

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ದೂರನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು (ಇ ಡಿ) ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಇ ಡಿ ಸಲ್ಲಿಸಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಮುಂದಿನ ವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆಯಿದೆ.
ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಡಿಸೆಂಬರ್ 16 ರಂದು ಇ ಡಿ ದೂರನ್ನು ತಿರಸ್ಕರಿಸಿದ್ದರು. ಈ ಪ್ರಕರಣವು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರನ್ನು ಆಧರಿಸಿರುವುದರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ನಿರ್ವಹಿಸಲಾಗದು ಎಂದು ಅವರು ಹೇಳಿದ್ದರು.
ಮುಂದುವರೆದು, ಪ್ರಸ್ತುತ ಸಲ್ಲಿಕೆಯಾಗಿರುವ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ದೂರು ಎಫ್‌ಐಆರ್ ಆಧರಿಸಿರದೆ ಸಾರ್ವಜನಿಕ ವ್ಯಕ್ತಿಯಾದ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ಸಿಆರ್‌ಪಿಸಿ ಸೆಕ್ಷನ್ 200ರ ಅಡಿಯಲ್ಲಿ ಸಲ್ಲಿಸಿದ ದೂರಿನಡಿ ಹೊರಡಿಸಲಾದ ಸಂಜ್ಞೇಯ ಹಾಗೂ ಸಮನ್ಸ್ ಆದೇಶ ಆಧಾರಿತವಾಗಿದೆ. ಪ್ರಸ್ತುತ ದೂರಿನ ಸಂಜ್ಞೇಯ ಪರಿಗಣನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ವಿವರಿಸಿದ್ದರು.
ಪಿಎಂಎಲ್‌ಎ ಕಾಯಿದೆಯಡಿ ಉಲ್ಲೇಖಿಸಲಾದ ಅನುಸೂಚಿತ ಕೃತ್ಯಕ್ಕೆ ಎಫ್‌ಐಆರ್ ಆಧರಿಸಿಯಷ್ಟೇ ಇ ಡಿ ಹಣ ವರ್ಗಾವಣೆ ಪ್ರಕರಣ ಹೂಡಬಹುದು ಎಂದು ಅದು ಒತ್ತಿ ಹೇಳಿತ್ತು.
ಪಿಎಂಎಲ್‌ಎ ಸೆಕ್ಷನ್ 3 ಅಡಿಯಲ್ಲಿ ವ್ಯಾಖ್ಯಾನಿಸಲಾದ ಹಾಗೂ ಸೆಕ್ಷನ್ 4 ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಹಣಕಾಸು ಅಕ್ರಮ ಅಪರಾಧಕ್ಕೆ ಸಂಬಂಧಿಸಿದ ತನಿಖೆ ಮತ್ತು ಅದರ ಆಧಾರದ ಮೇಲೆ ಸಲ್ಲಿಸಲಾದ ಅಭಿಯೋಗ ದೂರು ಕಾಯಿದೆಯ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಇಲ್ಲದಿದ್ದಲ್ಲಿ ಮಾನ್ಯವಾಗದು ಎಂದ ನ್ಯಾಯಾಧೀಶರು ಸೋನಿಯಾ ಮತ್ತು ರಾಹುಲ್ ವಿರುದ್ಧ ಇ ಡಿ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿತ್ತು.
ಇ ಡಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವು "ಕಾನೂನಿನ ಪ್ರಕಾರ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ" ಎಂದು ಹೇಳಿದೆ. ಪ್ರಾಸಿಕ್ಯೂಷನ್ ಆರೋಪ ಪಟ್ಟಿಯು ಖಾಸಗಿ ವ್ಯಕ್ತಿಯೊಬ್ಬರ ಖಾಸಗಿ ದೂರಿನಿಂದ ಮೂಡುವಂತಿಲ್ಲ ಹಾಗೂ ಅನುಸೂಚಿತ ಅಪರಾಧವನ್ನು ಕಾನೂನು ಜಾರಿ ಸಂಸ್ಥೆ ಮಾತ್ರವೇ ದಾಖಲಿಸಬೇಕು ಎನ್ನುವ ಏಕೈಕ ಆಧಾರದಲ್ಲಿ ನ್ಯಾಯಾಲಯವು ಅಪರಾಧದ ಸಂಜ್ಞೇಯ ಪರಿಗಣನೆಗೆ ಮುಂದಾಗಿಲ್ಲ ಎಂದು ಅದು ಹೇಳಿದೆ.
ಆದರೆ, ವಿಚಾರಣಾ ನ್ಯಾಯಾಲಯವು ತನ್ನ ತೀರ್ಮಾನದಲ್ಲಿ ತಪ್ಪು ಮಾಡಿದೆ. ಖಾಸಗಿ ದೂರಿನ ಆಧಾರದಲ್ಲಿ ನ್ಯಾಯಾಲಯವು ತೆಗೆದುಕೊಂಡ ಸಂಜ್ಞೇಯವು "ಪೊಲೀಸರು ದಾಖಲಿಸುವ ಎಫ್ಐಆರ್ ಗಿಂತ ಉನ್ನತವಾಗಿದೆ. ಏಕೆಂದರೆ, ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ಅದರ ಸಂಜ್ಞೇಯ ಪರಿಗಣಿಸಲು ನಿರಾಕರಿಸುವ ಸಾಧ್ಯತೆಯಿದೆ" ಎಂದು ಸಂಸ್ಥೆ ವಾದಿಸಿದೆ.
"ಪ್ರಸ್ತುತ ವಿಷಯದಲ್ಲಿ, ಅನುಸೂಚಿತ ಅಪರಾಧಕ್ಕೆ ಸಂಬಂಧಿಸಿದ ಖಾಸಗಿ ದೂರಿನ (ಡಾ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವುದು) ಆಧಾರದಲ್ಲಿ ಸಂಜ್ಞೇಯವನ್ನು ಸಕ್ಷಮ ನ್ಯಾಯಾಲಯವು ತೆಗೆದುಕೊಂಡಿದೆ. ಈ ಕ್ರಮವನ್ನು ಸುಪ್ರೀಂ ಕೋರ್ಟ್‌ವರೆಗಿನ ಎಲ್ಲ ನ್ಯಾಯಾಲಯಗಳು ಎತ್ತಿಹಿಡಿದಿವೆ. ಆದ್ದರಿಂದ, ಅನುಸೂಚಿತ ಅಪರಾಧವು ಪೊಲೀಸರು ದಾಖಲಿಸುವ ಎಫ್ಐಆರ್‌ಗಿಂತ ಹೆಚ್ಚಿನ ಸ್ಥಾನದಲ್ಲಿದೆ "ಎಂದು ಇ ಡಿ ಹೇಳಿದೆ.