ಈಜಿಪುರ-ಕೇಂದ್ರೀಯ ಸದನ ಮೇಲ್ಸೇತುವೆ: ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿಂಪ್ಲೆಕ್ಸ್‌ಗೆ ಹೈಕೋರ್ಟ್‌ ನಿರ್ದೇಶನ

ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ನೀಡಿದರೆ ನಾವು ನಿಮ್ಮ ವಾದ ಪರಿಗಣಿಸುತ್ತೇವೆ ಎಂದು ಸೋಂಧಿ ಅವರನ್ನು ಕುರಿತು ಪೀಠ ಹೇಳಿತು. ಇದಕ್ಕೆ ಒಪ್ಪಿದ ಸೋಂಧಿ ಸೋಮವಾರಕ್ಕೆ ವಿಚಾರಣೆ ಮುಂದೂಡುವಂತೆ ಕೋರಿದರು.
BBMP and Karnataka HC
BBMP and Karnataka HC

ಬೆಂಗಳೂರಿನ ಕೋರಮಂಗಲದಲ್ಲಿ ನಿರ್ಮಾಣ ಹಂತದಲ್ಲಿರುವ ಈಜಿಪುರ-ಕೇಂದ್ರೀಯ ಸದನ ಮೇಲ್ಸೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಂಪ್ಲೆಕ್ಸ್‌ ಇನ್ಪ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ ಸೋಮವಾರ ಅಫಿಡವಿಟ್‌ ಸಲ್ಲಿಸಬೇಕು ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಮೇಲ್ಸೇತುವೆ ಕಾಮಗಾರಿ ವಿಳಂಬ ಪ್ರಶ್ನಿಸಿ ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ಅವರಿದ್ದ ಪೀಠ ನಡೆಸಿತು.

“ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನೂತನ ಏಜೆನ್ಸಿ ನೇಮಕ ಮಾಡುವುದು ಮತ್ತು ಹೊಸ ಏಜೆನ್ಸಿಯನ್ನು ಬಾಕಿ ಕೆಲಸ ಮಾಡಲು ನೇಮಕ ಮಾಡುವ ಪ್ರಕ್ರಿಯೆಯಿಂದ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆ ಎಂಬುದನ್ನು ಪರಿಗಣಿಸಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸವನ್ನು ತುರ್ತಾಗಿ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಅಫಿಡವಿಟ್‌ ಸಲ್ಲಿಸಲು ಸಿಂಪ್ಲೆಕ್ಸ್‌ ಇನ್ಪ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ಗೆ ಅನುಮತಿಸುತ್ತಿದ್ದೇವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ನಿರ್ದಿಷ್ಟ ಕಾಲಮಿತಿಯೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ನ್ಯಾಯಾಲಯದ ಮುಂದೆ ವಾಗ್ದಾನ ನೀಡಲು ಸಿಂಪ್ಲೆಕ್ಸ್‌ ಪರ ವಕೀಲರು ಒಪ್ಪಿದ್ದಾರೆ. ತಡ ಮಾಡದೇ ಕಾಮಗಾರಿ ಆರಂಭವಾಗಬೇಕು. ಗುತ್ತಿಗೆ ವಜಾ ಮಾಡಿರುವ ಹಿನ್ನೆಲೆಯಲ್ಲಿ ಈಗ ಸಿಂಪ್ಲೆಕ್ಸ್‌ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದಾಗಿ ಹೇಳುತ್ತಿರುವುದರಿಂದ ಅವರ ಗುತ್ತಿಗೆ ಮುಂದುವರಿಸಬಹುದೇ ಎಂಬುದರ ಕುರಿತು ಸೂಚನೆ ಪಡೆಯುವಂತೆ ಬಿಬಿಎಂಪಿಗೆ ಪೀಠ ನಿರ್ದೇಶಿಸಿತು.

