ಚುನಾವಣೆಗೆ ಅನುಮತಿಸುವುದರಿಂದ ಆಗುವ ಅಪಾಯ ಅರಿಯಲು ಚುನಾವಣಾ ಆಯೋಗ, ನ್ಯಾಯಾಲಯ, ಸರ್ಕಾರ ವಿಫಲ: ಅಲಾಹಾಬಾದ್‌ ಹೈಕೋರ್ಟ್‌

ಕೋವಿಡ್‌ ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ಮೇಲೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿರುವ ಎರಡನೇ ಘಟನೆ ಇದಾಗಿದೆ.
Allahabad High Court
Allahabad High Court
Published on

ಹಲವು ರಾಜ್ಯಗಳಲ್ಲಿ ಉಪಚುನಾವಣೆ, ವಿಧಾನಸಭಾ ಚುನಾವಣೆ ಹಾಗೂ ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಅನುಮತಿ ನೀಡುವುದರಿಂದ ಆಗುವ ಅಪಾಯಕಾರಿ ಪರಿಣಾಮ ಅರಿಯಲು ಭಾರತೀಯ ಚುನಾವಣಾ ಆಯೋಗ, ಉನ್ನತ ನ್ಯಾಯಾಲಯಗಳು ಮತ್ತು ಸರ್ಕಾರ ವಿಫಲವಾಗಿವೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಮಂಗಳವಾರ ಹೇಳಿದೆ (ಪ್ರತೀಕ್‌ ಜೈನ್‌ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ).

ಕಳೆದ ವರ್ಷ ಕೊರೊನಾ ವೈರಸ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಕ್ಕೆ ಹಬ್ಬಿರಲಿಲ್ಲ. ಆದರೆ, ಈಗ ಅದು ಗ್ರಾಮಗಳಲ್ಲಿ ಹರಡಿಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

“ನಗರ ಪ್ರದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗದ ಜನರಿಗೆ ಪರೀಕ್ಷೆ ನಡೆಸಿ, ವೈರಾಣು ಪತ್ತೆ ಮಾಡಿ ಅವರಿಗೆ ಚಿಕಿತ್ಸೆ ನೀಡುವುದು ಅತ್ಯಂತ ತ್ರಾಸದಾಯಕ ಕೆಲಸ. ಈ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧವಾಗಿಲ್ಲ ಮತ್ತು ಅದನ್ನು ನಿಭಾಯಿಸುವಷ್ಟು ಸಂಪನ್ಮೂಲವು ಅದರ ಬಳಿ ಇಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಘಾಜಿಯಾಬಾದ್‌ನ ಸಿಹಾನಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಅಪರಾಧಕ್ಕೆ ಗುರಿಯಾಗಿರುವ ಆರೋಪಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ ನ್ಯಾಯಮೂರ್ತಿ ಸಿದ್ಧಾರ್ಥ್‌ ಅವರಿದ್ದ ಏಕಸದಸ್ಯ ಪೀಠವು ಮೇಲಿನ ವಿಚಾರಗಳನ್ನು ಪ್ರಸ್ತಾಪಿಸಿದೆ.

ಸದರಿ ಪ್ರಕರಣದಲ್ಲಿ ಬಂಧನವಾದರೆ ಕೊರೊನಾ ವೈರಸ್‌ಗೆ ತುತ್ತಾಗುವ ಸಾಧ್ಯತೆ ಉಲ್ಲೇಖಿಸಿ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿದ್ದರು. ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಕೋವಿಡ್‌ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂಬುದರ ಮೇಲೆ ಪೀಠ ಗಮನವಿಟ್ಟಿತ್ತು.

“ಅದಾಗ್ಯೂ, ರಾಜ್ಯದ ಹಳ್ಳಿಗಳಲ್ಲಿ ಅಪರಾಧಗಳ ಸರಾಸರಿಯು ಹೆಚ್ಚಾಗಿದೆ. ಪಂಚಾಯತ್ ಚುನಾವಣೆಯ ನಂತರ ಹಳ್ಳಿಗಳ ಒಟ್ಟಾರೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಹೆಚ್ಚಿನ ಸಂಖ್ಯೆಯ ಆರೋಪಿಗಳು ಸೋಂಕಿಗೆ ಒಳಗಾಗಬಹುದು ಮತ್ತು ಅವರಲ್ಲಿ ಸೋಂಕು ಪತ್ತೆಯಾಗದಿರಬಹುದು” ಎಂದು ಪೀಠ ಹೇಳಿದೆ.

Also Read
ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ನಿಯಮಗಳ ಉಲ್ಲಂಘನೆಗೆ ಮದ್ರಾಸ್‌ ಹೈಕೋರ್ಟ್‌ ಕೆಂಡಾಮಂಡಲ

“ಆರೋಪಿಯು ಬಂಧನ ಅಥವಾ ಬಂಧನದ ನಂತರ ಕೊರೊನಾ ವೈರಸ್‌ಗೆ ತುತ್ತಾಗಿ, ಬಳಿಕ ಪೊಲೀಸರ ಸಂಪರ್ಕದ ಮೂಲಕ ನ್ಯಾಯಾಲಯ, ಕಾರಾಗೃಹ ಸಿಬ್ಬಂದಿಗೆ ತಗುಲುವುದು ಅಥವಾ ಅದೇ ತಿರುವುಮುರುವಾಗುವ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಆಧಾರವನ್ನಾಗಿ ಪರಿಗಣಿಸಲಾಗಿದೆ” ಎಂದು ಮನವಿಗೆ ನ್ಯಾಯಾಲಯ ಸಮ್ಮತಿಸಿದೆ.

ಕೋವಿಡ್‌ ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಎರಡನೇ ಘಟನೆ ಇದಾಗಿದೆ. ಭಾರತದಲ್ಲಿನ ಇಂದಿನ ಕೋವಿಡ್‌ ಪರಿಸ್ಥಿತಿಗೆ ಚುನಾವಣಾ ಆಯೋಗ ಕಾರಣವಾಗಿದೆ. ಇದಕ್ಕಾಗಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಪ್ರಕರಣ ಏಕೆ ದಾಖಲಿಸಬಾರದು ಎಂದು ಖಾರವಾಗಿ ಈ ಹಿಂದೆ ಮದ್ರಾಸ್‌ ಹೈಕೋರ್ಟ್‌ ಪ್ರಶ್ನಿಸಿತ್ತು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆಯೋಗದ ಮನವಿಯನ್ನು ವಜಾಗೊಳಿಸಿತ್ತು.

Kannada Bar & Bench
kannada.barandbench.com