ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ-ಕಮಲನಾಥ್, ನರೇಂದ್ರ ತೋಮರ್ ವಿರುದ್ಧ ಎಫ್ಐಆರ್‌ಗೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ

ಮಾಜಿ ಸಿಎಂ ಕಮಲನಾಥ್ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
Kamal Nath and Narendra Singh Tomar
Kamal Nath and Narendra Singh Tomar

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದಾತಿಯಾ ಮತ್ತು ಗ್ವಾಲಿಯರ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಮಧ್ಯಪ್ರದೇಶ ಹೈಕೋರ್ಟ್‌ ಈಚೆಗೆ ಸೂಚಿಸಿದೆ (ಆಶೀಶ್‌ ಪ್ರತಾಪ್‌ ವರ್ಸಸ್‌ ಮಧ್ಯ ಪ್ರದೇಶ ರಾಜ್ಯ ಮತ್ತು ಇತರರು).

ಮಾಜಿ ಸಿಎಂ ಕಮಲನಾಥ್‌ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕೋವಿಡ್‌ ಶಿಷ್ಟಾಚಾರ ಉಲ್ಲಂಘಿಸುವ ಮೂಲಕ ಸಂಜ್ಞೇಯ ಅಪರಾಧವನ್ನು ಮಾಡಿದ್ದಾರೆ ಎಂಬ ಆರೋಪವನ್ನು ನ್ಯಾಯಾಲಯಕ್ಕೆ ತಿಳಿಸಲಾಯಿತು. ಚುನಾವಣಾ ಪ್ರಚಾರ ಸಭೆ ಆಯೋಜಿಸಿದ್ದ ಅಭ್ಯರ್ಥಿ ಮತ್ತು ಸಂಘಟಕರ ವಿರುದ್ಧ ಇದಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ತೋಮರ್‌ ಮತ್ತು ಕಮಲನಾಥ್‌ ವಿರುದ್ಧ ದೂರು ದಾಖಲಿಸಿರಲಿಲ್ಲ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅಂಕುರ್‌ ಮೋದಿ ಅವರು ನಾಥ್‌ ಮತ್ತು ತೋಮರ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಪೀಠಕ್ಕೆ ತಿಳಿಸಿದರು. ಇದನ್ನು ಕಾರ್ಯರೂಪಕ್ಕೆ ತರುವಂತೆ ಗ್ವಾಲಿಯರ್‌ ಮತ್ತು ದಾತಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನ್ಯಾಯಾಲಯ ಸೂಚಿಸಿತು. ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

“ಪ್ರಚಾರದ ಹಕ್ಕು ಹಾಗೂ ಆರೋಗ್ಯ ಮತ್ತು ಜೀವನದ ಹಕ್ಕಿನ ನಡುವಿನ ಹೋರಾಟದಲ್ಲಿ ಆರೋಗ್ಯ ಮತ್ತು ಜೀವನದ ಹಕ್ಕಿಗೆ ಪ್ರಥಮ ಆದ್ಯತೆ ನೀಡುವುದು ಸಾಮಾನ್ಯ. ಮತಕೋರುವ ಮತ್ತು ಪ್ರಚಾರದ ಹಕ್ಕಿಗಿಂತ ಆರೋಗ್ಯ ಮತ್ತು ಜೀವನದ ಹಕ್ಕು ಹೆಚ್ಚು ಉನ್ನತವೂ, ಪವಿತ್ರವೂ ಹಾಗೂ ಅಮೂಲ್ಯವಾದದ್ದಾಗಿದೆ. ಆದ್ದರಿಂದ, ಮತದಾರರ ಆರೋಗ್ಯ ಮತ್ತು ಜೀವನದ ಹಕ್ಕಿನೆದುರಿಗೆ ಅಭ್ಯರ್ಥಿಯ ಪ್ರಚಾರದ ಹಕ್ಕು ತಲೆಬಾಗಬೇಕಿದೆ.” ಎಂದು ಪೀಠ ಹೇಳಿದೆ.