ಟ್ರಾಫಿಕ್‌ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೇಲ್ಸೇತುವೆ ಕಾಮಗಾರಿ ತುರ್ತಾಗಿ ಮುಗಿಯಬೇಕು ಎಂಬುದು ನಮ್ಮ ಕಳಕಳಿ. 2022ರ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ, ನಾವು ಕೆಲಸದ ಮೇಲೆ ನಿಗಾ ಇಡುತ್ತೇವೆ ಎಂದು ಪೀಠವು ಮೌಖಿಕವಾಗಿ ಸಿಂಪ್ಲೆಕ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರಿಗೆ ಸೂಚಿಸಿತು.

ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಮಾಡಿ, ಸಾರ್ವಜನಿಕ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಯೋಜನೆಯ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ಪ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಫೆಬ್ರವರಿ 18ರಂದು ನಡೆದಿದ್ದ ವಿಚಾರಣೆಯಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಿಂಪ್ಲೆಕ್ಸ್‌ ಸಲ್ಲಿಸಿದ್ದ ಮಧ್ಯಪ್ರವೇಶ ಮನವಿಯನ್ನು ಪೀಠವು ಇಂದು ವಿಚಾರಣೆ ನಡೆಸಿತು.

ಆದಿತ್ಯ ಸೋಂಧಿ ಅವರು “ಯೋಜನೆ ವಿಳಂಬಕ್ಕೆ ನಾವೊಬ್ಬರೇ ಕಾರಣವಲ್ಲ. ಕೆಲವು ಅನಿರ್ಬಂಧಿತ ಪರಿಸ್ಥಿತಿಯಿಂದಾಗಿ ಕಾಮಗಾರಿ ತಡವಾಗಿದೆ. ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದೆ. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಕಂಪೆನಿಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂಬುದನ್ನು ಪೀಠದಕ್ಕೆ ಗಮನಕ್ಕೆ ತರಲು ಬಿಬಿಎಂಪಿ ವಿಫಲವಾಗಿದೆ” ಎಂದರು.

Also Read
ಕಾಮಗಾರಿ ವಿಳಂಬ: ಸಿಂಪ್ಲೆಕ್ಸ್ ವಿರುದ್ಧ ಎಫ್‌ಐಆರ್‌ ದಾಖಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಇದಕ್ಕೆ ಪೀಠವು “ಪರಿಸ್ಥಿತಿಯನ್ನು ಆಧರಿಸಿ ನಾವು ಆದೇಶ ಮಾಡಿದ್ದೇವೆ. ಅಂಥ ಆದೇಶ ಮಾಡುವುದು ನಮಗೆ ಇಷ್ಟವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಮೇಲ್ಸೆತುವೆ ಪೂರ್ಣಗೊಳಿಸಬೇಕು. ನಿಮಗೆ ನೋಟಿಸ್‌ ನೀಡಲಾಗಿದೆಯೋ ಇಲ್ಲವೋ ಎಂಬುದು ನಮಗೆ ಸಂಬಂಧಿಸಿಲ್ಲ. ಯಾವಾಗ ನೀವು ಮುಂದೆ ಬರಲಿಲ್ಲವೋ ಆಗ ಎಫ್‌ಐಆರ್‌ ದಾಖಲಿಸುವಂತೆ ಆದೇಶ ಮಾಡಿದೆವು” ಎಂದಿತು.

ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ನೀಡಿದರೆ ನಾವು ನಿಮ್ಮ ವಾದವನ್ನು ಪರಿಗಣಿಸುತ್ತೇವೆ ಎಂದು ಸೋಂಧಿ ಅವರನ್ನು ಕುರಿತು ಪೀಠ ಹೇಳಿತು. ಇದಕ್ಕೆ ಒಪ್ಪಿದ ಸೋಂಧಿ ಅವರು ಸೋಮವಾರಕ್ಕೆ ವಿಚಾರಣೆ ಮುಂದೂಡುವಂತೆ ಕೋರಿದರು. ಇದಕ್ಕೆ ಪೀಠವು ಸಮ್ಮತಿಸಿತು.

Related Stories

No stories found.
Kannada Bar & Bench
kannada.barandbench.com