"ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಪಕ್ಷಕಾರರು ಯಥಾಸ್ಥಿತಿ ಕಾಪಾಡಬೇಕು. ರಮ್ಜಾನ್ ಮತ್ತು ಬಕ್ರೀದ್‌ನಲ್ಲಿ ಮಾತ್ರ ಪಾರ್ಥನೆ ಸಲ್ಲಿಸಲು ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಇರುತ್ತದೆ. ಇದನ್ನು ಹೊರತುಪಡಿಸಿ ಯಾವುದೇ ದಿನ ಪ್ರಾರ್ಥನೆಗೆ ಅವಕಾಶವಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಹಿಂದೂ ಪರ ಸಂಘಟನೆಗಳು ಅವಕಾಶ ಕೇಳುತ್ತಿರುವ ನಡುವೆಯೇ ಕರ್ನಾಟಕ ಹೈಕೋರ್ಟ್‌ನ ಆದೇಶವು ಮಹತ್ವದ ಪಡೆದುಕೊಂಡಿದೆ.
ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರು 2022ರ ಆಗಸ್ಟ್ 6ರಂದು ಮಾಡಿರುವ ಆದೇಶವನ್ನು ವಜಾ ಮಾಡಬೇಕು. ಕರ್ನಾಟಕದ ಕೇಂದ್ರೀಯ ಮುಸ್ಲಿಮ್ ಮಂಡಳಿಯ ಹೆಸರಿಗೆ ಆಕ್ಷೇಪಿತ ಈದ್ಗಾ ಮೈದಾನದ ಭೂಮಿಯ ಖಾತೆ ಮತ್ತು ಕಂದಾಯ ದಾಖಲೆ ನೀಡಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಆದೇಶಿಸುವಂತೆ ಕೋರಿ ಕರ್ನಾಟಕ ವಕ್ಫ್ ಮಂಡಳಿ ಮತ್ತು ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಉತ್ತಮ ಆಡಳಿತ ಮತ್ತು ಸುಧಾರಣೆಗಾಗಿ ಜಾರಿಗೆ ತರಲಾದ ವಕ್ಫ್ ಕಾಯಿದೆ 1964ರ ಅಡಿ ಹೊರಡಿಸಲಾಗಿರುವ ಅಧಿಸೂಚನೆಗೆ ರಾಜ್ಯ ಸರ್ಕಾರ ಒಳಪಟ್ಟಿದೆಯೇ ಇಲ್ಲವೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಇದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಮುಂದುವರಿದು, “ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಪಕ್ಷಕಾರರು ಯಥಾಸ್ಥಿತಿ ಕಾಪಾಡಬೇಕು. ಈದ್ಗಾ ಮೈದಾನವು ಆಟಕ್ಕೆ ಸೀಮಿತವಾಗಿದ್ದು, ಮುಸ್ಲಿಮ್ ಸಮುದಾಯದವರು ಬಕ್ರೀದ್ ಮತ್ತು ರಮ್ಜಾನ್ ಹಬ್ಬದಂದು ಮಾತ್ರ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಬೇರಾವುದೇ ದಿನ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಅವರು “ಈದ್ಗಾ ಮೈದಾನ ಇರುವ ಸರ್ವೆ ನಂ.40ರಲ್ಲಿನ 2.05 ಎಕರೆ ಭೂಮಿಯನ್ನು ಖಾತೆ ಮಾಡಿಕೊಡುವಂತೆ ಅರ್ಜಿದಾರರು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರನ್ನು ಕೋರಿದ್ದರು. ಆದರೆ, ಬಿಬಿಎಂಪಿ ಜಂಟಿ ಆಯುಕ್ತರು ಅದು ಕಂದಾಯ ಭೂಮಿ ಎಂದು ಆದೇಶಿಸಿದ್ದಾರೆ. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ” ಎಂದರು.
“1954ರ ವಕ್ಫ್ ಕಾಯಿದೆ ಉಪ ಸೆಕ್ಷನ್ 2, 5ರ ಪ್ರಕಾರ ಆಕ್ಷೇಪಿತ ಈದ್ಗಾ ಮೈದಾನದ 2.05 ಎಕರೆ ಭೂಮಿಯು ವಕ್ಫ್ ಸ್ವತ್ತು ಎಂದು 1965ರ ಜೂನ್ 7ರಂದು ಬೆಂಗಳೂರಿನ ಮೈಸೂರು ವಕ್ಫ್ ಮಂಡಳಿಯು ಹೇಳಿದೆ” ಎಂದು ವಾದಿಸಿರುವುದನ್ನು ಪೀಠವು ದಾಖಲಿಸಿಕೊಂಡಿದೆ.