ಕೋವಿಡ್‌ ಶಿಷ್ಟಾಚಾರದ ವ್ಯಾಪಕ ಉಲ್ಲಂಘನೆಯ ವಿಚಾರದಲ್ಲಿ ಮೂಕ ಸಾಕ್ಷಿಯಾಗಲು ಬಯಸುವುದಿಲ್ಲ ಎಂದಿರುವ ನ್ಯಾಯಪೀಠವು ವರ್ಚುವಲ್‌ ಪ್ರಚಾರ ಸಭೆ ನಡೆಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇರುವಾಗ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ತಮ್ಮ ವ್ಯಾಪ್ತಿಯಲ್ಲಿ ಭೌತಿಕ ರಾಜಕೀಯ ಸಭೆಗೆ ಅನುಮತಿಸುವಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಭಾರತೀಯ ಚುನಾವಣಾ ಆಯೋಗವು ಪತ್ರ ಮುಖೇನ ಒಪ್ಪಿಗೆ ಸೂಚಿಸಿದ ಬಳಿಕ ಮಾತ್ರ ಮ್ಯಾಜಿಸ್ಟ್ರೇಟ್‌ ಅನುಮತಿ ಜಾರಿಯಾಗಲಿದೆ.

Also Read
ಕೋವಿಡ್ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಬಿಷಪ್ ಮುಲಕ್ಕಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

“ಭೌತಿಕ ಸಭೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಚುನಾವಣಾ ಆಯೋಗವು ಅನುಮತಿ ನೀಡಿದ್ದರೂ ಸಹ ಸಭೆಯಲ್ಲಿ ಭಾಗವಹಿಸುವ ಜನರನ್ನು ರಕ್ಷಿಸುವ ದೃಷ್ಟಿಯಿಂದ ಸಭೆಯಲ್ಲಿ ಸೇರುವ ಜನರ ಎರಡು ಪಟ್ಟು ಫೇಸ್‌ ಮಾಸ್ಕ್ ಗಳು ಮತ್ತು ಸ್ಯಾನಿಟೈಜರ್‌ಗಳನ್ನು ಖರೀದಿಸಲು ಸಾಕಾಗುವಷ್ಟು ಹಣವನ್ನು ಅಭ್ಯರ್ಥಿಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಠೇವಣಿ ಇರಿಸಿದ ನಂತರವೇ ಸಭೆ ನಡೆಸಬಹುದಾಗಿದೆ. ಸಭೆ ಪ್ರಾರಂಭವಾಗುವುದಕ್ಕೂ ಮೊದಲು ಎಲ್ಲಾ ಸದಸ್ಯರಿಗೆ ಫೇಸ್‌ ಮಾಸ್ಕ್‌ಗಳು ಮತ್ತು ಸ್ಯಾನಿಟೈಜರ್‌ಗಳನ್ನು ವಿತರಿಸುವ ಸಂಬಂಧ ವೈಯಕ್ತಿಕವಾಗಿ ಹೊಣೆಗಾರನಾಗಿರುತ್ತೇನೆ ಎಂದು ಅಭ್ಯರ್ಥಿಯು ಅಫಿಡವಿಟ್‌ನಲ್ಲಿ ಉಲ್ಲೇಖಿಸಬೇಕಿದೆ.”

ಮಧ್ಯಪ್ರದೇಶ ಹೈಕೋರ್ಟ್‌

ಅರ್ಜಿದಾರರನ್ನು ವಕೀಲರಾದ ವೀರ್‌ ಸಿಂಗ್‌ ಸಿಸೋಡಿಯಾ ಮತ್ತು ಸುರೇಶ್‌ ಅಗರ್ವಾಲ್‌ ಪ್ರತಿನಿಧಿಸಿದ್ದರೆ ಅಡ್ವೊಕೇಟ್‌ ಜನರಲ್‌ ಪುರುಷೇಂದ್ರ ಕೌರವ್‌ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅಂಕುರ್‌ ಮೋದಿ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರವೀಣ್‌ ನೇವಾಸ್ಕರ್‌ ಅವರು ಭಾರತ ಸರ್ಕಾರವನ್ನು ಪ್ರತಿನಿಧಿಸಿದ್ದರು. ವಕೀಲ ಅಲೋಕ್‌ ಕಟಾರೆ ಅವರು ಇಬ್ಬರು ಪ್ರತಿವಾದಿಗಳನ್ನು ಪ್ರತಿನಿಧಿಸಿದರೆ, ವಕೀಲರಾದ ಸಂಜಯ್‌ ದ್ವಿವೇದಿ, ರಾಜು ಶರ್ಮಾ ಮತ್ತು ವಿ ಶರ್ಮಾ ಅವರು ಅಮಿಕಸ್‌ ಕ್ಯೂರಿ ಆಗಿದ್ದಾರೆ. ಇಂದು ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

Kannada Bar & Bench
kannada.barandbench.com