

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಐ-ಪ್ಯಾಕ್) ಆವರಣ ಮತ್ತು ಅದರ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ತಾನು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಿಗೆ ಧಾವಿಸಿ ಕೆಲವು ಕಡತಗಳನ್ನು ಹೊತ್ತೊಯ್ದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯ (ಇ ಡಿ ) ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದೆ.
ಐ-ಪ್ಯಾಕ್‌ನ (ಐ-ಪಿಎಸಿ: ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಗೂ ಪಶ್ಚಿಮ ಬಂಗಾಳ ಚುನಾವಣೆಗೂ ನಂಟಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೂರಿದರೆ ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಇ ಡಿ ಹೇಳಿದೆ.
ಐ- ಪ್ಯಾಕ್ ಸಂಬಂಧಿತ ಆವರಣದಲ್ಲಿ ತನ್ನ ಪಕ್ಷಕ್ಕೆ ಸೇರಿದ ದಾಖಲೆಗಳನ್ನು ಗುರಿಯಾಗಿಸಿಕೊಂಡು ವಶಪಡಿಸಿಕೊಂಡಿದ್ದರ ವಿರುದ್ಧ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಲ್ಲಿಸಿರುವ ಇದೇ ರೀತಿಯ ಅರ್ಜಿಯೊಂದಿಗೆ ನ್ಯಾಯಮೂರ್ತಿ ಸುವ್ರಾ ಘೋಷ್ ಅವರೆದರು ಇಂದು ಪ್ರಕರಣದ ವಿಚಾರಣೆ ಪಟ್ಟಿಯಾಗಿದೆ.
ಗುರುವಾರ ನಡೆದ ಇಡಿ ದಾಳಿಯ ಸಂದರ್ಭದಲ್ಲಿ ಬ್ಯಾನರ್ಜಿ ಅವರು ಐಪ್ಯಾಕ್-ಸಂಬಂಧಿತ ಆವರಣದಿಂದ ವಿವಿಧ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಇ ಡಿ ದೂರಿದೆ. ಆದರೆ ಅದರಲ್ಲಿ ತಮ್ಮ ರಾಜಕೀಯ ಪಕ್ಷ ಟಿಎಂಸಿ ಬಗ್ಗೆ ಮಾಹಿತಿ ಇದೆ ಎಂದು ಮಮತಾ ಆರೋಪಿಸಿದ್ದಾರೆ. ವರದಿಗಳ ಪ್ರಕಾರ, 2019 ರ ಲೋಕಸಭಾ ಚುನಾವಣೆಯ ನಂತರ ಐ-ಪ್ಯಾಕ್ ಸಂಸ್ಥೆ (ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಈ ಹಿಂದೆ ಇದರ ಸಂಸ್ಥಾಪಕ ಮಾರ್ಗದರ್ಶಿಯಾಗಿದ್ದರು. ಜನ್ ಸೂರಜ್ ಪಕ್ಷ ಸ್ಥಾಪನೆ ಬಳಿಕ ಅವರು ಸಂಸ್ಥೆಯಿಂದ ದೂರವಾಗಿದ್ದಾರೆ) ತೃಣಮೂಲ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ.
2020ರಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಉದ್ಯಮಿ ಅನುಪ್ ಮಜೀ ಅವರ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿತ್ತು ಎಂದು ಇ ಡಿ ವಾದಿಸಿದೆ.
ಮಜೀ ನೇತೃತ್ವದ ಕಲ್ಲಿದ್ದಲು ಕಳ್ಳಸಾಗಣೆ ಜಾಲವು ಪಶ್ಚಿಮ ಬಂಗಾಳದ ಇಸಿಎಲ್ ಲೀಸ್ ಪ್ರದೇಶಗಳಿಂದ ಕಲ್ಲಿದ್ದಲನ್ನು ಕಳವು ಮಾಡಿ ವಿವಿಧ ಕಾರ್ಖಾನೆಗಳು ಹಾಗೂ ಘಟಕಗಳಿಗೆ ಮಾರಾಟ ಮಾಡುತ್ತಿತ್ತು. ಕಲ್ಲಿದ್ದಲಿನ ದೊಡ್ಡ ಭಾಗವನ್ನು ಶಾಕಾಂಬರಿ ಸಮೂಹ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ತನಿಖೆಯಲ್ಲಿ ಹವಾಲಾ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು ಎಂದು ಇ ಡಿ ಹೇಳಿತ್ತು.
ಶೋಧ ನಡೆಯುತ್ತಿದ್ದ ವೇಳೆ ಕಲ್ಕತ್ತಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮಮತಾ ಅವರ ಆಗಮನದ ಬಳಿಕ ನಾಟಕೀಯ ಬೆಳವಣಿಗೆಗಳು ನಡೆದವು. ಪಿಎಂಎಲ್‌ಎ ಕಾಯಿದೆಯಡಿ ನಡೆಯುತ್ತಿದ್ದ ತನಿಖೆ ಮತ್ತು ವಿಚಾರಣೆಗೆ ಮಮತಾ ಅವರ ಈ ನಡೆ ಅಡ್ಡಿ ಉಂಟು ಮಾಡಿದೆ ಎಂದು ಇ ಡಿ ಆರೋಪಿಸಿದೆ.
ಈ ರೀತಿ ಮಧ್ಯಪ್ರವೇಶಿಸಿರುವುದು ತನಿಖಾ ಸಂಸ್ಥೆಯ ಅಧಿಕಾರದ ಮೇಲೆ ನಡೆಸಿದ ದಾಳಿ ಆಗಿದ್ದು ಕಾನೂನಾತ್ಮಕ ಆಡಳಿತವನ್ನು ದುರ್ಬಲಗೊಳಿಸುತ್ತದೆ. ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿ ಅವರನ್ನು ಬಂಧಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂತಲೂ ಅದು ಹೇಳಿದೆ.
ಆದರೆ ಚುನಾವಣೆ ಹೊಸ್ತಿಲಲ್ಲಿ ಇ ಡಿ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇ ಡಿ ಸೋರಿಕೆ ಮಾಡದಂತೆ ತಡೆಯಬೇಕು ಎಂದು ಅದು ನ್ಯಾಯಾಲಯವನ್ನು ಕೋರಿದೆ.
ಪ್ರಕರಣದಲ್ಲಿ ಇಡಿ, ತೃಣಮೂಲ ಕಾಂಗ್ರೆಸ್ ಮತ್ತು ಐ-ಪಿಎಸಿ ಸಹ ಸಂಸ್ಥಾಪಕ ಪ್ರತಿಕ್ ಜೈನ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಪೊಲೀಸರು ಹಾಗೂ ಇತರರ ಪಾತ್ರದ ತನಿಖೆಗೆ ಸಿಬಿಐ ಎಫ್‌ಐಆರ್ ದಾಖಲಿಸುವಂತೆ ಇಡಿ ಹೈಕೋರ್ಟ್‌ಗೆ ಮನವಿ ಮಾಡಿದೆ.