ್ರೀಂಕೋರ್ಟ್‌ ರಕ್ಷಣೆ ನೀಡುವುದಾದರೆ ಯಾವುದೇ ಕ್ರಿಮಿನಲ್ ಪೂರ್ವಾಪರ ಇಲ್ಲದ ನನ್ನನ್ನು ಈ ನ್ಯಾಯಾಲಯ ಏಕೆ ರಕ್ಷಿಸಲು ಸಾಧ್ಯವಿಲ್ಲ ಎಂದು ಸಿಂಗ್‌ ಪ್ರಶ್ನಿಸಿದ್ದಾರೆ. ಆದರೆ ಪ್ರಾಸಿಕ್ಯೂಷನ್‌ ವಾದ ಆಲಿಸದೆ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

“ಇದು ಸುಪ್ರೀಂಕೋರ್ಟ್ ಅಲ್ಲ. ಚಿಕ್ಕ ನ್ಯಾಯಾಲಯ. ಇಲ್ಲಿ ರಕ್ಷಣೆ ದೊರೆತರೂ ನಾಳೆ 12ಕ್ಕೆ ಅವರು (ಇಡಿ) ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯುತ್ತಾರೆ. ಅದು ನನಗೆ ಕಳಂಕವಾಗಲಿದೆ. ಕಳಂಕಕ್ಕೆ ಹೆದರುವುದಿಲ್ಲ. ನಾನು ವಿವೇಚನಾಶೀಲವಾಗಿ ನಡೆದುಕೊಳ್ಳುತ್ತಿದ್ದೇನೆ, ಏಕೆಂದರೆ ಅದು ನನ್ನಿಂದ ನಿರೀಕ್ಷಿತವಾಗಿದೆ. ನೀವು ನಿಯಮಗಳನ್ನು ತೋರಿಸಿ ಆಗ ಆದೇಶ ರವಾನಿಸಬಹುದು. ಪ್ರಕರಣದ ಒಂದು ಬದಿಯ ವಾದವನ್ನಷ್ಟೇ ಆಲಿಸಲಾಗಿದೆ ಎಂಬ ಕಳವಳ ಇದೆ. ಇನ್ನೊಂದು ಕಡೆಯವರು ವಾದ ಮಂಡಿಸಬೇಕಿದೆ. ಅವರು ನೀವು ಸೂಚಿಸದೇ ಇರುವ ಪ್ರಕರಣದ ಅಂಶಗಳನ್ನು ಎತ್ತಿ ತೋರಿಸಬಹುದು” ಎಂದು ನ್ಯಾಯಾಲಯ ಹೇಳಿದೆ. ಪ್ರಕರಣ ದಾಖಲಾದ ನಂತರ, ಅರ್ಜಿದಾರರ ಕಡೆಯಿಂದ ಯಾರೂ ಮಧ್ಯಂತರ ಪರಿಹಾರಕ್ಕಾಗಿ ಇಲ್ಲಿಯವರೆಗೆ ಒತ್ತಾಯಿಸಿಲ್ಲ ಎಂದು ಅದು ಹೇಳಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಮ್ ಸಿಂಗ್ ಚೌಧರಿ ಅವರು ಮುಂದಿನ ವಾದ ಮುಂದುವರೆಸುತ್ತಾರೆ ಎಂದು ಸಿಂಗ್ ಅವರು ಸೂಚಿಸಿದ ನಂತರ, ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 6, 2021) ಮುಂದೂಡಿತು.

Kannada Bar & Bench
kannada.barandbench.com