ಮದ್ರಾಸ್ ಹೈಕೋರ್ಟ್‌ನಿಂದ ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ ವರ್ಗಾವಣೆ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

ನ್ಯಾಯಾಂಗ ಸ್ಥಿರತೆಗಾಗಿ ಮತ್ತು ವ್ಯತಿರಿಕ್ತ ತೀರ್ಪುಗಳನ್ನು ತಪ್ಪಿಸುವುದಕ್ಕಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕೆಂದು ಸರ್ಕಾರ ಕೋರಿದೆ.
TASMAC
TASMAC
Published on

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಆವರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ್ದ ದಾಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಟಿಎಎಸ್ಎಂಎಸಿ ಉದ್ಯೋಗಿಗಳ ಮೊಬೈಲ್ ಫೋನ್‌ಗಳು ಇಲ್ಲವೇ ಎಲೆಕ್ಟ್ರಾನಿಕ್ ಸಾಧನಗಳನ್ನು ಇ ಡಿ ವಶಪಡಿಸಿಕೊಳ್ಳಬಹುದೇ ಮತ್ತು ಅಂತಹ ಸಾಧನಗಳಿಂದ ಉದ್ಯೋಗಿಗಳ ಒಪ್ಪಿಗೆ ಅಥವಾ ನ್ಯಾಯಾಂಗ ವಾರಂಟ್ ಇಲ್ಲದೆ ಮಾಹಿತಿ ಸಂಗ್ರಹಿಸಬಹುದೇ ಎಂಬುದು ಸೇರಿದಂತೆ ಟಿಎಎಸ್ಎಂಎಸಿ ಆವರಣದಲ್ಲಿ ಇ ಡಿ ಕೈಗೊಂಡ ಶೋಧ ಮತ್ತು ಮುಟ್ಟುಗೋಲು ಕಾರ್ಯಾಚರಣೆಗಳ ಕಾನೂನುಬದ್ಧತೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ರಾಜ್ಯ ಸರ್ಕಾರ ಒತ್ತಿ ಹೇಳಿದೆ.

Also Read
ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ: ಇ ಡಿ ನಡೆ ಟೀಕಿಸಿದ್ದ ಮದ್ರಾಸ್ ಹೈಕೋರ್ಟ್ ಪೀಠ ವಿಚಾರಣೆಯಿಂದ ಹಿಂದಕ್ಕೆ

ದಾಳಿ ವೇಳೆ ನಿಗಮದ ನೌಕರರನ್ನು 60 ಗಂಟೆಗಳಿಗೂ ಹೆಚ್ಚು ಕಾಲ ಇ ಡಿ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬಹುದೇ ಎಂದು ರಾಜ್ಯ ಸರ್ಕಾರ ಪ್ರಶ್ನಿಸಿದೆ.

Also Read
ದಾಳಿ ವೇಳೆ ಗೌಪ್ಯತೆ ಉಲ್ಲಂಘಿಸಿದ ಆರೋಪ: ಇ ಡಿ ನಡೆ ಆತಂಕಕಾರಿ ಎಂದ ಮದ್ರಾಸ್ ಹೈಕೋರ್ಟ್

ಈ ಹಿಂದೆಯೂ ಇದೇ ಪ್ರಶ್ನೆಯನ್ನೆತ್ತಿ ಅದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇ ಡಿ ಸರಿಯಾದ ವಿವರಣೆಯನ್ನು ನೀಡದೆ ಟಿಎಎಸ್ಎಂಎಸಿ ಆವರಣಕ್ಕೆ ನುಗ್ಗಿ ನೌಕರರನ್ನು 60 ಗಂಟೆಗಳಿಗೂ ಹೆಚ್ಚು ಕಾಲ ಸಿಬ್ಬಂದಿಯನ್ನು ಹೊರಹೋಗದಂತೆ ತಡೆದಿದೆ. ಮಹಿಳಾ ಉದ್ಯೋಗಿಗಳನ್ನು ಮಧ್ಯರಾತ್ರಿಯವರೆಗೆ ಇರಿಸಿಕೊಂಡು ಮರುದಿನ ಬೆಳಿಗ್ಗೆ 8-9 ಗಂಟೆಗೆ ಹಿಂತಿರುಗಬೇಕೆಂಬ ಷರತ್ತು ವಿಧಿಸಿ ಕಳುಹಿಸಿತ್ತು ಎಂದು ಅದು ಆರೋಪಿಸಿತ್ತು.

ಈ ಮಧ್ಯೆ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್‌ ಪೀಠ ಪ್ರಕರಣದಿಂದ ಹಿಂದೆ ಸರಿದಿತ್ತು. ಇ ಡಿ ಕೈಗೊಂಡ ಎಲ್ಲಾ ಕೃತ್ಯಗಳು ಕಾರ್ಯವಿಧಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ನಡೆದಿವೆ ಎಂದು ವಾದಿಸಿ ರಾಜ್ಯವು ಈಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇಸಿಐಆರ್, ಮುಟ್ಟುಗೋಲು ಮೆಮೊಗಳು, ಹ್ಯಾಶ್ ಮೌಲ್ಯಗಳು ಅಥವಾ ಸರ್ಚ್ ವಾರಂಟ್‌ಗಳ ಪ್ರತಿಗಳನ್ನು ಜಾರಿ ನಿರ್ದೇಶನಾಲಯ ನೀಡಿಲ್ಲ ಎಂದು ಕೂಡ ರಾಜ್ಯ ಸರ್ಕಾರ ಹೇಳಿದೆ.

ಮುಂದುವರಿದು, ಇ ಡಿಯ ಡಿಜಿಟಲ್‌ ಶಿಷ್ಟಾಚಾರದ ವಿಚಾರವಾಗಿ ಈ ಹಿಂದೆಯೂ ಮಾಧ್ಯಮ ವೃತ್ತಿಪರರ ಪ್ರತಿಷ್ಠಾನದ ಅರ್ಜಿ ಮತ್ತು ನ್ಯೂಸ್‌ಕ್ಲಿಕ್‌ ಸುದ್ದಿವಾಹಿನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದೇ ರೀತಿಯ ಕಳವಳಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಎತ್ತಲಾಗಿದೆ. ಈ ವಿಷಯಗಳು ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ ಎನ್ನುವ ವಿಚಾರವನ್ನು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ನ್ಯಾಯಾಂಗ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘರ್ಷದ ನಿರ್ಧಾರಗಳನ್ನು ತಪ್ಪಿಸಲು ನಿಗಮದ ವಿರುದ್ಧದ ಇ ಡಿ ದಾಳಿ ಪ್ರಶ್ನಿಸುವ ಅರ್ಜಿಗಳನ್ನು ಸಹ ವಿಚಾರಣೆ ನಡೆಸಬೇಕೆಂದು ರಾಜ್ಯವು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದೆ.

Kannada Bar & Bench
kannada.barandbench.com