'ಇಂಡಿಯಾʼ ಒಕ್ಕೂಟ ವಿವಾದ: ರಾಜಕೀಯ ಮೈತ್ರಿ ನಿಯಂತ್ರಣ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗ

ಈ ವಾದ ಮಂಡನೆಯು ಕೇವಲ ತನ್ನ ಪಾತ್ರಕ್ಕೆ ಸಂಬಂಧಿಸಿದ್ದಾಗಿದ್ದು ರಾಜಕೀಯ ಪಕ್ಷಗಳು 'ಇಂಡಿಯಾ' ಎಂಬ ಸಂಕ್ಷಿಪ್ತ ರೂಪವನ್ನು ಬಳಸುವ ಕಾನೂನುಬದ್ಧತೆಯ ಅಭಿವ್ಯಕ್ತಿಯಾಗಿ ಇದನ್ನು ಅರ್ಥೈಸಬಾರದು ಎಂದು ಇಸಿಐ ಸ್ಪಷ್ಟಪಡಿಸಿದೆ.
Election
Election

ರಾಜಕೀಯ ಪಕ್ಷಗಳು ಇಂಡಿಯಾ ಎಂಬ ಸಂಕ್ಷಿಪ್ತ ರೂಪ ಬಳಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಮುಂದೆ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗವು (ಇಸಿಐ) ರಾಜಕೀಯ ಮೈತ್ರಿಗಳನ್ನು ನಿಯಂತ್ರಿಸುವ ಅಧಿಕಾರ ತನಗೆ ಇಲ್ಲ ಎಂದು ಹೇಳಿದೆ.

ಜನಪ್ರತಿನಿಧಿ ಕಾಯಿದೆ- 1951ರ ಅಡಿ  "ರಾಜಕೀಯ ಪಕ್ಷ"ವೊಂದರ ವ್ಯಕ್ತಿಗಳನ್ನು ಅಥವಾ ಸಂಘ ಸಂಸ್ಥೆಗಳ ಒಕ್ಕೂಟಗಳನ್ನು ನೋಂದಾಯಿಸುವ ಅಧಿಕಾರ ಮಾತ್ರ ತನಗೆ ಇದೆ ಎಂದು ಅದು ಹೇಳಿದೆ.

ಮುಂದುವರೆದು ರಾಜಕೀಯ ಮೈತ್ರಿಯನ್ನು ಜನಪ್ರತಿನಿಧಿ ಕಾಯಿದೆ ಅಥವಾ ಸಂವಿಧಾನದ ಅಡಿ ನಿಯಂತ್ರಿತ ಘಟಕವಾಗಿ ಗುರುತಿಸಲಾಗಿಲ್ಲ ಎಂದು ಇಸಿಐ ವಿವರಿಸಿದೆ.

Also Read
ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರು: ಪಿಐಎಲ್‌ ವಿಚಾರಣೆಗೆ ಸುಪ್ರೀಂ ನಕಾರ

”ಜನಪ್ರತಿನಿಧಿ ಕಾಯಿದೆ, 1951ರ (ಆರ್‌ಪಿ ಕಾಯಿದೆ) ಸೆಕ್ಷನ್ 29 ಎ ಪ್ರಕಾರ ರಾಜಕೀಯ ಪಕ್ಷದ ಸಂಸ್ಥೆಗಳು ಅಥವಾ ವ್ಯಕ್ತಿಗಳ ಸಂಘಗಳನ್ನು ನೋಂದಾಯಿಸುವ ಅಧಿಕಾರವನ್ನು ತಾನು ಹೊಂದಿದ್ದು ರಾಜಕೀಯ ಮೈತ್ರಿಯನ್ನು ಜನಪ್ರತಿನಿಧಿ ಕಾಯಿದೆ ಅಥವಾ ಸಂವಿಧಾನದ ಅಡಿ ನಿಯಂತ್ರಿಸಬಹುದಾದ ಘಟಕವಾಗಿ ಗುರುತಿಸಲಾಗಿಲ್ಲ ” ಎಂದು ಅದು ತಿಳಿಸಿದೆ.

