ಪೆಗಸಸ್ ಹಗರಣ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಭಾರತೀಯ ಸಂಪಾದಕರ ಕೂಟ

ಸಂಬಂಧಪಟ್ಟ ಕಾನೂನಿನಡಿ ಭಾರತೀಯ ನಾಗರಿಕರ ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರತಿಬಂಧಿಸುವ ಮತ್ತು ಮೇಲ್ವಿಚಾರಣೆಗೆ ಅಧಿಕಾರ ನೀಡುವ ಆದೇಶಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಪೆಗಸಸ್ ಹಗರಣ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಭಾರತೀಯ ಸಂಪಾದಕರ ಕೂಟ

ಪೆಗಸಸ್‌ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ಬೇಹು- ತಂತ್ರಾಂಶ ಅಳವಡಿಸಲು ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ವಿವರ ಮತ್ತು ಅಂತಹ ತಂತ್ರಾಂಶ ಬಳಸಿದ ವ್ಯಕ್ತಿಗಳ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಮನವಿಯಲ್ಲಿ ಕೋರಲಾಗಿದೆ.

ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಮತ್ತು ಬೇಹು- ತಂತ್ರಾಂಶ ಬಳಕೆ ಹಾಗೂ ಕಣ್ಗಾವಲು ಕುರಿತಂತೆ ಈಗಿರುವ ಕಾನೂನು ವ್ಯವಸ್ಥೆಯ ಸಾಂವಿಧಾನಿಕ ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪ್ರಶ್ನಿಸಿದೆ.

ವಕೀಲರಾದ ರೂಪಾಲಿ ಸ್ಯಾಮ್ಯುಯೆಲ್, ರಾಘವ್ ಟಾಂಖಾ ಮತ್ತು ಎಲ್ಜಫೀರ್ ಅಹ್ಮದ್ ಬಿಎಫ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

Also Read
ಪೆಗಾಸಸ್‌ ಹಗರಣ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ ಸರ್ಕಾರ

ಮನವಿಯ ಇತರ ಪ್ರಮುಖಾಂಶಗಳು

  • ಸಂವಿಧಾನದತ್ತವಾಗಿ ನೀಡಲಾದ ತನ್ನ ಅಧಿಕಾರದ ಎಲ್ಲೆಯನ್ನು ಆಡಳಿತಾರೂಢ ಸರ್ಕಾರ ಮೀರಿದೆಯೇ ಮತ್ತು ತಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಯವುದು ದೇಶದ ನಾಗರಿಕರ ಹಕ್ಕಾಗಿದೆ.

  • ಸಂಸತ್ತಿನ ಪ್ರಕ್ರಿಯೆಗಳ ಮೂಲಕ ಉತ್ತರದಾಯಿತ್ವ ಬಯಸುವ ಮತ್ತು ಸಾಂವಿಧಾನಿಕ ಮಿತಿಗಳನ್ನು ಜಾರಿಗೊಳಿಸುವ ಎಲ್ಲಾ ಪ್ರಯತ್ನಗಳಿಗೆ ಕಲ್ಲು ತೂರಲಾಗಿದೆ.

  • ಬೇಹು- ತಂತ್ರಾಂಶ ಬಳಸಿ ಪತ್ರಕರ್ತರನ್ನು ವಿಶೇಷವಾಗಿ ಗುರಿ ಮಾಡಲಾಗಿದ್ದು ಪತ್ರಿಕಾ ಸ್ವಾತಂತ್ರ್ಯ ಎಂಬುದು ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು ಪತ್ರಕರ್ತರ ವರದಿಗಾರಿಕೆಯಲ್ಲಿ ಹಸ್ತಕ್ಷೇಪ ಮಾಡದೇ ಇರುವುದನ್ನು ಆಧರಿಸಿದೆ.

  • ಸಂಬಂಧಿತ ಕಾನೂನಿನಡಿ ಭಾರತೀಯ ನಾಗರಿಕರ ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರತಿಬಂಧಿಸುವ ಮತ್ತು ಮೇಲ್ವಿಚಾರಣೆಗೆ ಅಧಿಕಾರ ನೀಡಿದ ಆದೇಶಗಳನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು.