ಅಲ್ಲದೇ, ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಆಕ್ಷೇಪಾರ್ಹವಾದ ಅಧಿಸೂಚನೆಯು ರಾಜ್ಯ ಸರ್ಕಾರ ಅಥವಾ ಯಾವುದೇ ವ್ಯಕ್ತಿಯ ವಿರುದ್ಧವಾಗಿಲ್ಲ. ಹೀಗಾಗಿ, ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತರು ಮಾಡಿರುವ ಆದೇಶವು ಸರಿಯಾಗಿದೆ. ಆಕ್ಷೇಪಾರ್ಹವಾದ ಮೈದಾನವು ಯಾವುದೇ ವ್ಯಕ್ತಿಗೆ ಸೇರಿಲ್ಲ. ಮೈಸೂರು ಭೂಕಂದಾಯ ಕಾಯಿದೆ ಸೆಕ್ಷನ್ 36ರ ಪ್ರಕಾರ ಅದು ರಾಜ್ಯ ಸರ್ಕಾರಕ್ಕೆ ಸೇರಿದ್ದಾಗಿದೆ” ಎಂದು ಸಮರ್ಥಿಸಿರುವುದನ್ನೂ ಪೀಠವು ದಾಖಲಿಸಿಕೊಂಡಿದೆ.
ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲು ಯಾವುದೇ ಅನುಮತಿಯ ಅಗತ್ಯವಿಲ್ಲ. ರಮ್ಜಾನ್ ಮತ್ತು ಬಕ್ರೀದ್ ಹಬ್ಬದಂದು ಮಾತ್ರ ಪ್ರಾರ್ಥನೆಗೆ ಅನುಮತಿಸಲಾಗಿದೆ. ಆದರೆ, ಪ್ರತಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಇದನ್ನು ಹುಬ್ಬಳ್ಳಿ ಈದ್ಗಾ ಮೈದಾನದ (ವಿವಾದ) ರೀತಿ ಮಾಡಬೇಡಿ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಉದ್ದೇಶಿಸಿ ಪೀಠವು ಮೌಖಿಕವಾಗಿ ಕಿವಿಮಾತು ಹೇಳಿತು.
ಕರ್ನಾಟಕ ಕೇಂದ್ರೀಯ ಮುಸ್ಲಿಮ್ ಸಂಸ್ಥೆಯ ಹೆಸರಿನಲ್ಲಿ ಖಾತೆ ಇಲ್ಲ ಎಂದ ಮಾತ್ರಕ್ಕೆ 1964ರಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ನೀಡಲಾಗಿರುವ ಹಕ್ಕು ಹೋಗುವುದಿಲ್ಲ. 1964ರ ಅಧಿಸೂಚನೆ ರಾಜ್ಯ ಸರ್ಕಾರಕ್ಕೆ ಅನ್ವಯಿಸದಿದ್ದರೆ ಅದನ್ನು ಪ್ರಶ್ನಿಸಿಬಹುದು ಎಂದು ಮೌಖಿಕವಾಗಿ ಸರ್ಕಾರಕ್ಕೆ ಪೀಠವು ಹೇಳಿತು.
ಅಲ್ಲದೇ, ಹಾಲಿ ಅರ್ಜಿ ವಿಲೇವಾರಿಯಾಗುವವರೆಗೆ ಈದ್ಗಾ ಮೈದಾನವನ್ನು ಆಟಕ್ಕೆ ಮಾತ್ರ ಸೀಮಿತಗೊಳಿಸಬೇಕು. ಆಟಕ್ಕೆ ಹೊರತುಪಡಿಸಿ ಯಾವುದೇ ಪಕ್ಷಕಾರರು ಬೇರೆ ಯಾವುದೇ ಕಾರಣಕ್ಕೂ ಅಲ್ಲಿಗೆ ಭೇಟಿ ನೀಡುವಂತಿಲ್ಲ. ಆಟಕ್ಕಾಗಿ ಮಾತ್ರ ಮೈದಾನ ಸೀಮಿತವಾಗಿದ್ದರೆ ಸರ್ಕಾರಕ್ಕೆ ಸಮಸ್ಯೆ ಏನು? ಎಂದು ಏರುಧ್ವನಿಯಲ್ಲಿ ಪೀಠ ಪ್ರಶ್ನಿಸಿತು.