ರಾಜಕೀಯ ಮೈತ್ರಿಗಳು ಕಾನೂನಾತ್ಮಕ ಸಂಸ್ಥೆಗಳಲ್ಲ. ಅವುಗಳ ಕಾರ್ಯಚಟುವಟಿಕೆ ನಿಯಂತ್ರಿಸುವಂತೆ ಇಸಿಐಯನ್ನು ಕಡ್ಡಾಯಗೊಳಿಸುವ ಯಾವುದೇ ಶಾಸನಬದ್ಧ ನಿಬಂಧನೆಗಳಿಲ್ಲ ಎಂದು ಡಾ.ಜಾರ್ಜ್ ಜೋಸೆಫ್ ಥೆಂಪ್ಲಾನ್‌ಗಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಇಸಿಐ ಅವಲಂಬಿಸಿದೆ.

ಪ್ರಸಕ್ತ ಹೇಳಿಕೆಯು ಕೇವಲ ತನ್ನ ಪಾತ್ರಕ್ಕೆ ಮಾತ್ರ ಸಂಬಂಧಿಸಿದ್ದಾಗಿದ್ದು ಇದನ್ನು ರಾಜಕೀಯ ಪಕ್ಷಗಳು ಇಂಡಿಯಾ ಎಂಬ ಸಂಕ್ಷಿಪ್ತ ರೂಪವನ್ನು ಬಳಸುವ ಕಾನೂನುಬದ್ಧತೆಯ ಕುರಿತಾದ ತನ್ನ ಅಭಿವ್ಯಕ್ತಿಯಾಗಿ ಅರ್ಥೈಸಬಾರದು ಎಂದು ಇಸಿಐ ಸ್ಪಷ್ಟಪಡಿಸಿದೆ.

ಗಿರೀಶ್ ಭಾರದ್ವಾಜ್ ಎಂಬ ಸಾಮಾಜಿಕ ಕಾರ್ಯಕರ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಲಾಗಿದೆ.  ವಿರೋಧ ಪಕ್ಷಗಳು ಇಂಡಿಯಾ- ಐಎನ್‌ಡಿಐಎ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಸರ್ವರನ್ನೂ ಒಳಗೊಳ್ಳುವ ಮೈತ್ರಿಕೂಟ) ಎಂಬ ಸಂಕ್ಷಿಪ್ತ ರೂಪವನ್ನು ಸ್ವಾರ್ಥ ಕೃತ್ಯದ ಭಾಗವಾಗಿ ಬಳಸುತ್ತಿವೆ ಎಂದು ಅವರು ಆರೋಪಿಸಿದ್ದರು. ಈ ರೀತಿಯ ಹೆಸರಿಟ್ಟುಕೊಳ್ಳುವುದು "2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಮತ ಚಲಾವಣೆ  ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು" ಎಂದು ಅವರು ದೂರಿದ್ದರು.

ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆ) ಕಾಯಿದೆ- 1950ರ ಸೆಕ್ಷನ್ 2 ಮತ್ತು 3 ರ ಅಡಿಯಲ್ಲಿ ಇಂಡಿಯಾ ಎಂಬ ಹೆಸರಿನ ಬಳಕೆ ನಿಷೇಧಿಸಲಾಗಿದೆ ಎನ್ನುವುದು ಅರ್ಜಿದಾರರ ವಾದ.

ಈ ಕುರಿತು ಆಗಸ್ಟ್‌ನಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 26 ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಇಸಿಐ ಪ್ರತಿಕ್ರಿಯೆಯನ್ನೂ ಕೋರ್ಟ್ ಕೇಳಿತ್ತು. ಪ್ರಕರಣದ ಸಂಬಂಧ ಮಂಗಳವಾರ ಹೈಕೋರ್ಟ್ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com