Also Read
ಪೆಗಸಸ್‌ ಹಗರಣ: ಮುಂದಿನ ವಾರ ಪ್ರಕರಣವನ್ನು ಆಲಿಸಲು ಸಮ್ಮತಿಸಿದ ಸುಪ್ರೀಂ ಕೋರ್ಟ್

ಮನವಿ ಈ ಕೆಳಗಿನವುಗಳ ಬಗ್ಗೆ ಮಾಹಿತಿ ಕೋರಿದೆ:

- ಕೇಂದ್ರ ಸರ್ಕಾರ ಅದರ ಯಾವುದೇ ಏಜೆನ್ಸಿಗಳು ಭಾರತೀಯ ನಾಗರಿಕರ ಮೇಲೆ ಪ್ರಯೋಗಿಸಲೆಂದು ಎನ್‌ಎಸ್‌ಒ ಗ್ರೂಪ್‌ ಅಥವಾ ಅದರ ಸಮೂಹ ಕಂಪೆನಿಗಳು ಇಲ್ಲವೆ ಅಧೀನ ಸಂಸ್ಥೆಗಳಿಂದ ಪೆಗಸಸ್‌ ಬೇಹು ತಂತ್ರಾಂಶ ಖರೀದಿಸಿ, ಪರವಾನಗಿ ನೀಡಿ ಮತ್ತು ಅಥವಾ ಅದನ್ನು ಬಳಕೆ ಮಾಡಿವೆಯೇ?

- ಕೇಂದ್ರ ಸರ್ಕಾರ ಅದರ ಯಾವುದೇ ಏಜೆನ್ಸಿಗಳು ಭಾರತೀಯ ನಾಗರಿಕರ ಮೇಲೆ ಪ್ರಯೋಗಿಸಲೆಂದು ಎನ್‌ಎಸ್‌ಒ ಗ್ರೂಪ್‌ ಅಥವಾ ಅದರ ಸಮೂಹ ಕಂಪೆನಿಗಳು ಇಲ್ಲವೆ ಅಧೀನ ಸಂಸ್ಥೆಗಳಿಂದ ಬೇರೆ ಹೆಸರಿನ ಬೇಹು- ತಂತ್ರಾಂಶ ಸಾಧನಗಳನ್ನು ಖರೀದಿಸಿ, ಪರವಾನಗಿ ನೀಡಿ ಮತ್ತು ಅಥವಾ ಅದನ್ನು ಬಳಕೆ ಮಾಡಿವೆಯೇ?

- ಭಾರತೀಯ ನಾಗರಿಕರ ಮೇಲೆ ಬಳಸಲು ಬೇಹು ತಂತ್ರಾಂಶ, ಹ್ಯಾಕಿಂಗ್ ಅಥವಾ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆ ಪೂರೈಕೆಗಾಗಿ ವಿದೇಶಿ ಕಂಪನಿಗಳೊಂದಿಗೆ ಯಾವುದೇ ಒಪ್ಪಂದ, ಒಡಂಬಡಿಕೆ, ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದರೆ ಅದನ್ನು ಹಾಜರುಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು.

- ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಅಥವಾ ಬೇಹುಗಾರಿಕೆಗೆ ಒಳಪಟ್ಟಿದ್ದ ಜನರ ಪಟ್ಟಿಯಲ್ಲಿನ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕು. ಪಟ್ಟಿ ತಯಾರಿಸಿದವರ ವಿವರಗಳು, ಅವರ ಹೆಸರು ನೀಡಿದವರ ಮಾಹಿತಿ ಹಾಗೂ ಪಟ್ಟಿಯಲ್ಲಿರುವ ಪ್ರತಿಯೊಬ್ಬ ನಾಗರಿಕರ ವಿವರಗಳು ದೊರೆಯಬೇಕು.

ಪೆಗಸಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ನಾಲ್ಕನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಇದಕ್ಕೂ ಮುನ್ನ, ವಕೀಲರಾದ ಎಂಎಲ್ ಶರ್ಮಾ, ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್ ಮತ್ತು ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್ ಕೂಡ ಹಗರಣದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆ ಇದೇ ಗುರುವಾರ ನಡೆಯಲಿದೆ. ಇದಲ್ಲದೆ ಪೆಗಸಸ್‌ ಗೂಢಚರ್ಯೆಗೆ ನೇರವಾಗಿ ತುತ್ತಾದ ಐವರು ಪತ್ರಕರ್ತರು ಕೂಡ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Related Stories

No stories found.
Kannada Bar & Bench
kannada.barandbench.com