ಆಟವಲ್ಲದೇ ಬೇರೆ ಯಾವ ಉದ್ದೇಶಕ್ಕೆ ಅದನ್ನು ಬಳಸಬೇಕು ಎಂದು ಕೊಂಡಿದ್ದೀರಿ? ಎಂದು ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಾಲಯವು ಆಟದ ಮೈದಾನ ಎಂದು ಸರ್ಕಾರ ಹೇಳಿರುವಾಗ ಅದನ್ನು ಆಟದ ಮೈದಾನವನ್ನಾಗಿ ನಿರ್ವಹಿಸಬೇಕು. ಯಾವುದೇ ತೆರನಾದ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು. ಅರ್ಜಿದಾರರಿಗೂ ಇದೇ ರೀತಿಯ ನಿರ್ದೇಶನ ನೀಡಲಾಗುವುದು. ಅರ್ಜಿ ವಿಲೇವಾರಿಯಾದ ಬಳಿಕವೂ ಮೈದಾನವನ್ನು ಅಭಿವೃದ್ಧಿಪಡಿಸಬಹುದು ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ಅಭಿವೃದ್ಧಿ ಪ್ರಶ್ನೆಗೆ ಮೌಖಿಕವಾಗಿ ಪೀಠ ಪ್ರತಿಕ್ರಿಯಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು “ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ವ್ಯಾಪ್ತಿ ಇಲ್ಲದಿದ್ದರೂ ಕಂದಾಯ ಭೂಮಿ ಎಂದು ಆದೇಶ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಈ ಹಿಂದೆಯ ಪ್ರಕರಣ ನಿರ್ಧರಿಸಿದೆ. ಆಕ್ಷೇಪಿತ ಭೂಮಿಯು ವಕ್ಫ್ ಮಂಡಳಿಗೆ ಸೇರಿದೆ ಎಂದು ತೀರ್ಮಾನವಾಗಿದೆ. ಈಗ ವಕ್ಫ್ ಮಂಡಳಿ ಅಧಿಸೂಚನೆ ಪ್ರಶ್ನಿಸಿದೇ ಸರ್ಕಾರ ಅಥವಾ ಬಿಬಿಎಂಪಿ ಹಕ್ಕು ಸಾಧಿಸಲಾಗದು” ಎಂದರು.
ಎಜಿ ಪ್ರಭುಲಿಂಗ ನಾವದಗಿ ಅವರು “ಸುಪ್ರೀಂ ಕೋರ್ಟ್ ಆದೇಶದ ಬಳಿಕ ವಕ್ಫ್ ಪಕ್ಷಕಾರರು ಡಿಕ್ಲರೇಷನ್ ಹಾಕಬೇಕಿತ್ತು. ಅರ್ಜಿದಾರರು ವಕ್ಫ್ ನ್ಯಾಯ ಮಂಡಳಿಯಲ್ಲಿ ಆದೇಶ ಪ್ರಶ್ನಿಸಬೇಕು” ಎಂದರು.
ಒಂದು ಹಂತದಲ್ಲಿ ಬಿಬಿಎಂಪಿ ಆಯುಕ್ತರ ಸಲಹೆ ಕೇಳಲು ಕಾಲಾವಕಾಶ ನೀಡಬೇಕು ಎಂದು ಎಜಿ ಕೋರಿದರು. ಇದಕ್ಕೆ ಒಪ್ಪದ ಪೀಠವು ಇಲ್ಲಿ ಬಿಬಿಎಂಪಿ ಪಾತ್ರವೇನಿಲ್ಲ. ಸಂಬಂಧಿತ ಇಲಾಖೆಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ಎಂದಿತ್ತು.
ಅಂತಿಮವಾಗಿ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ಆದೇಶಿಸಿರುವ ಪೀಠವು ಸೆಪ್ಟೆಂಬರ್ 23ಕ್ಕೆ ವಿಚಾರಣೆ ಮುಂದೂಡಿತು.